ಮಹಿಳಾ ಸಬಲೀಕರಣದ ಉದ್ದೇಶಕ್ಕಾಗಿ ಛತ್ತೀಸ್‌ಗಡ ಸರ್ಕಾರ ‘ಮಹತಾರಿ ವಂದನ್ ಯೋಜನೆ’ಯನ್ನು ಜಾರಿ ಮಾಡಿತ್ತು. ಅರ್ಹ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ₹1000 ದೊರಕುವ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ವಿಚಿತ್ರವೆಂದರೆ, ಹಾಲಿವುಡ್ ನಟಿ ಸನ್ನಿ ಲಿಯೋನ್ ಈ ಯೋಜನೆಯ ಫಲಾನುಭವಿಯಾಗಿದ್ದು, ಕಳೆದ 10 ತಿಂಗಳಿನಿಂದ ಅವರ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ.
ದಾಖಲೆಯಲ್ಲಿ ಜಾನಿ ಸಿನ್ಸ್ ಅವರ ಪತ್ನಿ ಫಲಾನುಭವಿ ಸನ್ನಿ ಲಿಯೋನ್ ಎಂದು ಹೆಸರಿಸಲಾಗಿದೆ. ವಂಚನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಸನ್ನಿ ಲಿಯೋನ್ ಹೆಸರಿನಲ್ಲಿ, ವೀರೇಂದ್ರ ಕುಮಾರ್ ಜೋಶಿ ಎಂಬಾತ ಬಸ್ತಾರ್‌ನಲ್ಲಿ ಆನ್‌ಲೈನ್ ಬ್ಯಾಂಕ್ ಖಾತೆಯನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದನು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ತಾರ್ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್. ಅವರು, “ಇದು ನಿಜವಾಗಿಯೂ ಮುಜುಗರದ ಸಂಗತಿ. ತಾಳೂರು ಗ್ರಾಮದ ಜೋಶಿ ಎಂಬವರು ತಪ್ಪು ಹೆಸರು ನೀಡಿ ಪ್ರತಿ ತಿಂಗಳು ₹1000 ಪಡೆಯುತ್ತಿದ್ದರು. ನಾವು ಬ್ಯಾಂಕ್ ಖಾತೆಯನ್ನು ಹೋಲ್ಡ್ ಮಾಡಿದ್ದು, ಅವರು ಪಡೆದ ₹10,000 ಹಿಂಪಡೆಯಲಾಗುವುದು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ. ಏಕೆಂದರೆ ಫಲಾನುಭವಿಗಳ ಗುರುತು ಮತ್ತು ಸರಿಯಾದ ಫಲಾನುಭವಿಗೆ ಸಿಗುತ್ತಿದೆ ಎಂದು ಸರಿಯಾಗಿ ಪರಿಶೀಲಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕಳೆದ 10 ತಿಂಗಳಿನಿಂದ ಹಣ ವರ್ಗಾವಣೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಂಚಕ ಜೋಶಿ ಅವರು ಫಲಾನುಭವಿ ಎಂದು ಹೆಸರು ನೋಂದಾಯಿಸಿದ ತಳೂರು ಗ್ರಾಮದ ನಿವಾಸಿಯಾಗಿದ್ದಾರೆ. ಆರೋಪಿ ಜೋಶಿ ರಾಜ್ಯದ ಜಗದಲ್‌ಪುರ ಪಟ್ಟಣದಲ್ಲಿರುವ ‘ಶ್ರೀರಾಮ್ ಫೈನಾನ್ಸ್’ ಎಂಬ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾರಿಸ್ ಅವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾದ ಮಹತಾರಿ ವಂದನ್ ಯೋಜನೆಯಡಿ ಮೊದಲ ಕಂತಿನ ₹1000 ಗಳನ್ನು ಮಾರ್ಚ್‌ನಲ್ಲಿ ವಿತರಿಸಲಾಯಿತು. ಸರ್ಕಾರದ ಯೋಜನೆಯ ಅನ್ವಯ 146 ಡೆವಲಪ್‌ಮೆಂಟ್ ಬ್ಲಾಕ್‌ಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಅರ್ಹ ವಿವಾಹಿತ ಮಹಿಳೆಯರು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ₹1000 ಪಡೆಯುತ್ತಿದ್ದಾರೆ. ಯೋಜನೆಯು, 21 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 70 ಲಕ್ಷ ಅರ್ಹ ವಿವಾಹಿತ ಮಹಿಳೆಯರಿಗೆ ಪ್ರಯೋಜನ ನೀಡುತ್ತದೆ.
ಇದನ್ನೂ ಓದಿ: ‘ಆಹಾರ ಅಸಮಾನತೆ’ ತೊಡೆದು ಹಾಕಿದ ಮಂಡ್ಯದ ಸಾಹಿತ್ಯ ಸಮ್ಮೇಳನ : 100 ವರ್ಷಗಳಲ್ಲಿ ಮೊದಲ ಬಾರಿಗೆ ಮಾಂಸಾಹಾರ ವಿತರಣೆ
‘ಆಹಾರ ಅಸಮಾನತೆ’ ತೊಡೆದು ಹಾಕಿದ ಮಂಡ್ಯದ ಸಾಹಿತ್ಯ ಸಮ್ಮೇಳನ : 100 ವರ್ಷಗಳಲ್ಲಿ ಮೊದಲ ಬಾರಿಗೆ ಮಾಂಸಾಹಾರ ವಿತರಣೆ


