ಛತ್ತೀಸ್‌ಗಢದ ಬಿಜಾಪುರದಲ್ಲಿ ರಸ್ತೆ ನಿರ್ಮಾಣ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ವರದಿ ಮಾಡಿದ ಕೆಲವೇ ದಿನಗಳಲ್ಲಿ ಸ್ವತಂತ್ರ ಪತ್ರಕರ್ತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ, ಕೊಲೆ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಇನ್ನೂ ಕೆಲ ವರದಿಗಳು ಮೂವರನ್ನು ಬಂಧಿಸಲಾಗಿದೆ ಎಂದಿದೆ.
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವಿನ ಸಂಘರ್ಷದ ಕುರಿತು ವರದಿ ಮಾಡಿ ಜನಮಣ್ಣನೆ ಗಳಿಸಿದ್ದ ಪತ್ರಕರ್ತ ಮುಕೇಶ್ ಚಂದ್ರಕರ್ ಅವರು, ರಸ್ತೆ ನಿರ್ಮಾಣ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಇತ್ತೀಚೆಗೆ ವರದಿ ಮಾಡಿದ್ದರು. ಈ ಬೆನ್ನಲ್ಲೇ ರಸ್ತೆ ನಿರ್ಮಾಣದ ಗುತ್ತಿಗೆದಾರನ ಜಮೀನಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಕೇಶ್ ಅವರ ಶವ ಪತ್ತೆಯಾಗಿದೆ.
ಹೆದ್ದಾರಿ ಯೋಜನೆಯ ಭ್ರಷ್ಟಾಚಾರದ ಕುರಿತು ವರದಿ ಮಾಡಿದ ಬಳಿಕ ಮುಕೇಶ್ ಅವರಿಗೆ ಜೀವ ಬೆದರಿಕೆ ಇತ್ತು ಎಂದು ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಕಳೆದ ಬುಧವಾರ (ಜ.1) 36 ವರ್ಷದ ಮುಕೇಶ್ ಚಂದ್ರಕರ್ ಅವರು ನಾಪತ್ತೆಯಾಗಿದ್ದರು. ಈ ಸಂಬಂಧ ಅವರ ಸಹೋದರ ಟಿವಿ ಪತ್ರಕರ್ತ ಯುಕೇಶ್ ಚಂದ್ರಕರ್ ಅಂದೇ ಸಂಜೆ ದೂರು ದಾಖಲಿಸಿದ್ದರು. ಎರಡು ದಿನಗಳ ಬಳಿಕ ಶುಕ್ರವಾರ (ಜ.3) ಸಂಜೆ 6 ಗಂಟೆಯ ಹೊತ್ತಿಗೆ ಮುಕೇಶ್ ಅವರ ಶವ ಪತ್ತೆಯಾಗಿದೆ.
ಮುಕೇಶ್ ಅವರು ಬಿಜಾಪುರ ಜಿಲ್ಲೆಯ ಗಂಗಲೂರು-ನೆಲಸನಾರ್ ಗ್ರಾಮಗಳ ನಡುವಿನ ರಸ್ತೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ವರದಿ ಮಾಡಿದ್ದರು. ವರದಿ ಬಳಿಕ ಭ್ರಷ್ಟಾಚಾರದ ಕುರಿತು ತನಿಖೆ ಆದೇಶಿಸಲಾಗಿತ್ತು. ಆ ಬಳಿಕ ರಸ್ತೆ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರ ಸುರೇಶ್ ಚಂದ್ರಕರ್ ಮತ್ತು ಅವರ ಇಬ್ಬರು ಸಹೋದರರಿಂದ ಮುಕೇಶ್ ಅವರಿಗೆ ಬೆದರಿಕೆ ಇತ್ತು ಎಂದು ಸಹೋದರ ಯುಕೇಶ್ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
ಶುಕ್ರವಾರ ಸಂಜೆ ಬಿಜಾಪುರ ಜಿಲ್ಲೆಯ ಚಟ್ಟನಪಾರ ಬಸ್ತಿಯ ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಜಮೀನಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ರಕರ್ತ ಮುಕೇಶ್ ಅವರ ಶವ ಪತ್ತೆಯಾಗಿದೆ. ಮುಕೇಶ್ ಶವ ಪತ್ತೆಯಾದ ಜಾಗದಲ್ಲಿ ಕಾರ್ಮಿಕರ ವಸತಿಗೃಹಗಳಿವೆ ಮತ್ತು ಬ್ಯಾಡ್ಮಿಂಟನ್ ಆಡಲು ಬಳಸಲಾಗುತ್ತಿತ್ತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಕೊಲೆ ಆರೋಪದ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಮಾಹಿತಿ ನೀಡಿಲ್ಲ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಡಿಜಿಟಲ್ ದತ್ತಾಂಶ ರಕ್ಷಣೆ : ಕರಡು ನಿಯಮಾವಳಿ ಪ್ರಕಟಿಸಿದ ಕೇಂದ್ರ ಸರ್ಕಾರ


