ಸುಪ್ರೀಂ ಕೋರ್ಟಿನ ವಿರುದ್ಧ ಹರ್ಷ ಮಂದರ್ ಆಡಿದ ಮಾತನ್ನು ವಿಚಾರಿಸದ ಹೊರತು ಅವರು ಬಿಜೆಪಿ ನಾಯಕರ ದ್ವೇಷದ ಭಾಷಣಗಳ ಬಗ್ಗೆ ನೀಡಿದ ಅರ್ಜಿಯನ್ನು ಇಂದು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನಾಯಕರ ದ್ವೇಷದ ಭಾಷಣಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಕೋರಿದ ಅರ್ಜಿದಾರರಲ್ಲಿ ಹರ್ಷ್ ಮಂದರ್ ಕೂಡಾ ಒಬ್ಬರು. ಕಳೆದ ವಾರ ಈಶಾನ್ಯ ದೆಹಲಿಯ ಹಿಂಸಾಚಾರದಲ್ಲಿ ದ್ವೇಷ ಭಾಷಣದ ಪಾತ್ರವಿದೆ ಎಂಬ ಆರೋಪಗಳಿವೆ. ಹಿಂಸಾಚಾರದಲ್ಲಿ 48 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜನವರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಹರ್ಷ ಮಂದರ್ ಅವರ ಭಾಷಣದಲ್ಲಿ ಅವರು ಉಚ್ಛ ನ್ಯಾಯಾಲಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಿ “ನೀವು ಸುಪ್ರೀಂ ಕೋರ್ಟ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದೀರಿ, ನಾವು ಈಗ ನಿಮ್ಮ ಮಾತನ್ನು ಕೇಳುವುದಿಲ್ಲ … ಸುಪ್ರೀಂ ಕೋರ್ಟ್ ಬಗ್ಗೆ ಹರ್ಷ ಮಂದರ್ ಹಾಗೆ ಭಾವಿಸಿದರೆ, ಅದನ್ನು ಮೊದಲು ವಿಚಾರಿಸುತ್ತೇವೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಹೇಳಿದ್ದಾರೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಹರ್ಷ ಮಂದರ್ ಅವರು ‘ನಮಗೆ ಸುಪ್ರೀಂ ಕೋರ್ಟ್‌ನಲ್ಲಿ ನಂಬಿಕೆಯಿಲ್ಲ ಆದರು ನಾವು ಅಲ್ಲಿಗೆ ಹೋಗಬೇಕಾಗಿದೆ’ ಎಂದು ಸಿಎಎ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದಾರೆ” ಎಂದು ಉಲ್ಲೇಖಿಸಿ ಅವರು ಹರ್ಷ ಮಂದರ್ ಸಲ್ಲಿಸಿದ್ದ ಅರ್ಜಿಯನ್ನು ಆಕ್ಷೇಪಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಭಾಷಣದ ಪ್ರತಿಲಿಪಿಯನ್ನು ಕೇಳಿದ್ದಾರೆ.
ಹರ್ಷ ಮಂದರ್, ಅರುಣಾ ರಾಯ್, ನಿಖಿಲ್ ಡೇ, ಇತಿಹಾಸಕಾರ ಇರ್ಫಾನ್ ಹಬೀಬ್, ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಹಾಗೂ ಕೆಲವು ಸಂಸ್ಥೆಗಳು ಸುಪ್ರೀಂ ಕೋರ್ಟ್ ನಲ್ಲಿ 2019 ರ ಪೌರತ್ವ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅದನ್ನು ರದ್ದು ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿವೆ.


