ಪಾಕಿಸ್ತಾನದ ಪರವಾಗಿ ಮಾತನಾಡುವುದು ತಪ್ಪು, ಅಂತಹ ಕ್ರಮಗಳು ದೇಶದ್ರೋಹಕ್ಕೆ ಸಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ‘ಯುದ್ಧದ ಅಗತ್ಯವಿಲ್ಲ’ ಎಂದು ಹೇಳಿದ್ದಕ್ಕಾಗಿ ಅವರು ವಿವಾದಕ್ಕೆ ಗುರಿಯಾದ ಕೆಲವೇ ದಿನಗಳ ನಂತರ ಅವರ ಹೇಳಿಕೆ ಬಂದಿದ್ದು, ಮಂಗಳೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂಬ ಆರೋಪ ಹೊರಿಸಿ ಯುಕನೊಬ್ಬನ್ನು ಹಿಂದುತ್ವ ಗುಂಪು ಹತ್ಯೆ ಮಾಡಿರುವ ಸಮಯದಲ್ಲೇ ಮತ್ತೊಮ್ಮೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, “ಮಂಗಳೂರಿನಲ್ಲಿ ನಡೆದ ಗುಂಪುಹತ್ಯೆ ಸಂಬಂಧ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪ ಕೂಡ ಕೇಳಿಬರುತ್ತಿದೆ. ಪಾಕಿಸ್ತಾನವನ್ನು ವಹಿಸಿಕೊಂಡು ಮಾತನಾಡುವುದು ಅಥವಾ ಘೋಷಣೆ ಕೂಗುವುದು ಅಪರಾಧ. ಅಂಥವರನ್ನು ಶಿಕ್ಷಿಸಲು ಕಾನೂನು ವ್ಯವಸ್ಥೆ ಇದೆ. ಆದರೆ, ಯಾರೋ ಒಂದಷ್ಟು ಮಂದಿ ಕಾನೂನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾಗುವುದು ಅಥವಾ ಕೊಲೆಗೈಯ್ಯುವುದು ಕೂಡ ಅಪರಾಧವೆ. ಈ ಎರಡಕ್ಕೂ ನಾವು ಅವಕಾಶ ನೀಡುವುದಿಲ್ಲ” ಎಂದಿದ್ದಾರೆ.
ಏಪ್ರಿಲ್ 27 ರಂದು, ಕೇರಳದ ವಯನಾಡಿನ ಪುಲ್ಪಲ್ಲಿ ಗ್ರಾಮದ ಮೂಲದ 23 ವರ್ಷದ ಅಶ್ರಫ್ ಮೇಲೆ ಮಂಗಳೂರಿನ ಹೊರವಲಯದಲ್ಲಿರುವ ಕುಡುಪು ಗ್ರಾಮದ ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಕೋಲುಗಳಿಂದ ಹಲ್ಲೆ ನಡೆಸಲಾಗಿತ್ತು. ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಿ ಗುಂಪೊಂದು ಅವರನ್ನು ಹೊಡೆದು ಕೊಂದಿದೆ ಎಂದು ವರದಿಯಾಗಿದೆ. ಆಂತರಿಕ ರಕ್ತಸ್ರಾವ ಮತ್ತು ಆಘಾತದಿಂದ ಉಂಟಾದ ಗಾಯಗಳಿಂದಾಗಿ ಅಶ್ರಫ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 20 ಜನರನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ದೃಢಪಡಿಸಿದ್ದಾರೆ. “ಬಂಧಿತರು ಮಾತ್ರ ಘೋಷಣೆಯ ಬಗ್ಗೆ ಹೇಳಿದ್ದಾರೆ. ಮೃತ ವ್ಯಕ್ತಿ ಮತ್ತು ಅವರ ಹಿನ್ನೆಲೆಯ ಬಗ್ಗೆ ಪೊಲೀಸರು ಇನ್ನಷ್ಟು ತಿಳಿದುಕೊಳ್ಳುತ್ತಿದ್ದಾರೆ. ತನಿಖೆಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಅದನ್ನು ಪಕ್ಕಕ್ಕೆ ತಳ್ಳುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.
ಕುಡುಪು ಗುಂಪು ಹತ್ಯೆ ಪ್ರಕರಣ: ವಯನಾಡ್ ಮೂಲದ ಮೃತ ವ್ಯಕ್ತಿಯ ಶವ ಕೊಂಡೊಯ್ದ ಕುಟುಂಬಸ್ಥರು


