ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ಮರ್ಲೆ ಅಣ್ಣಯ್ಯ, “ಸರ್ವೇ ನಂಬರ್ 162ರ ಗೋಮಾಳ ಜಾಗದಲ್ಲಿ 21 ಜನ ದಲಿತರಿಗೆ 84 ಎಕರೆ ಜಮೀನು 1984-85ನೇ ಸಾಲಿನಲ್ಲಿ ಮಂಜೂರು ಮಾಡಲಾಗಿದ್ದು, ಅಲ್ಲಿ ದಲಿತರು ಈಗಲೂ ಸ್ವಾಧೀನದಲ್ಲಿದ್ದಾರೆ. ದಲಿತರಿಗೆ ಗ್ರಾಮದ ಪ್ರಬಲ ಜಾತಿ ಜನರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕೆಲ ರೈತರಿಗೆ ಆರ್ಥಿಕ ಸಮಸ್ಯೆ ಇರುವುದರಿಂದ ತಮಗೆ ಮಂಜೂರಾಗಿದ್ದ ಜಮೀನಿನಲ್ಲಿ ನಿರಂತರವಾಗಿ ಸಾಗುವಳಿ ಮಾಡಲು ಸಾಧ್ಯವಾಗಿಲ್ಲ. ಹಲವು ಕುಟುಂಬಗಳು ಉತ್ತಮವಾಗಿ ಕೃಷಿ ಮಾಡುತ್ತಿದ್ದು, ತಮ್ಮ ಜಮೀನಿನಲ್ಲಿ ಕಾಫಿ ಮತ್ತು ಅಡಿಕೆ ಗಿಡಗಳನ್ನು ಬೆಳೆಸಿ ಜೀವನ ಸಾಗಿಸುತ್ತಿದ್ದಾರೆ” ಎಂದು ತಿಳಿಸಿದರು.
“ದಲಿತರ ತೋಟಕ್ಕೆ ಅವರಿಲ್ಲದ ಸಮಯದಲ್ಲಿ ಅಲಸುಗೆ ಗ್ರಾಮದ ಪ್ರಬಲ ಜಾತಿ ಜನರು ಅಕ್ರಮವಾಗಿ ನುಗ್ಗಿ ಕಾಫಿ ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಿದ್ದಾರೆ. ವಿಷಯ ತಿಳಿದ ದಲಿತರು ಈ ಬಗ್ಗೆ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ, ದಲಿತರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿದರು.
“ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂರು ತಿಂಗಳಾದರೂ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ಆಗಿಲ್ಲ. ಸಂತ್ರಸ್ತ ದಲಿತರಿಗೆ ನ್ಯಾಯ ಸಿಗುವವರೆಗೂ ದಲಿತ ಸಂಘರ್ಷ ಸಮಿತಿ ಚಳವಳಿ ರೂಪಿಸಲು ಮುಂದಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ ಬಾಚಿಗನಹಳ್ಳಿ ಮತ್ತು ಪೂರ್ಣೇಶ್ ಉಪಸ್ಥಿತರಿದ್ದರು.


