ಆರು ಜನ ನಕ್ಸಲರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮುಖ್ಯವಾಹಿನಿ ತಲುಪಿ ಕಾನೂನು ಪ್ರಕಿಯೆಗೆ ಒಳಪಟ್ಟಿದ್ದಾರೆ. ಕರ್ನಾಟಕದ ಕೊನೆಯ ನಕ್ಸಲ್ ತಂಡದ ಏಕೈಕ ಹೋರಾಟಗಾರ ಕೋಟೆಹೊಂಡ ರವೀಂದ್ರ ಗುಂಪಿನಿಂದ ದೂರಾಗಿದ್ದರು; ಇಂದು (ಫೆ.1) ಅವರೂ ಕೂಡ ಮುಖ್ಯವಾಹಿನಿಗೆ ಬರಲಿದ್ದಾರೆ.
ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಇಂದು ಬೆಳಗ್ಗೆ 12 ಗಂಟೆಗೆ ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮುಖ್ಯವಾಹಿನಿಗೆ ಬರಲಿದ್ದಾರೆ.
6 ಜನ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದರೂ ರವೀಂದ್ರ ಕಾಡಿನಲ್ಲೇ ಉಳಿದಿದ್ದರು. ಇವರು ನಕ್ಸಲ್ ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರೀಕರ ವೇದಿಕೆ ಮುಖಂಡರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದೀಗ ಎರಡೂ ಸಮಿತಿಗಳ ಮಾತುಕತೆ ನಂತರ ರವೀಂದ್ರ ಅಂತಿಮವಾಗಿ ಮುಖ್ಯವಾಹಿನಿಗೆ ಮರಳಲು ಒಪ್ಪಿಕೊಂಡಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತವಾಗಿದ್ದ ರವೀಂದ್ರ ಈಗಾಗಲೇ ಮುಖ್ಯವಾಹಿನಿಗೆ ಬಂದಿರುವ ಮುಂಡಗಾರು ಲತಾ ತಂಡದಲ್ಲಿ ಸಕ್ರಿಯವಾಗಿದ್ದರು.
ಕಳೆದ ವರ್ಷ, ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಉಳಿದ ಹೋರಾಟಗಾರರ ಜೀವ ಉಳಿಸಬೇಕು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದರು. ದಲಿತರು, ಆದಿವಾಸಿಗಳು ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡುತ್ತಿರುವವರನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನವರಿ ಎಂಟರಂದು ನಡೆದ ಕಾರ್ಯಕ್ರಮದಲ್ಲಿ ನಕ್ಸಲ್ ನಾಯಕರಾದ ಮುಂಡಗಾರು ಲತಾ (ಮುಂಡಗಾರು ಶೃಂಗೇರಿ), ವನಜಾಕ್ಷಿ (ಬಾಳೆಹೊಳೆ ಕಳಸ), ಸುಂದರಿ (ಕುತ್ಲೂರು ದಕ್ಷಿಣ ಕನ್ನಡ), ಮಾರಪ್ಪ ಅರೋಲಿ (ಕರ್ನಾಟಕ), ವಸಂತ ಟಿ (ತಮಿಳುನಾಡು), ಎನ್. ಜೀಶಾ (ಕೇರಳ) ಮುಖ್ಯವಾಹಿನಿಗೆ ಮರಳಿದ್ದರು. ಇದೀಗ ಕೊನೆಯ ಸದಸ್ಯ ರವೀಂದ್ರ ಕೂಡ ಮುಖ್ಯವಾಹಿನಿಗೆ ಬರಲಿದ್ದಾರೆ.
ಮುಖ್ಯವಾಹಿನಗೆ ಬರುವಂತೆ ಮನವಿ ಮಾಡಿದ್ದ ರವೀಂದ್ರ ಕುಟುಂಬ
ಆರು ಜನ ನಕ್ಸಲರು ಜೊತೆ ರವೀಂದ್ರ ಮಾತ್ರ ಮುಖ್ಯವಾಹಿನಿಗೆ ಬಾರದೇ ಇದ್ದಿದ್ದು ರವೀಂದ್ರ ಅವರ ಕುಟುಂಬಕ್ಕೆ ಬೇಸರ ಮೂಡಿಸಿತ್ತು. ಅವರ ಕುಟುಂಬ ಈಗಲೂ ಶೃಂಗೇರಿಯ ಕಾಡಂಚಿನ ಗ್ರಾಮದಲ್ಲಿ ಬದುಕು ಸಾಗಿಸುತ್ತಿದೆ. ಕಾಡಿನ ನಡುವೆ ಇರುವ ಕೋಟೆಹೊಂಡ ಗ್ರಾಮ ಸಂಪೂರ್ಣ ನೆಲ ಸಮವಾಗಿದ್ದು ಇಲ್ಲಿ ರವೀಂದ್ರನ ಮನೆ ಇದೆ. ರವೀಂದ್ರ ಮುಖ್ಯವಾಹಿನಿಗೆ ಬಂದರೆ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಕುಟುಂಬದವರು ಮಾಧ್ಯಮಗಳಿಗೆ ಹಿಂದೆ ತಿಳಿಸಿದ್ದರು.
ಇದನ್ನೂ ಓದಿ; ಕರ್ನಾಟಕ ಸರ್ಕಾರದ ಐತಿಹಾಸಿಕ ನಡೆ; ಸಿಎಂ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಮರಳಿದ ಕಟ್ಟಕಡೆಯ ಸಶಸ್ತ್ರ ನಕ್ಸಲ್ ತಂಡ


