ದಲಿತ ಯುವಕರು ದೇಗುಲ ಪ್ರವೇಶಿಸಿದ್ದಕ್ಕೆ ಪೂಜೆ ನಿಲ್ಲಿಸಿದ್ದ ಚಿಕ್ಕಮಗಳೂರು ತಾಲೂಕಿನ ನರಸೀಪುರ ಗ್ರಾಮದ ತಿರುಮಲ ದೇವಸ್ಥಾನದಲ್ಲಿ ಶುಕ್ರವಾರ (ಡಿ.6) ಪೂಜೆ ಪುನರಾರಂಭಗೊಂಡಿದ್ದು, ದಲಿತರು ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.
ಪುರೋಹಿತರನ್ನು ಕರೆಸಿ ಪುಣ್ಯ ಮಾಡಿಸಿದ ಬಳಿಕ ಗ್ರಾಮದ ಅರ್ಚಕರು ಎಂದಿನಂತೆ ಪೂಜೆ ಆರಂಭಿಸಿದ್ದಾರೆ. ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದಲಿತ ಯುವಕರು ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನರಸೀಪುರ ಗ್ರಾಮದಲ್ಲಿ 240ಕ್ಕೂ ಹೆಚ್ಚು ಕುರುಬ ಸಮುದಾಯದ ಕುಟುಂಬಗಳಿದ್ದು, ಪರಿಶಿಷ್ಟ ಜಾತಿಯ (ಆದಿ ಕರ್ನಾಟಕ) 13 ಕುಟುಂಬಗಳಿವೆ. ದೇಗುಲ ಪ್ರವೇಶ ಕೇಳಿ ಪರಿಶಿಷ್ಟ ಜಾತಿಯ ಯುವಕರೊಬ್ಬರು ತಹಶೀಲ್ದಾರ್‌ಗೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಮಂಗಳವಾರ (ಡಿ.3) ಸಂಜೆ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಸುಮಂತ್ ಅವರು, ಇಬ್ಬರು ದಲಿತ ಯುವಕರನ್ನು ದೇಗುಲದ ಒಳಗೆ ಕರೆದೊಯ್ದಿದ್ದರು. ಅಂದು ದೇಗುಲದ ಕೀಲಿ ನೀಡಿದ್ದ ಗ್ರಾಮಸ್ಥರು ವಾಪಸ್ ಪಡೆದಿರಲಿಲ್ಲ.
ದಲಿತ ಯುವಕರು ದೇಗುಲ ಪ್ರವೇಶಿಸಿದ ಬಳಿಕ ಗ್ರಾಮಸ್ಥರು ಪ್ರತಿನಿತ್ಯದ ಪೂಜೆ ನಿಲ್ಲಿಸಿದ್ದರು. ಈ ಹಿನ್ನೆಲೆ, ಅಧಿಕಾರಿಗಳು ಗುರುವಾರ (ಡಿ.5.) ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದರು. ಎರಡು ದಿನ ಪೂಜೆ ನಿಂತಿದ್ದರಿಂದ ಶುಕ್ರವಾರ ಪುರೋಹಿತರನ್ನು ಕರೆಸಿ ಪುಣ್ಯ ಮಾಡಿಸಿದ್ದಾರೆ. ಬಳಿಕ ಪೂಜೆ ಪುನರಾರಂಭಗೊಂಡಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ದಲಿತ ಯುವಕರು ದೇಗುಲ ಪ್ರವೇಶ ಮಾಡಿದ್ದಾರೆ. ಈ ವೇಳೆ ಕುರುಬ ಸಮುದಾಯದ ಯಾರೂ ದೇಗುಲಕ್ಕೆ ಬಂದಿರಲಿಲ್ಲ. ಸಂಜೆಯ ಪೂಜೆ ಅವರೆಲ್ಲ ಆಗಮಿಸಿದ್ದಾರೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ : ಸೌಲಭ್ಯಕ್ಕಾಗಿ ದಾಖಲಾತಿ ಬೇಕು, ದಾಖಲಾತಿಗಳಿಂದಲೇ ಸೌಲಭ್ಯ ಎಂಬಂತಾಗಬಾರದು – ಡಾ. ಅಕ್ಕಯ್ ಪದ್ಮಶಾಲಿ


