ಆರು ಮಂದಿ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರಲು ವೇದಿಕೆ ಸಜ್ಜಾಗಿದೆ. ಇಂದು ಮಧ್ಯಾಹ್ನ (ಜ.8, 2025) 12 ಗಂಟೆಯ ಸುಮಾರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ನೂರ್ ಶ್ರೀಧರ್ ಹೇಳಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿರುವ ಅವರು, ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂಧ್ರ ಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಮುಂದೆ ಶರಣಾಗುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಗೃಹ ಇಲಾಖೆ, ಚಿಕ್ಕಮಗಳೂರು ಜಿಲ್ಲಾಡಳಿತದ ಬೆಂಬಲದೊಂದಿಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರು ಮಾಡಿದ ಪ್ರಯತ್ನ ಫಲ ಕೊಟ್ಟಿದ್ದು, ನಕ್ಸಲರು ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಮತ್ತು ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಬಂಜಗೆರೆ ಜಯಪ್ರಕಾಶ್, ಕೆ.ಪಿ ಶ್ರೀಪಾಲ್, ಪಾರ್ವತೀಶ್. ಶಾಂತಿಗಾಗಿ ನಾಗರಿಕ ವೇದಿಕೆಯ ನೂರ್ ಶ್ರೀಧರ್, ಕೆ.ಎಲ್ ಅಶೋಕ್, ವಿ.ಎಸ್ ಶ್ರೀಧರ್, ನಗರಗೆರೆ ರಮೇಶ್, ಎನ್.ವೆಂಕಟೇಶ್, ತಾರಾರಾವ್ ಅವರ ತಂಡವು ಸರ್ಕಾರ ಮತ್ತು ನಕ್ಸಲರ ನಡುವೆ ಮಧ್ಯಸ್ಥಿಕೆ ವಹಿಸಿದೆ.
ಇಂದು 6 ಮಂದಿಯ ಶರಣಾಗತಿ ಮೂಲಕ ಬೀದರ್‌ನಲ್ಲಿ ಆರಂಭವಾದ ರಾಜ್ಯದ ನಕ್ಸಲ್ ಚಟುವಟಿಕೆ ಬಹುತೇಕ ಅಂತ್ಯಗೊಳ್ಳಲಿದೆ. ಮೂಲಗಳ ಪ್ರಕಾರ, ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಗಲಿದೆ.
ಶರಣಾಗತಿ ಬಳಿಕ ಮುಂದೇನು?
ಮುಖ್ಯವಾಹಿನಿಗೆ ಬಂದವರಲ್ಲಿ ‘ಎ’ ವರ್ಗದ ಪ್ರಕರಣಗಳಿರುವ ನಕ್ಸಲರಿಗೆ 7.50 ಲಕ್ಷ ರೂಪಾಯಿ ಮತ್ತು ‘ಬಿ’ ವರ್ಗದ ಪ್ರಕರಣ ಹೊಂದಿದವರಿಗೆ 4 ಲಕ್ಷ ರೂ. ಆರ್ಥಿಕ ನೆರವು ಸಿಗಲಿದೆ. ಅದು ಮೂರು ಹಂತಗಳಲ್ಲಿ ದೊರಕಲಿದೆ.
ಅವರು ಶಸ್ತ್ರಾಸ್ತ್ರಗಳನ್ನು ಬಚ್ಚಿಡುವ ಡಂಪ್‌ಗಳನ್ನು ಪತ್ತೆ ಮಾಡಲು ದಾರಿ ತೋರಿಸುವ ಮಾಹಿತಿ ನೀಡಿದರೆ, ಅದಕ್ಕೂ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ.
ಮುಖ್ಯವಾಹಿನಿಗೆ ಬಂದ ಬಳಿಕ ಎಲ್ಲರೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಕೇರಳ, ತಮಿಳುನಾಡಿನಲ್ಲೂ ಯುಎಪಿಎ ರೀತಿಯ ಗಂಭೀರ ಪ್ರಕರಣಗಳು ದಾಖಲಾಗಿರುವುದರಿಂದ ಜಾಮೀನು ಸಿಗುವ ತನಕ ಬಂಧನದಲ್ಲಿ ಇರಬೇಕು. ಎಲ್ಲಾ ಪ್ರಕರಣಗಳನ್ನು ಸೇರಿ ಒಟ್ಟಿಗೆ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.
ಶರಣಾಗತಿಗೂ ಮುನ್ನ ಸರ್ಕಾರಕ್ಕೆ ಪತ್ರ : ಹಕ್ಕೊತ್ತಾಯಗಳನ್ನು ಮುಂದಿಟ್ಟ ನಕ್ಸಲ್ ಹೋರಾಟಗಾರರು


