Homeಮುಖಪುಟಹೇಮಾ ಸಮಿತಿ ವರದಿ ಬಿಚ್ಚಿಟ್ಟ ಭಯಾನಕ ಸತ್ಯಗಳು!

ಹೇಮಾ ಸಮಿತಿ ವರದಿ ಬಿಚ್ಚಿಟ್ಟ ಭಯಾನಕ ಸತ್ಯಗಳು!

- Advertisement -
- Advertisement -

ನ್ಯಾಯಾಧೀಶೆ ಹೇಮಾ ಸಮಿತಿಯು ರಚನೆಯಾಗಿದ್ದು ಹೇಗೆ?

ಫೆಬ್ರವರಿ 17, 2017ರ ರಾತ್ರಿ, ಕೇರಳದಲ್ಲಿನ ಪ್ರಖ್ಯಾತ ನಟಿಯೊಬ್ಬರನ್ನು ಅಪಹರಿಸಲಾಗಿತ್ತು ಮತ್ತು ಕಾರೊಂದರಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಲಾಯಿತು; ಮತ್ತು ಇದನ್ನು ಎಸಗಿದ್ದು ಕೇರಳದ ಮಾಲಿವುಡ್‌ನ ಪ್ರಖ್ಯಾತ ನಟನೊಬ್ಬನ ಸೂಚನೆಯ ಮೇರೆಗೆ ಎಂದು ಆರೋಪಿಸಲಾಗಿತ್ತು. ಇದೊಂದು ಲೈಂಗಿಕ ದೌರ್ಜನ್ಯದ ಬಿಡಿ ಘಟನೆ ಎಂದು ಕಂಡರೂ, ಇದು ದೊಡ್ಡ ಷಡ್ಯಂತರದ ತುತ್ತತುದಿ ಮಾತ್ರವಾಗಿತ್ತು. ಈ ಒಂದು ಘಟನೆಯು ಈ ಉದ್ಯಮದಲ್ಲಿ ನಡೆಯುತ್ತಿರುವ ಮತ್ತು ಬೇರೂರಿರುವ ಲಿಂಗ ತಾರತಮ್ಯ ಮತ್ತು ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ಒಂದು ಪ್ರೇರಣಾಶಕ್ತಿಯಂತೆ ರೂಪುಗೊಂಡಿತು. ಇದರ ಪರಿಣಾಮವಾಗಿ ಈ ಉದ್ಯಮದಲ್ಲಿನ ಕೆಲವು ಮಹಿಳೆಯರು ಸಂಘಟಿತರಾಗಿ ವುಮೆನ್ ಇನ್ ಸಿನೆಮಾ ಕಲೆಕ್ಟಿವ್ (WCC), ಎಂಬ ಒಕ್ಕೂಟವನ್ನು ಮೇ 2017ರಲ್ಲಿ ರಚಿಸಿದರು. ಇದಕ್ಕೆ ಮೂಲಕಾರಣ ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತಾಯಿಸುವುದಾಗಿತ್ತು. ಕೇರಳ ಚಿತ್ರೋದ್ಯಮದಲ್ಲಿನ ಮಹಿಳೆಯರ ಕೆಲಸದ ಪರಿಸ್ಥಿತಿಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ಕೂಡ ಸಲ್ಲಿಸಿದರು. ಇದೇ ಕಾರಣಕ್ಕೆ ಕೇರಳ ರಾಜ್ಯ ಸರ್ಕಾರವು ನ್ಯಾಯಾಧೀಶೆ ಹೇಮಾ ಸಮಿತಿಯನ್ನು ರಚಿಸಿದ್ದು. ಮೂವರು ಸದಸ್ಯರೆಂದರೆ ನ್ಯಾಯಾಧೀಶೆ ಹೇಮ, ಟಿ. ಶಾರದ(ನಟಿ), ಮತ್ತು ಕೆ.ಬಿ. ವಲ್ಸಲ ಕುಮಾರಿ (ನಿವೃತ ಐ.ಎ.ಎಸ್ ಅಧಿಕಾರಿ), ಇವರೆಲ್ಲರೂ ಈ ಸಮಿತಿಯಲ್ಲಿ ಸೇವೆ ಸಲ್ಲಿಸಿದರು.

ನ್ಯಾಯಾಧೀಶೆ ಹೇಮಾ ಸಮಿತಿಯ ಐತಿಹಾಸಿಕ ವರದಿಯು ಚಲನಚಿತ್ರ ಉದ್ಯಮದಲ್ಲಿನ ಮಹಿಳೆಯರ ಮೇಲಿನ 17 ಬೇರೆಬೇರೆ ರೀತಿಯ ದೌರ್ಜನ್ಯಗಳನ್ನು ಗುರುತಿಸಿದೆ. ಅವುಗಳಲ್ಲಿ ಲೈಂಗಿಕ ದೌರ್ಜನ್ಯ, ಶೌಚಾಲಯಗಳ ಮತ್ತು ಬಟ್ಟೆ ಬದಲಾಯಿಸುವ ಕೋಣೆಗಳ ಕೊರತೆ, ಲಿಂಗ ತಾರತಮ್ಯ, ವೇತನದಲ್ಲಿನ ತಾರತಮ್ಯತೆ ಇತ್ಯಾದಿ. ಮಹಿಳೆಯರ ಕೇಶಾಲಂಕಾರ ಮಾಡುವವರ, ನಟನಟಿಯರ, ಕಿರಿಯ ಕಲಾವಿದರುಗಳ, ನರ್ತಕಿಯರ, ಮೇಕ್‌ಅಪ್ ಕಲಾವಿದರ ಮತ್ತು ತಾಂತ್ರಿಕ ವರ್ಗದವರ ಜೊತೆಯಲ್ಲಿ ಕೂಲಂಕು ಷವಾಗಿ ನಡೆಸಿದ ಸಂಭಾಷಣೆ ಮತ್ತು ಮಾಡಿದ ವಿಚಾರಣೆಯ ಆಧಾರದಲ್ಲಿ ಸಮಿತಿಯು ಈ ನಿರ್ಧಾರಕ್ಕೆ ಬಂದಿದೆ. ಸಮಿತಿಯು ಸಿನಿಮಾ ನಿರ್ಮಾಣ ಸೆಟ್‌ನಲ್ಲಿನ ಕೆಲಸದ ಸ್ಥಿತಿಗತಿಗಳ ಬಗ್ಗೆಯೂ ಗಮನ ಹರಿಸಿದೆ.

ಭಯ ಮತ್ತು ಮೌನದ ಆಳ್ವಿಕೆ

ಈ ವರದಿಯು ಕಂಡುಕೊಂಡ ವಿಷಯಗಳ ಪ್ರಕಾರ ಮಾಲಿವುಡ್ ಭಯಾನಕ ಮತ್ತು ದೀರ್ಘಕಾಲದ ಮೌನದ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದ್ದರ ಬಗ್ಗೆ ಕೂಡ ಸ್ಪಷ್ಟಪಡಿಸುತ್ತದೆ. ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಲು ಹೆದರುತ್ತಿದ್ದರು. ಅದನ್ನು ಅವರ ಹತ್ತಿರದ ಸಂಬಂಧಿಗಳ ಜೊತೆ ಚರ್ಚಿಸುವುದಕ್ಕೂ ಭಯಪಡುತ್ತಿದ್ದರು. ಅವರಿಗೆ ಇದ್ದ ಹೆದರಿಕೆ ಎಂದರೆ ಅವರನ್ನು ಕೆಲಸದಿಂದ ವಜಾ ಮಾಡಿಬಿಡಬಹುದೆಂದು. ಸಾಕ್ಷಿಗಳು ಹೇಳಿದ ಪ್ರಕಾರ ಅವರಿಗೆ “ಮಿಟೂ” ವ್ಯಕ್ತಿಯೆಂದು ಮುದ್ರೆ ಒತ್ತಿ ಅವರಿಗೆ ಕೆಲಸವನ್ನು ನಿರಾಕರಿಸಲಾಗುತ್ತಿತ್ತು. ಅವರು ಕೆಲವು ನಟರ ಅಭಿಮಾನಿಗಳು ಮತ್ತು ಅಭಿಮಾನಿಗಳ ಸಂಘದಿಂದ ಕೂಡ ಕಿರುಕುಳವನ್ನು ಎದುರಿಸಬೇಕಾಗಿತ್ತು. ಜೊತೆಗೆ ಅತ್ಯಾಚಾರ ಮಾಡುವ ಬೆದರಿಕೆಗಳು ಮತ್ತು ಆನ್‌ಲೈನ್ ಮೂಲಕ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಬರುತ್ತಿದ್ದ ಅಸಭ್ಯ ಬೈಗುಳಗಳನ್ನೂ ಎದುರಿಸಬೇಕಾಗಿತ್ತು. ಅದಲ್ಲದೇ ಈ ಹೇಯ ಕೃತ್ಯವನ್ನು ಎಸಗಿದವರಲ್ಲಿ ಬಹಳಷ್ಟು ಮಂದಿ ಪ್ರಭಾವಶಾಲಿಗಳಾಗಿದ್ದರು.

ಸಮಿತಿಯ ವರದಿಯ ಪ್ರಕಾರ ಮಹಿಳೆಯರುಗಳು ಬಹಳ ವಿರಳವಾಗಿ ಪೊಲೀಸ್ ದೂರನ್ನು ಸಲ್ಲಿಸುತ್ತಿದ್ದರು ಮತ್ತು ಸಮಿತಿಯ ಸದಸ್ಯರ ಬಳಿ ಮಾತನಾಡಲೂ ಕೂಡ ಹಿಂಜರಿದಿದ್ದರು. ಉದಾಹರಣೆಗೆ, ಸಮಿತಿಯು ವಾಟ್ಸ್‌ಆಪ್ ಗುಂಪೊಂದನ್ನು ತೆರೆದು, ಸಮಿತಿಯ ಮುಂದೆ ಬಂದು ಹೇಳಿಕೆ ಕೊಡಲು ನೃತ್ಯ ಕಲಾವಿದರನ್ನು ಆಹ್ವಾನಿಸಿದಾಗ ಅವರು ಗುಂಪಿನಿಂದಲೇ ಹೊರಹೋಗಿಬಿಟ್ಟರು. ನಂತರ ತಿಳಿದಿದ್ದು, ಸಿನೆಮಾಗೆ ಸಂಬಂಧಪಟ್ಟವರ ವಿರುದ್ಧವಾಗಿ ಸಮಿತಿಯ ಮುಂದೆ ಏನನ್ನೂ ಮಾತನಾಡಬಾರದೆಂದು ನೃತ್ಯ ಕಲಾವಿದರಿಗೆ ಆದೇಶ ನೀಡಲಾಗಿತ್ತೆಂದು.

’ಮೊದಮೊದಲು ನಮಗೆ ವಿಚಿತ್ರ ಅಂತ ಅನಿಸಿತು, ಆದರೆ ಇದರ ಬಗ್ಗೆಗಿನ ಅಧ್ಯಯನ ಮುಂದುವರಿದಂತೆಲ್ಲಾ, ನಮಗೆ ಅರಿವಾಗಿದ್ದು ಅವರ ಹಿಂಜರಿಕೆ ಮತ್ತು ಭಯಕ್ಕೆ ಸಕಾರಣಗಳಿವೆ ಎಂದು. ಆದದ್ದರಿಂದ ಅವರ ಮತ್ತು ಅವರುಗಳ ಹತ್ತಿರದ ಸಂಬಂಧಿಕರ ಸುರಕ್ಷತೆಯ ಬಗ್ಗೆ ನಮಗೆ ಆತಂಕ ಉಂಟಾಗಿತ್ತು’ ಎಂದು ವರದಿಯು ದಾಖಲಿಸುತ್ತದೆ. ಸಮಿತಿಯ ಜೊತೆಯಲ್ಲಿ ಮಾತನಾಡಿದ ಅನೇಕರು ಹೇಳಿದ್ದೇನೆಂದರೆ, ಲೈಂಗಿಕ ದೌರ್ಜನ್ಯದ ಬಗ್ಗೆ ಇಷ್ಟೊಂದು ವಿವರವಾಗಿ ಯಾರ ಬಳಿಯೂ ಮಾತನಾಡಿರಲಿಲ್ಲವೆಂದು.

ಈ ಉದ್ಯಮದಲ್ಲಿ ಲಿಖಿತ ಒಪ್ಪಂದಗಳು ಇಲ್ಲದೇ ಇರುವುದು ಕೂಡ ಈ ರೀತಿಯ ಶೋಷಣೆಗೆ ಸಕ್ರಿಯವಾಗಿ ದಾರಿ ಮಾಡಿಕೊಡು ತ್ತದೆ. ಎಷ್ಟರಮಟ್ಟಿಗೆ ನಗ್ನತೆಯನ್ನು ಪ್ರದರ್ಶಿಸಬೇಕೆನ್ನುವುದನ್ನು ತನಗೆ ಮೊದಲೇ ತಿಳಿಸಿರಲಿಲ್ಲ ಎಂದು ನಟಿಯೊಬ್ಬರು ಸಮಿತಿಯ ಮುಂದೆ ಹೇಳಿದ್ದಾರೆ. ಆದರೆ ಚಿತ್ರೀಕರಣವು ಪ್ರಾರಂಭವಾದಾಗ, ಸಹ ನಟನನ್ನು ತುಟಿಯ ಮೇಲೆ ಚುಂಬಿಸಲು ಮತ್ತು ತನ್ನ ದೇಹವನ್ನು ಪ್ರದರ್ಶಿಸು ಎಂದು ಅವರಿಗೆ ಹೇಳಲಾಗಿದೆ. ಅವರು ನಿರಾಕರಿಸಿ ಹೊರಟುಹೋದಾಗ ಅವರಿಗೆ ಬ್ಲಾಕ್‌ಮೇಲ್ ಮಾಡಲಾಗಿದೆ.

ಇದನ್ನೂ ಓದಿ: ಕಲರ್‌ಫುಲ್ ಜಗತ್ತಿನ ಕರಾಳತೆ ತೆರೆದಿಟ್ಟ ‘ಜಸ್ಟೀಸ್ ಹೇಮಾ ಸಮಿತಿ’ ವರದಿ

WCC ರಚನೆಯಾದ ನಂತರ, ಅವರಿಗೆ ತಮ್ಮ ಸುರಕ್ಷತೆಗೋಸ್ಕರ ಒಂದು ವೇದಿಕೆಯು ಸೃಷ್ಟಿಯಾಯಿತು ಎಂದು ಚಲನಚಿತ್ರ ಉದ್ಯಮದಲ್ಲಿನ ಅನೇಕ ಮಹಿಳೆಯರು ಹೇಳಿದ್ದಾರೆ. ಅವರು ಅಲ್ಲಿಯೇ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಬಹಿರಂಗಪಡಿಸಲು ಸಾಧ್ಯವಾಗಿದ್ದು ಎಂದು ಕೂಡ.

ಎಲ್ಲ ಕಡೆಯೂ ವ್ಯಾಪಕವಾಗಿ ಹರಡಿರುವ ಸ್ತ್ರೀ ಪೂರ್ವಾಗ್ರಹ ಮತ್ತು ದ್ವೇಷ

ಲೈಂಗಿಕ ದೌರ್ಜನ್ಯ ಚಲನಚಿತ್ರ ಉದ್ಯಮದಲ್ಲಿ ವ್ಯಾಪಕವಾಗಿದೆ ಎಂದು ವರದಿಯು ಬಹಿರಂಗಪಡಿಸುತ್ತದೆ. ಮತ್ತು ಮಹಿಳೆಯರು ’ಹೊಂದಾಣಿಕೆ’ ಮಾಡಿಕೊಳ್ಳಬೇಕಾದ ಮತ್ತು ’ಸಹಿಸಿ’ಕೊಳ್ಳಬೇಕಾದಂತಹ ಪರಿಸ್ಥಿತಿಯು ವಾಡಿಕೆಯಂತೆ ಆಗಿಬಿಟ್ಟಿದೆ. ಸಿನೆಮಾದಲ್ಲಿನ ಆಪ್ತ ದೃಶ್ಯಗಳಲ್ಲಿ ನಟಿಸುವ ನಟಿಯರುಗಳು ದೃಶ್ಯದ ಹೊರಗೂ ಕೂಡ ಅದನ್ನು ಮಾಡಲು ತಯಾರಾಗಿರುತ್ತಾರೆ ಎಂದು ಚಿತ್ರರಂದಲ್ಲಿರುವ ಪುರುಷರು ಸಾಮಾನ್ಯವಾಗಿ ನಂಬಿದ್ದಾರೆ. ಪುರುಷರು ಅದೇ ಕಾರಣಕ್ಕೆ ಯಾವುದೇ ನಾಚಿಕೆಯಿಲ್ಲದೆ ಬಹಿರಂಗವಾಗಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಾರೆ. ಕೆಲಸ ಸಿಗುವುದಕ್ಕೆ ಇದೊಂದೇ ದಾರಿ ಎಂದು ಮಹಿಳೆಯರನ್ನು ನಂಬಿಸಲಾಗಿದೆ; ಮತ್ತು ಹೊಸಬರು ವಿಧಿ ಇಲ್ಲದೇ ಇದಕ್ಕೆ ಸಮ್ಮತಿಸಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ.

ಚಿತ್ರೀಕರಣದ ಸಮಯದಲ್ಲಿ ಅವರಿಗೆ ನೀಡಿದ ವಸತಿಯಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗುವುದಿಲ್ಲ ಎಂದು ಅನೇಕ ಮಹಿಳೆಯರು ಹೇಳಿದ್ದು, ಅದಕ್ಕೆ ಕಾರಣ ರಾತ್ರಿಯ ಸಮಯದಲ್ಲಿ ಗಂಡಸರು ಬಂದು ಅವರ ಕೋಣೆಯ ಬಾಗಿಲನ್ನು ಬಡಿಯುವುದಾಗಿದೆ. ಮಹಿಳೆಯರು ಹೇಳುವಂತೆ ಈ ಬಡಿತಗಳು ನಯನಾಜೂಕು ಮತ್ತು ಸಭ್ಯತೆಯಿಂದ ಇರುವುದಿಲ್ಲ. ’ಬಾಗಿಲು ಬಿದ್ದುಹೋಗುತ್ತದೆ ಎಂದು ಮತ್ತು ಅವರು ಬಲವಂತದಿಂದ ಒಳನುಗ್ಗಲು ಪ್ರಯತ್ನಿಸುತ್ತಾರೆಂದು’ ಅನ್ನಿಸುವಂತಿರುತ್ತವೆ ಎಂದಿದ್ದಾರೆ. ಈ ರೀತಿಯ ದೌರ್ಜನ್ಯಗಳನ್ನು ಎಸಗುವುದು ಉದ್ಯಮದಲ್ಲಿನ ಪ್ರಖ್ಯಾತ ಜನಗಳು ಎಂದು ವರದಿಯು ಹೇಳುತ್ತದೆ. ಒಂದು ಕಡೆ ಹೆಂಗಸರಿಗೆ ಬಟ್ಟೆ ಬದಲಾಯಿಸುವ ಕೋಣೆಯ ಅಥವ ಕ್ಯಾರಾವನ್‌ಗಳ ಸೌಲಭ್ಯವು ಇರುವುದಿಲ್ಲ, ಇನ್ನೊಂದು ಕಡೆ ಅವರು ಮುಚ್ಚಿದ ಜಾಗಗಳ ಬಗ್ಗೆ ಅವರು ಭಯಭೀತರಾಗಿರುತ್ತಾರೆ; ಕಾರಣ ಎಲ್ಲೋ ಗೌಪ್ಯವಾಗಿ ಇರಿಸಿರುವ ಕ್ಯಾಮರಗಳು ಅವರನ್ನು ಬೆದರಿಸುವ ಸಾಧನವನ್ನಾಗಿ ಮಾಡಿಕೊಳ್ಳುತ್ತಾರೆಂದು.

ಹೆಣ್ಣು ಕಿರಿಯ ಮಹಿಳಾ ಕಲಾವಿದರ ವಿಷಯದ ಬಗ್ಗೆ ಚರ್ಚಿಸುವಾಗ ಆಘಾತಕಾರಿ ದೌರ್ಜನ್ಯ ಮತ್ತು ನಿರ್ಲಕ್ಷದ ದುಃಸ್ಥಿತಿಯ ವಿವರಗಳು ಸಮಿತಿಯ ವರದಿಯಲ್ಲಿ ಬಹಿರಂಗಗೊಳ್ಳುತ್ತವೆ. ಸಾಮಾನ್ಯವಾಗಿ ಅವರಿಗೆ ಚಿತ್ರೀಕರಣದ ಸಮಯದಲ್ಲಿ ಆಹಾರ ಮತ್ತು ನೀರನ್ನೂ ಕೊಡುವುದಿಲ್ಲ. ಅವರುಗಳು ಸಮಯಕ್ಕೆ ಸರಿಯಾಗಿ ಮತ್ತು ಸಂಪೂರ್ಣ ವೇತನವನ್ನೂ ಪಡೆಯುವುದಿಲ್ಲ. ಅವರಿಗೆ ಕೊಟ್ಟ ಕೆಲಸಕ್ಕೆ ಪ್ರತಿಫಲವಾಗಿ ಲೈಂಗಿಕ ಅನುಗ್ರಹವನ್ನು ಅಪೇಕ್ಷಿಸಲಾಗುತ್ತದೆ. ಅವರಲ್ಲಿ ಕೆಲವರನ್ನು ಲೈಂಗಿಕ ವ್ಯಾಪಾರಕ್ಕೂ ತಳ್ಳಲಾಗುತ್ತದೆ. ಇನ್ನೂ ಕೆಲವು ಚಿತ್ರೀಕರಣದ ಸಮಯದಲ್ಲಿ ಲೈಂಗಿಕವಾಗಿ ಸಹಕರಿಸಿದರೆ ಮಾತ್ರ ಅವರಿಗೆ ಒಳ್ಳೆಯ ಊಟವನ್ನು ನೀಡಲಾಗುತ್ತದೆ. ಚಿತ್ರೀಕರಣದಲ್ಲಿ ಹೆಣ್ಣುಮಕ್ಕಳನ್ನು ಎಷ್ಟರಮಟ್ಟಿಗೆ ಕೀಳು ಮಟ್ಟಕ್ಕೆ ಇಳಿಸಲಾಗುತ್ತಿದೆ ಎನ್ನುವುದನ್ನು ಇದು ಸಾದರಪಡಿಸುತ್ತದೆ.

ಮಹಿಳೆಯರು ಈ ಉದ್ಯಮಕ್ಕೆ ಬರುವುದು ಹಣ ಮಾಡುವುದಕ್ಕೆಂದೇ ಎಂದು ಸಿನೆಮಾ ಕ್ಷೇತ್ರದಲ್ಲಿನ ಗಂಡಸರು ನಂಬಿರುವುದರ ಬಗ್ಗೆ ಉಳಿದ ಹಲವು ಸಾಕ್ಷ್ಯಗಳು ಹೇಳಿಕೆ ಕೊಟ್ಟಿದ್ದಾರೆ. ’ಚಲನಚಿತ್ರ ಕ್ಷೇತ್ರದಲ್ಲಿರುವ ಗಂಡಸಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದೇ ಇರುವುದೆಂದರೆ ಹೆಣ್ಣುಮಕ್ಕಳು ಈ ಕ್ಷೇತ್ರಕ್ಕೆ ಕಾಲಿರಿಸಿರುವುದು ಅವರ ಕಲೆಯ ಬಗ್ಗೆಗಿನ ಅನುರಕ್ತಿಗೋಸ್ಕರ ಮತ್ತು ಕಲಾರಾಧನೆಗೋಸ್ಕರ ಎನ್ನುವ ಸಂಗತಿ’ ಎಂದು ಅವರು ಹೇಳಿದ್ದಾರೆ. ಮಹಿಳೆಯರನ್ನು ದಕ್ಷ ಸಾಮರ್ಥ್ಯದಿಂದ ಕೂಡಿದ ಕೆಲಸಗಾರರು ಎಂದು ಗುರುತಿಸುವುದರಲ್ಲಿನ ವಿಫಲತೆ ಮತ್ತು ಅವರನ್ನು ಲೈಂಗಿಕ ವಸ್ತುಗಳು ಎಂದು ಪರಿಗಣಿಸುವುದು, ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳಂತೆ. ಈ ರೀತಿಯ ಸ್ತ್ರೀಶೋಷಣೆಯ ಬಗ್ಗೆ ಹೋರಾಡಬೇಕಾದ ಸಂಘಟನೆಗಳು ಪೂರ್ವಾಗ್ರಹಗಳನ್ನೇ ಉತ್ತೇಜಿಸುತ್ತಿವೆ. ಉದಾಹರಣೆಗೆ, ಹೆಣ್ಣು ಮೇಕ್‌ಅಪ್ ಕಲಾವಿದರುಗಳು ಸಮಿತಿಯ ಮುಂದೆ ತಮಗಾದ ತಾರತಮ್ಯವನ್ನು ಬಹಿರಂಗಪಡಿಸಿದ ಕಾರಣಕ್ಕಾಗಿ ಯೂನಿಯನ್‌ಗಳು ಅವರಿಗೆ ಗುರುತು ಚೀಟಿಯನ್ನು ನೀಡಲು ನಿರಾಕರಿಸಿದವು; ಅದನ್ನು ಮಾಡಿದ್ದು ಅವರೆಲ್ಲರೂ ಮಹಿಳೆಯರು ಎಂಬ ಕಾರಣಕ್ಕಷ್ಟೆ. ಅದಲ್ಲದೆ, ಯೂನಿಯನ್‌ನ ನಿಯಮದ ಪ್ರಕಾರ ಸದಸ್ಯರಲ್ಲದೇ ಇರುವವರು ಮತ್ತು ಗುರುತಿನ ಚೀಟಿ ಹೊಂದಿಲ್ಲದೇ ಇರುವವರು ಯಾವುದೇ ಚಿತ್ರನಿರ್ಮಾಣದ ಕಾರ್ಯದಲ್ಲಿ ಕೆಲಸ ಮಾಡುವ ಹಾಗಿಲ್ಲ. ಮೇಕ್‌ಅಪ್ ಕಲಾವಿದರನ್ನು ಚೀಫ್ ಟೆಕ್ನಿಶಿಯನ್ ಎಂದು ಪರಿಗಣಿಸಲಾಗಿರುವ ಕಾರಣಕ್ಕೋಸ್ಕರ ಅವರಿಗೆ ಗುರುತಿನ ಚೀಟಿಯನ್ನು ಕೊಡುತ್ತಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ. ಯೂನಿಯನ್‌ನ ಸದಸ್ಯತ್ವ ಅವರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುತ್ತದೆ, ವಸತೀಯನ್ನೂ ಕೂಡ ಎಂಬ ಕಾರಣದಿಂದ ಅವರಿಗೆ ಗುರುತಿನ ಚೀಟಿಯನ್ನು ನಿರಾಕರಿಸಲಾಗಿದೆ. ಗಂಡಸರಿಗೆ ಮಹಿಳೆಯರು ಯಾವುದೇ ಒಳ್ಳೆಯ ಸೌಲಭ್ಯ ಪಡೆಯುವುದು ಇಷ್ಟವಿಲ್ಲ.

ಮಹಿಳಾ ಕೆಲಸಗಾರರುಗಳು ಹೇಗೆ ಗೌರವದಿಂದ ಮತ್ತು ಮಾನವಿಯತೆಯಿಂದ ವಂಚಿತರಾಗಿದ್ದಾರೆ ಎಂಬುದಕ್ಕೆ ಇರುವ ಹಲವು ಪ್ರಕರಣಗಳಲ್ಲಿ ವರದಿ ಕೆಲವು ಮುಖ್ಯಾಂಶಗಳನ್ನು ಪ್ರಕಟಿಸಿದೆ.

ಆಂತರಿಕ ದೂರು ಸಮಿತಿಯು ಇದಕ್ಕೆ ಪರಿಹಾರವೇ?

ಈ ವರದಿಯು ಆಂತರಿಕ ದೂರು ಸಮಿತಿಯು ಚಲನಚಿತ್ರರಂಗದ ಸಮಸ್ಯೆಗಳಿಗೆ ಪರಿಹಾರ ಎಂದು ಸೂಚಿಸುವದರ ಬಗ್ಗೆ ಒಲವು ತೋರಿಸಿಲ್ಲ. ಇದಕ್ಕೆ ಕಾರಣ ಮಲಯಾಳಂ ಚಿತ್ರೋದ್ಯಮವು ಕೆಲವು ಪಟ್ಟಬಧ್ರ ಹಿತಾಸಕ್ತಿಯ ಪ್ರಭಾವಶಾಲೀ ನಿರ್ದೇಶಕರ, ನಿರ್ಮಾಪಕರ ಮತ್ತು ನಟರ ಹಿಡಿತದಲ್ಲಿದೆ. (ಮಾಫಿಯಾ ಸಂಘಮ್), ಇಡೀ ಮಲಯಾಳಂ ಚಿತ್ರೋದ್ಯಮವು ಅವರ ನಿಯಂತ್ರಣಕ್ಕೆ ಒಳಪಟ್ಟಿದೆ ಮತ್ತು ಹತೋಟಿಯಲ್ಲಿದೆ. ’ಮಾಫಿಯ’ ಆಂತರಿಕ ದೂರು ಸಮಿತಿಯಲ್ಲಿ ಕೆಲಸ ಮಾಡುವವರನ್ನು ಅವರ ಇಷ್ಟಕ್ಕೆ ತಕ್ಕಂತೆ ಕೆಲಸಮಾಡಲು ಬಲಾತ್ಕರಿಸಬಹುದು ಅಥವ ಬೆದರಿಸಬಹುದು ಮತ್ತು ಸಮಿತಿಯ ಸದಸ್ಯರಲ್ಲಿ ಯಾರೇ ಒಬ್ಬರು ಅವರನ್ನು ಧಿಕ್ಕರಿಸಿದರೆ, ಅವರ ಭವಿಷ್ಯವೇ ನಾಶವಾಗಿಬಿಡಬಹುದು ಎಂದು ಸಮಿತಿಯು ಆತಂಕ ವ್ಯಕ್ತಪಡಿಸುತ್ತದೆ. ಚಿತ್ರೋದ್ಯಮದಲ್ಲಿ ಅಧಿಕಾರಶಾಹಿ ರಚನೆಯು ಅಸ್ತಿತ್ವದಲ್ಲಿ ಇರುವವರೆಗೂ, ಅಧಿಕಾರಶಾಹಿಗಳು ಆಂತರಿಕ ದೂರು ಸಮಿತಿಯ ಮೇಲಿನ ಹಿಡಿತವನ್ನು ತಮ್ಮಿಂದ ಹೋಗಲು ಬಿಡುವುದಿಲ್ಲ ಮತ್ತು ಮಹಿಳೆಯರಿಗೆ ಇದು ಯಾವುದೇ ರೀತಿಯಲ್ಲಿಯೂ ಪ್ರಯೋಜನಕಾರಿ ಆಗುವುದಿಲ್ಲ ಎಂಬುದು ಸಮಿತಿಯ ಅನಿಸಿಕೆಯಾಗಿದೆ..

ಈಗಿನ ಪರಿಸ್ಥಿತಿಯಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಮಹಿಳೆಯರಿಗೆ ಪ್ರಸ್ತುತ ಉದ್ಯಮ ನಡೆಸುತ್ತಿರುವವರ ಮೇಲೆ ಯಾವುದೇ ರೀತಿಯ ವಿಶ್ವಾಸವಿಲ್ಲ. ಪರಸ್ಪರ ಒಪ್ಪಂದದಿಂದ ಕೂಡಿದ ಪರಿಹಾರ ನೀಡುವಂತಹ ವ್ಯವಸ್ಥೆಯು ನ್ಯಾಯಕ್ಕಾಗಿ ಮಾಡುವ ಹೋರಾಟವನ್ನು ಇನ್ನೂ ಹೆಚ್ಚು ದುರ್ಬಲಗೊಳಿಸಬಹುದು. ಇನ್ನೂ ಹೆಚ್ಚು ಉಪಯೋಗಕಾರಿ ನಡೆಯೆಂದರೆ ಸ್ವಾಯತ್ತತೆ ಹೊಂದಿದ ಒಂದು ಟ್ರಿಬ್ಯುನಲ್‌ಅನ್ನು ಸ್ಥಾಪಿಸುವುದು. ಅದಕ್ಕೆ ಒಂದು ಸಿವಿಲ್ ನ್ಯಾಯಾಲಯಕ್ಕೆ ಇರುವಂತಹ ಅಧಿಕಾರವನ್ನು ನೀಡುವುದು- ಈ ಉದ್ಯಮದಲ್ಲಿ ಉದ್ಭವಿಸುವಂತಹ ವಿವಾದಗಳನ್ನು ಪರಿಹರಿಸಲು ಎಂದು ವರದಿಯ ಸಲಹೆ ನೀಡಿದೆ.

ಈ ವರದಿಯಲ್ಲಿನ ನಮೂದಿಸಿರುವ ಸತ್ಯಾಂಶಗಳ ನಂತರದ ಪರಿಣಾಮವೆಂದರೆ, ಎಲ್ಲಾ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್‌ನ (AMMA) ಎಲ್ಲಾ ಸದಸ್ಯರೂ ಒತ್ತಡಕ್ಕೆ ಮಣಿದು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತಾಯಿತು. ಇದರಲ್ಲಿ ಸೂಪರ್‌ಸ್ಟಾರ್ ಮೋಹನ್ ಲಾಲ್ ಕೂಡ ಸೇರಿದ್ದಾರೆ. ಕೇರಳ ಸರ್ಕಾರ ನಾಲ್ಕು ವರ್ಷಗಳ ಕಾಲ ಈ ವರದಿಯನ್ನು ಬಹಿರಂಗಪಡಿಸಲು ಹಿಂಜರಿದಿತ್ತು. ಆದರೆ ಈಗ ಸರ್ಕಾರ ಕೂಡ ಒತ್ತಡಕ್ಕೆ ಮಣಿದು ಮಲಯಾಳಂ ಚಿತ್ರೋದ್ಯಮದಲ್ಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಾಥಮಿಕ ವಿಚಾರಣೆಯನ್ನು ನಡೆಸಲು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮನ್ನು (SIT) ಸ್ಥಾಪಿಸಿದೆ. ಬೆಂಗಾಲಿ ಮತ್ತು ಕನ್ನಡದ ಚಿತ್ರೋದ್ಯಮದ ಮಹಿಳೆಯರು ಇದೇರೀತಿಯ ಸಮಿತಿಯನ್ನು ತಮ್ಮ ಚಿತ್ರೋದ್ಯಮದಲ್ಲಿನ ಹೆಂಗಸರ ಸ್ಥಿತಿಗತಿಗಳ ವಿಷಯದಲ್ಲಿ ವಿಚಾರಣೆ ನಡೆಸಲು ರಚಿಸಬೇಕೆಂದು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹೇಮಾ ಸಮಿತಿಯ ವರದಿಯು ಒಂದು ಶ್ಲಾಘನೀಯವಾದಂತಹ ಸಾಧನೆ. ಮಲಯಾಳಂ ಚಲನಚಿತ್ರೋದ್ಯಮ ಕ್ಷೇತ್ರದಲ್ಲಿನ ವಿಧವಿಧವಾದಂತಹ ಶೋಷಣೆಗಳು ಮೊದಲ ಬಾರಿಗೆ ಬಹಿರಂಗಗೊಂಡಿದ್ದು ಈ ವರದಿಯ ಮೂಲಕ. ಲೈಂಗಿಕ ದೌರ್ಜನ್ಯದ ಬಗ್ಗೆ ಚಿತ್ರೋದ್ಯಮದ ಪುರುಷರನ್ನು ಹೊಣೆಗಾರರನ್ನಾಗಿ ಮಾಡಿದ್ದು ಇದೇ ಮೊದಲ ಸಲ, ಇಲ್ಲದಿದ್ದರೆ ಅವರೆಲ್ಲರೂ ಕೂಡ ದಂಡನೆಯಿಂದ ತಪ್ಪಿಸಿಕೊಂಡುಬಿಡುತ್ತಿದ್ದರು. ಇದಕ್ಕೆಲ್ಲಾ ಕಾರಣ WCCನಲ್ಲಿದ್ದ ಮಹಿಳೆಯರು, ಮತ್ತು ಸಮಿತಿಯ ಮುಂದೆ ತಮ್ಮನ್ನೇ ತಾವು ಅಪಾಯಕ್ಕೊಡ್ಡಿಕೊಂಡು ಸಾಕ್ಷಿ ಹೇಳಿದ ಸಂತ್ರಸ್ತರು ಮತ್ತು ಬಲಿಪಶುಗಳು. ಇದು ಇನ್ನೂ ಮುಂದುವರಿದು ದೇಶದಾದ್ಯಂತ ನಡೆಯುತ್ತಿರುವ ಸ್ತ್ರೀ ಆಂದೋಲನಕ್ಕೆ ಭರವಸೆಯನ್ನು ನೀಡುತ್ತದೆ. ಮತ್ತು ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಹೋರಾಟದಲ್ಲಿ ಮತ್ತೊಂದು ಹೆಜ್ಜೆಯಿದು. ಅದೇ ಕಾರಣಕ್ಕೆ ನನ್ನ ಕೇರಳದ ಸೋದರಿಯರಿಗೆ ಒಂದು ದೊಡ್ಡ ಸಲಾಮ್.

ಕನ್ನಡಕ್ಕೆ: ಕೆ ಶ್ರೀನಾಥ್

ಪೂರ್ಣ ಆರ್

ಪೂರ್ಣ ಆರ್
ಬೆಂಗಳೂರಿನ ಆಲ್ಟರ್ನೇಟಿವ್ ಲಾ ಫೋರಂನಲ್ಲಿ ವಕೀಲರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂವಿಧಾನಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...