Homeಪುಸ್ತಕ ವಿಮರ್ಶೆಚೀಮನಹಳ್ಳಿ ರಮೇಶಬಾಬು ಅವರ ‘ಜೀವ ರೇಶಿಮೆ’: ಹಳ್ಳಿ ನಗರಗಳ ನಡುವೆ ನಮ್ಮ ಕಾಪಾಡುವ ತಾಯ ಕಣ್ಣಿನ...

ಚೀಮನಹಳ್ಳಿ ರಮೇಶಬಾಬು ಅವರ ‘ಜೀವ ರೇಶಿಮೆ’: ಹಳ್ಳಿ ನಗರಗಳ ನಡುವೆ ನಮ್ಮ ಕಾಪಾಡುವ ತಾಯ ಕಣ್ಣಿನ ಕತೆಗಳು

ಇವತ್ತು ನಗರಗಳಲ್ಲಿ ಬದುಕುತ್ತಿರುವ ಬಹುಸಂಖ್ಯಾತರು ತಮ್ಮ ಹಳ್ಳಿಯ ಬದುಕಿನಿಂದ ಪಡೆದದ್ದು ಎಷ್ಟು ಮುಖ್ಯವೋ ಕಳೆದುಕೊಂಡದ್ದು ಕೂಡ ಅಷ್ಟೇ ಮುಖ್ಯವೇನೋ ಎಂಬ ಸತ್ಯವನ್ನು ಹೇಳುತ್ತಲೇ, ಇವೆರಡರಿಂದಲೂ ಪಡೆಯಬಲ್ಲ ಕಲಾತ್ಮಕ ಲೇಖಕ ಚೀಮನಹಳ್ಳಿ ರಮೇಶಬಾಬು ಎಂಬುದನ್ನು ಇಲ್ಲಿನ ಕತೆಗಳು ದೃಢಪಡಿಸುತ್ತವೆ.

- Advertisement -
- Advertisement -
  • ಎಚ್ ಎಸ್ ರೇಣುಕಾರಾದ್ಯ

ನಮ್ಮ ತಟ್ಟೆಯಲ್ಲಿರುವ ಆಹಾರ ಎಷ್ಟು ಆನಂದದಾಯಕವಾಗಿರುತ್ತದೋ ಊಟದ ನಂತರ ಕೂಡ ಅಷ್ಟೇ ಆನಂದದಾಯಕವಾಗಿರಬೇಕು. ಹಾಗೆಯೇ ಲೇಖಕನೊಬ್ಬನ ಬರಹಗಳು ಕೂಡ ಓದುವಾಗ ರೋಚಕವಾಗಿದ್ದು, ಆ ಕ್ಷಣದ ತುರಿಕೆ ಅನ್ನಿಸಿ, ಆನಂದ ನೀಡಿ ನಂತರ ರಣಗಾಯ ಮಾಡುವ ಬರಹಗಳಾಗದೆ, ಓದುಗನ ಆರೋಗ್ಯದ ಜವಾಬ್ದಾರಿಯನ್ನು ಹಾಗೂ ಈ ಲೋಕದ ಆರೋಗ್ಯದ ಜವಾಬ್ದಾರಿಯನ್ನು ನಿರಂತರ ಹೊರುವಂತಿರಬೇಕು. ಅಂತಹ ಬರಹಗಳಷ್ಟೇ ನಮ್ಮ ಬದುಕನ್ನು ಹಸನು ಮಾಡುತ್ತವೆ.

ಚೀಮನಹಳ್ಳಿ ರಮೇಶಬಾಬು ಅವರ ಇತ್ತೀಚಿನ ಕಥಾಸಂಕಲನದ ‘ಜೀವ ರೇಶಿಮೆ’ ಕತೆಗಳ ಓದು ಮೇಲಿನ ಮಾತುಗಳಿಗೆ ಕನ್ನಡಿಯಾಗಿದೆ. ತಮ್ಮ ಬರವಣಿಗೆಯ ಬೇರುಗಳನ್ನು ಹಳ್ಳಿಯ ಮಣ್ಣಿನಲ್ಲಿ ಬಿಟ್ಟುಕೊಂಡಿದ್ದರೂ, ನಗರದ ಕಾಂಕ್ರೀಟ್ ಗೋಡೆಯ ಸಂದಿನ ಹಿಡಿಮಣ್ಣಿನಲಿ ಚಿಗುರೊಡೆವ, ಅರಳಿಯ – ಬೇವಿನ ಗಿಡದಂತಹ ಲೇಖಕ ಚೀಮನಹಳ್ಳಿ ರಮೇಶಬಾಬು.

‘ಜೀವ ರೇಶಿಮೆ’ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಈ ಕತೆಗಳಲ್ಲಿ ‘ಜೀವ ರೇಶಿಮೆ’, ‘ಹಸ್ತ ಬಲಿ’, ‘ಗಯ್ಯಾಳಿ’, ‘ಎಮ್ಮೆ ಕರು’, ‘ಒಂದೆಂಬ ಊರಲ್ಲಿ’, ‘ನೀರು’, ‘ಚುನಾವಣೆ’ ಕತೆಗಳಲ್ಲಿ ಗ್ರಾಮೀಣ ಬದುಕು ಕೇಂದ್ರೀಕೃತವಾಗಿದ್ದರೆ, ‘ಇಲಿಗಳು’, ‘ಹುಣಿಸೆ ಮರ’, ‘ಬೆನ್ನಮೇಲಿನ ಚಿಟ್ಟೆ’, ‘ಹೊರಳು’, ‘ನಡಿಗೆ’ ಪೂರ್ಣವಾಗಿ ನಗರ ಬದುಕನ್ನು ಒಳಗುಮಾಡಿಕೊಂಡ ಕತೆಗಳು.

ಸಂಕಲನದ ನಗರ ಕೇಂದ್ರಿತ ಕತೆಗಳಲ್ಲಿನ ‘ಇಲಿಗಳು’ ಕತೆಯಲ್ಲಿನ ಪೆಥಾಲಜಿಸ್ಟ್ ಲ್ಯಾಬ್‍ನಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿರುವ, ಬದುಕಿನಲ್ಲಿ ಆತ್ಮವಿಶ್ವಾಸವಿಲ್ಲದ ‘ಆನಂದ’ ತನ್ನ ಪ್ರಾಜೆಕ್ಟ್‍ನ ಯಶಸ್ಸಿಗಾಗಿ ಹಾಗೂ ಅದರಿಂದ ತನಗೆ ದೊರೆಯಬಹುದಾದ ಒಂದು ಬಡ್ತಿ ಹಾಗೂ ಸ್ಪೆಷಲ್ ಇನ್ಕ್ರಿಮೆಂಟ್‍ಗಾಗಿ ಇಲಿಗಳ ಮೇಲೆ ಅನಿಮಲ್ ಎಥಿಕ್ಸ್ ಮೀರಿ ನಡೆಸುವ ಪ್ರಯೋಗ ಮತ್ತು ಅದರ ಪಾಪಪ್ರಜ್ಞೆಯಿಂದ ಉಂಟಾದ ಮಾನಸಿಕ ತುಮುಲದ ಕಾಯಿಲೆಯ ನಿವಾರಣೆಗಾಗಿ, ಸರ್ಕಾರಿ ವೈದ್ಯನಾಗಿದ್ದೂ ಕಾನೂನುಬಾಹಿರವಾಗಿ, ಲಾಭದ ಏಕೈಕ ದೃಷ್ಟಿಯಿಂದ, ಮತ್ತೊಂದು ಖಾಸಗಿ ಕ್ಲಿನಿಕ್‍ನ (ಶ್ರೀನಿವಾಸ ಕ್ಲಿನಿಕ್) ಡಾ. ಮುರಳಿ ಮನೋಹರನ ಬಳಿ ಹೋಗುತ್ತಾನೆ. ಡಾಕ್ಟರ್‍ರೊಂದಿಗೆ ಹರಟುತ್ತಲೇ ಮನದ ಭಾರವನ್ನು ಕಡಿಮೆ ಮಾಡಿಕೊಳ್ಳಲೆತ್ನಿಸುವ ಆನಂದ, ಡಾಕ್ಟರರು ತೆಗೆದುಕೊಳ್ಳುವ ಫೀಜಿಗೆ ಒಂದು ದಿನವೂ ಬಿಲ್ಲು ಕೊಡದ ನಡೆಗೆ ಅವರನ್ನು ಪ್ರಶ್ನಿಸುತ್ತಾನೆ. ಕಡೆಗೆ ಡಾ. ಮುರುಳಿ ಮನೋಹರ ‘ಯು ಅಂಡ್ ಮೀ ಬಿಲಾಂಗ್ಸ್ ಟು ದ ಸೇಮ್ ಕಮ್ಯುನಿಟಿ’ ಎಂದಾಗ ಆನಂದ್‍ಗೆ ಅರ್ಥವಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಏಳೆಂಟು ವರ್ಷದ ಮಾಸಿದ ಬಟ್ಟೆಯ, ತಲೆಗೂದಲು ಕೆದರಿದ ತೆಳ್ಳನೆಯ ಮೈಯ, ಕಪ್ಪು ಬಣ್ಣದ, ಆತ್ಮವಿಶ್ವಾಸ ತುಂಬಿದ್ದ, ನಗರಕ್ಕೆ ಸೆಡ್ಡು ಹೊಡೆಯುವಂತಿದ್ದ ಕಣ್ಣುಗಳ ‘ವಿನೋದ್’ ಎಂಬ ಹುಡುಗನ್ನ ಕಂಡು ಮಾತನಾಡಿಸಿದಾಗ – ತನ್ನ ಸಣ್ಣ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಈಗ ಕ್ಯಾನ್ಸರ್‍ಗೆ ತುತ್ತಾಗಿ ಹಾಸಿಗೆ ಹಿಡಿದಿರುವ ತಾಯಿಯ ಬಗೆಗೆ ಹೇಳಿ, ಇಂದು ತನ್ನ ಜನುಮದಿನವೆಂದು ಇಬ್ಬರಿಗೂ ಚಾಕ್‍ಲೇಟ್ ಕೊಟ್ಟಾಗ, ಆತನ ಮಾತುಗಳ ಕೇಳಿ ಕರುಣೆಯಿಂದ ಇಬ್ಬರೂ ಹಣ ನೀಡುತ್ತಾರೆ. ಈ ಘಟನೆಗಳ ಬಗ್ಗೆ ಕೇಳಿದ ಕ್ಷಣವೇ, ಆತನ ಮಾತುಗಳ ಸತ್ಯಾಸತ್ಯತೆ ತಿಳಿಯಲು ಕ್ಲಿನಿಕ್‍ನಿಂದ ಹೊರಬಿದ್ದ ಆನಂದ್ ಸತ್ಯ ಕಂಡು ಆಘಾತಕ್ಕೆ ಒಳಗಾಗುತ್ತಾನೆ. ಆನಂತರ ತಾನು ಕೂಡ ಈ ನಗರದ ಬೋನ್‍ನಲ್ಲಿ ಕೂಡಿಹಾಕಿರುವ ಥೇಟ್ ಇಲಿಯಂತೆ ಭಾಸವಾಗುತ್ತದೆ ಆತನಿಗೆ.

‘ಹೊರಳು’ ಕತೆ ನಗರದ ಬುದ್ಧಿಜೀವಿ, ಸಂಸ್ಕೃತಿ ಚಿಂತಕನೆಂದೇ ಪ್ರಸಿದ್ಧನಾದ ಆರಾಮಜೀವಿ ಪಾರ್ಥಸಾರಥಿಯ ಸ್ಯೂಡೋ ಜೀವಪರತೆಯನ್ನು ವ್ಯಂಗ್ಯವಾಡುತ್ತಲೇ ಸಾಮಾನ್ಯನಾದ, ಸದಾ ಅತಂತ್ರದ ಬದುಕನ್ನು ಬಗಲಿಗೆ ಕಟ್ಟಿಕೊಂಡ ಟ್ಯಾಕ್ಸಿ ಡ್ರೈವರ್ ರಂಗನಾಥನಿಗೆ ಬದುಕಿನ ಬಗೆಗಿರುವ ಬದ್ಧತೆ ಜೀವಪರತೆ ಹಾಗು ಪ್ರಾಮಾಣಿಕತೆಯನ್ನು ಹಿಡಿಯುತ್ತದೆ. ಪಾರ್ಥಸಾರಥಿಗೆ ವೈಯಕ್ತಿಕವಾಗಿ ದೊಡ್ಡ ಶಾಕ್ ನೀಡುತ್ತಾ ಬದುಕಿನ ವಾಸ್ತವತೆಯನ್ನು ಮನಗಾಣಿಸುತ್ತದೆ.

ಈ ಸಂಕಲನದ ವಿಶಿಷ್ಟ ಕತೆ ‘ಹುಣಿಸೆಮರ’. ಇದು ಪ್ರಭಾಕರನೆಂಬುವವ ನಗರ ಬದುಕಿನ ಕನಸಿಗೆ ಜೋತುಬಿದ್ದು ತನ್ನ ಬದುಕಿನ ಮೂಲ ಬೇರುಗಳನ್ನು ಕಡಿದುಕೊಂಡು, ಊರಿನ ಎಲ್ಲ ಆಸ್ತಿಯನ್ನು ಮಾರಿ, ನಗರಕ್ಕೆ ಬಂದವನು. ನಗರಜೀವನದ ಯಾಂತ್ರಿಕತೆಗೆ ಬೇಸತ್ತು, ತನ್ನ ಜೀವನೋತ್ಸಾಹವನ್ನು ಮರಳಿ ಪಡೆಯಲು, ತನ್ನ ಊರಿನ ಹೊಲದಲ್ಲಿ ಸರ್ವಜಾತಿಯ ಪ್ರಾಣಿಪಕ್ಷಿಗಳ ಬದುಕಿನ ಕೇಂದ್ರವಾಗಿದ್ದ “ಗ್ರ್ಯಾಂಡ್ ಟ್ಯಾಮರಿಂಡ್ ಟ್ರೀ” ಹುಡುಕಾಟಕ್ಕೆ ಬಿದ್ದು ಮತ್ತೆ ಊರಿಗೆ ಬಂದವನು. ಅದನ್ನು ಕಾಣದೇ, ತನ್ನ ಹುಟ್ಟೂರಿನಲ್ಲಿ ‘ಹೊರಗಿನವನಾಗಿ’ ಅಲ್ಲಿ-ಇಲ್ಲಿ ಎಲ್ಲೂ ಸಲ್ಲದ ಜೀವವಾಯಿತಲ್ಲ ಎಂದುಕೊಳ್ಳುವಷ್ಟರಲ್ಲಿ ಅದೇ ಊರಿನ ಜೀವವೊಂದು ಬಂದು ಅವನನ್ನು ಆತುಕೊಂಡಾಗ ಅವನಿಗೆ ತಾನು ಕಳೆದುಕೊಂಡಿದ್ದ ತನ್ನ ಅಪ್ಪನ ಪ್ರೀತಿಯ ‘ಹುಣಸೆ ಮರ’ ಸಿಕ್ಕಷ್ಟೇ ಖುಷಿಯಾಗಿ ಮಡದಿಗೆ ಹುಣಸೆ ಮರ ಸಿಕ್ತು’ ಎಂದು ಮೆಸೇಜ್ ಕಳಿಸುತ್ತಾನೆ. ‘ಓಹ್ – ಗಾಟ್ ಟ್ಯಾಮರಿಂಡ್ ಟ್ರೀ, ದಟ್ಸ್ ಗ್ರೇಟ್’. ಮುಂದಿನ ಸಾರಿ ನಾನೂ ಬರುವೆ’ ಎಂಬ ಸಂದೇಶ ಮಡದಿಯಿಂದ ಬರುತ್ತೆ.

ಹಳ್ಳಿಯನ್ನು – ಅಲ್ಲಿನ ಬದುಕಿನ ಬಗ್ಗೆ ಅನಾಸ್ಥೆಯನ್ನು ಹೊಂದಿದ್ದ ಮಡದಿಯಲ್ಲೂ ಹುಣಸೆಮರ ಹುಟ್ಟಿಸುವ ಜೀವನ ಪ್ರೀತಿ, ಬದುಕಿನ ಬಗೆಗಿನ ಅದಮ್ಯ ಜೀವನೋತ್ಸಾಹದ ಬಗೆಗೆ ಮನುಷ್ಯನಿಗೆ ಇರುವ ತುಡಿತವನ್ನು ಹೇಳುತ್ತದೆ. ನಗರಬದುಕಿನ ನಿರರ್ಥಕತೆಯನ್ನು ಹಳ್ಳಿಯ ಬದುಕಿನ ಜೀವನ ಪ್ರೀತಿಯನ್ನು ‘ಹುಣಸೆಮರ’ದ ರೂಪಕವಾಗಿ ನಮ್ಮ ಮುಂದೆ ಕಾಣುತ್ತದೆ.

‘ಜೀವ ರೇಶಿಮೆ’ ಶೀರ್ಷಿಕೆ ಕತೆಯಲ್ಲಿ ರೇಶಿಮೆ ಹುಳದಂತಹ ಮನುಷ್ಯ ರಂಗಪ್ಪ. ಹಾಲು ಮತ್ತು ರೇಶ್ಮೆ ಬಿಟ್ಟರೆ ಆದಾಯದ ಮೂಲಗಳಿಲ್ಲದ ಬಡವ. ಇತ್ತ ವ್ಯವಹಾರಸ್ಥನಾಗಿದ್ದ, ವ್ಯವಹಾರದ ವಿಷಯದಲ್ಲಿ ಯಾರನ್ನೂ ನಂಬದ, ಕೊಂಚ ಭೂಮಿ ಮತ್ತು ದುಡಿಮೆಯೇ ದೇವರೆಂದು ನಂಬಿದ್ದ ಚೌಡರೆಡ್ಡಿ. ರಂಗಪ್ಪನನ್ನ ನಂಬಿ, ರೇಶ್ಮೆಗೂಡು ಮಾರಿ, ಹಣ ತಂದುಕೊಡೆಂದು ಜವಾಬ್ದಾರಿ ವಹಿಸಿದಾಗ, ತನ್ನ ಅಜ್ಞಾನದಿಂದಾಗಿ ತನ್ನ ಹಣದ ಜೊತೆಗೆ, ಚೌಡರೆಡ್ಡಿಯ ಹಣವನ್ನೂ ಕಳೆದುಕೊಂಡು, ಚೌಡರೆಡ್ಡಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೆ, ಓ ಇನ್ನು ಆ ಚೌಡರೆಡ್ಡಿ ಕಾಗೆಯಾಗಿ, ರೇಶಿಮೆ ಹುಳುವಾದ ನನ್ನನ್ನು ಕುಕ್ಕಿಕುಕ್ಕಿ ತಿನ್ನುವುದು ಗ್ಯಾರಂಟಿ ಎಂದು ಭ್ರಮಿಸುತ್ತಾ ಅವನಿಗೆ ಸುದ್ದಿ ಮುಟ್ಟಿಸುತ್ತಾನೆ. ಸುದ್ದಿ ತಿಳಿದ ಚೌಡರೆಡ್ಡಿ, ‘ರಂಗಪ್ಪ ಬೇಕಂತಲೇ ತನಗೆ ಮೋಸ ಮಾಡುತ್ತಿದ್ದಾನೆಂದು’ ತಿಳಿದು, ರಂಗಪ್ಪನ ಮನೆಗೆ ಬಂದು ಮಡದಿಯೊಂದಿಗೆ ಸಿಟ್ಟಿನಲ್ಲಿ ಆಡಬಾರದ ಮಾತ ಆಡಿಹೋಗಿರುತ್ತಾನೆ. ಇತ್ತ ಮನೆಗೆ ಬಂದ ರಂಗಪ್ಪ, ಹಸಿವಾಗಿದ್ದರೂ ಉಣ್ಣದೆ, ಭಯದಲ್ಲಿ ಚೌಡರೆಡ್ಡಿಯ ಕಾಣಲು ಬಂದಾಗ, ‘ರಂಗಪ್ಪ, ಏನೋ ದುಡ್ಡು ಕಳ್ದೋದ ಬೇಜಾರ್ಗೆ, ನಿನ್ ಹೆಣ್ತಿ ಮೇಕೆ ಏನೇನೋ ರೇಗಾಡ್ದೆ. ಮನಸ್ಗಾಕ್ಕೋ ಬೇಡ’ ಎನ್ನುವ ಚೌಡರೆಡ್ಡಿಯ ಮಾತು – ವರ್ತನೆ ರಂಗಪ್ಪನಿಗೆ ಆಘಾತ ತಂದು, ಕಣ್ಣಲ್ಲಿ ಹಾಗೆ ನೀರು ಜಿನುಗತೊಡಗುತ್ತವೆ.

ಈ ಕತೆಯಲ್ಲಿನ ಸಹಜ ತಿರುವು ಒಬ್ಬ ಮತ್ತೊಬ್ಬನನ್ನು ಸರಿಯಾಗಿ ಅರಿತಿಲ್ಲದ ಮನುಷ್ಯನ ಮೂರ್ಖತನವನ್ನು ವ್ಯಂಗ್ಯ ಮಾಡುತ್ತದೆ.

ಚಿಕ್ಕಂದಿನಲ್ಲೇ ಗಂಡನನ್ನ ಕಳೆದುಕೊಂಡು ಸಮಾಜದ ಯಾವ ಶಾಸ್ತ್ರಗಳಿಗೂ ಬೆದರದೆ ತನ್ನಿಚ್ಛೆಯಂತೆ ಬದುಕುತ್ತಾ, ತನ್ನ ಮಗ, ಸೊಸೆ, ಮೊಮ್ಮಗಳ ಬದುಕಿಗಾಗಿ ಜೀವ ಮೀಸಲಿಡುವ, ತನ್ನ ಮಗ ಸೊಸೆ ತನ್ನಿಂದ ದೂರವಾದರೂ, ಅವರು ಇನ್ನೆಂದೂ ತನ್ನನ್ನು ಕಾಣಲು ಬಾರರು ಎಂಬ ನಂಬಿಕೆಯಲ್ಲಿ ಕಳಿತು, ಉಸಿರಿನ ಹಣ್ಣು ಸಾವೆಂಬ ಗಿಳಿ ಕೆದಕಿ ತನ್ನ ತಿನ್ನುವುದು ಎಂಬ ಸತ್ಯ ಗೊತ್ತಿರುವಂತೆ ಬದುಕುತ್ತಾ ಇರುವಾಗ, ಮತ್ತೆ ಊರಿಗೆ ಮಗ ಬರುತ್ತಾನೆ ಎಂದು ತಿಳಿದು ಸಂಭ್ರಮಪಟ್ಟು, ಮಗ ಊರಿಗೆ ಬರುತ್ತಿರುವುದರ ಹಿಂದಿನ ಲೋಭದ ಕಾರಣ ತಿಳಿದರೂ, ಮನಸ್ಸು ಕೆಡಿಸಿಕೊಳ್ಳದೆ, ಮತ್ತೆ ಎಳೆಯ ರೇಶಿಮೆಯ ಹುಳುವಿನಂತೆ ಮಗ, ಸೊಸೆ, ಮೊಮ್ಮಗಳ ಏಳಿಗೆಗಾಗಿ ಗೂಡು ಕಟ್ಟುತ್ತಾ, ಗರಿಕಾಣುತಿಹ ಮುದಿಯ ಭಾವದ ಎಚ್ಚರದಂತೆ ಇರುವವಳು, ಊರಿನ ಜನಗಳ ಕಣ್ಣಿಗೆ ಗಯ್ಯಾಳಿಯಾದರೂ ಪ್ರೇಮತುಂಬಿದ ಕರುಣಾಮಯಿಯಾದ ನಂಜವ್ವಳ ಕತೆಯೇ ‘ಗಯ್ಯಾಳಿ’ ಕತೆ.

‘ಎಮ್ಮೆ ಕರು’ ಕತೆಯಲ್ಲಿ ಹಳ್ಳಿಯ ಜೀವನಕ್ಕೂ ಈ ಆಧುನಿಕ ಜೀವನಶೈಲಿ ಕಾಲಿಟ್ಟು ಇಡೀ ಬದುಕಿನ ಸೂತ್ರವನ್ನೇ ಬದಲಿಸಿ, ಹಳ್ಳಿಗಳಲ್ಲೂ ಕೂಡ ಪ್ರತಿಯೊಂದನ್ನೂ ಲಾಭಕೇಂದ್ರಿತವಾಗಿ ನೋಡುವ ಮನೋಭಾವದ ನಿರರ್ಥಕತೆಯನ್ನು ಸೂಚಿಸಿ, ಜೀವಪ್ರೇಮ, ಜೀವನಪ್ರೇಮವಷ್ಟೇ ನಮ್ಮನ್ನೆಲ್ಲ ಕಾಪಾಡುವುದು ಎಂದು ನಂಬಿರುವ ತಾಯಕಣ್ಣಿನ ಗಟ್ಟಿಗಿತ್ತಿ, ಜಾಣ ಮುದುಕಿ ಸುಬ್ಬಕ್ಕನ ಜೀವನೋತ್ಸಾಹ ನಮಗೆಲ್ಲ ಪಾಠವಾಗುತ್ತದೆ.

‘ಒಂದೆಂಬ ಊರು’ ಕತೆಯಲ್ಲಿ ಶಶಿರೇಖಾ ಎಂಬ ಅನಾಥ ಹೆಣ್ಣುಮಗಳೊಬ್ಬಳು ತನ್ನ ಜೀವನ ಕಟ್ಟಿಕೊಳ್ಳುವ ಬಗೆಯನ್ನು ಪುರಾಣದ ಮಿಥ್‍ನೊಂದಿಗೆ ಸಮೀಕರಿಸುತ್ತಾ ಹೊಸೆಯುವ ಬಗೆಯಲ್ಲಿ ಹೊಸತನ ಇದೆ. ತನ್ನ ಬದುಕಿಗೆ ಜೊತೆಯಾಗಿ ನಿಂತ ರಾಮೇಗೌಡನ ಹಿರಿಯ ಹೆಂಡತಿಯ ಮಗ ಮತ್ತು ತನ್ನ ಮತ್ತು ರಾಮೇಗೌಡನ ಸಂಬಂಧದಿಂದ ಹುಟ್ಟಿದ ಮಗಳು ಮುಂದೆ ಪ್ರೇಮಿಗಳಾಗುವ ವಿಚಿತ್ರ ಸಂಬಂಧದ ಕತೆಯನ್ನು ಹೇಳುವ (ಮಾಸ್ತಿಯವರ ಪಕ್ಷಿ ಜಾತಿಕತೆಯನ್ನು ನೆನಪಿಸುವ) ಈ ಕತೆ ಎಲ್ಲಾ ಸಂಬಂಧಗಳನ್ನು ಮೀರಿ ಮನುಷ್ಯನ ಆದಿಮ ಪ್ರವೃತ್ತಿಯನ್ನು ನೆನಪಿಸುತ್ತದೆ. ಈ ಕತೆಗೆ ಮತ್ತು ಇಲ್ಲಿನ ಶಶಿರೇಖಾ ಮತ್ತವಳ ಮಗಳ ಪರವಾಗಿ ಸ್ವತಃ ಸೀತೆಯೇ ನಿಲ್ಲುವ ಈ ಕತೆ ವಿಶೇಷವಾದದ್ದು.

ಹೀಗೆ ಚೀಮನಹಳ್ಳಿಯವರ ‘ಜೀವ ರೇಶಿಮೆ’ ಸಂಕಲನದ ಕತೆಗಳು ಆಧುನಿಕ ಬದುಕು ಮನುಷ್ಯನ ವ್ಯಕ್ತಿತ್ವಕ್ಕೆ ಕಟ್ಟುವ ಕೃತಕ ಆವರಣಗಳು ಒಂದೆರಡಲ್ಲ ಹಾಗೂ ಅವು ಅವನ ಬರೀ ಚರ್ಮದ ಹೊರಗಷ್ಟೇ ಇರದೇ ಆತ್ಮದ ಒಳಗೂ ಸೇರಿ ಆತನಲ್ಲಿ ಜೀವಪರತೆ/ ಮಾನವೀಯತೆಯ ಮಾಂತ್ರಿಕ ಸ್ಪರ್ಶಕ್ಕೆ ಎರವಾಗಿವೆ. ಆ ಸ್ಪರ್ಶಕ್ಕೆ ಮತ್ತೆ ಒಳಗಾದ ಗಳಿಗೆ ಅವನಲ್ಲಿ ಉಂಟಾಗುವ ತಲ್ಲಣ, ಪಾಪಪ್ರಜ್ಞೆ, ದಿಗ್ಭ್ರಮೆ, ಕೋಲಾಹಲಗಳು ಆಧುನಿಕ ಬದುಕಿನ ಎಲ್ಲ ಆಶೋತ್ತರಗಳ ನಿರುಪಯುಕ್ತತೆಯನ್ನು ಎತ್ತಿ ತೋರಿಸಿ, ತನ್ನ ಬದುಕಲ್ಲಿ ‘ಮಹಾಕಣ್ಮರೆ’ಯಾಗಿಸಿಕೊಂಡಿರುವ ಮತ್ತು ಈಗ ಅವನ/ ಅವಳ ಬದುಕಿಗೆ ಅತ್ಯಗತ್ಯವಾದ ಮಾನವೀಯತೆ, ಕರುಣೆ, ಅನುಕಂಪ, ಜೀವಪರತೆಯ ಪ್ರಾಮುಖ್ಯದ ಸರಳ ಸತ್ಯವನ್ನು ಹೇಳುತ್ತವೆ.

ಆಧುನಿಕ ಮನುಷ್ಯನ ಕ್ರೌರ್ಯವನ್ನು, ಅನ್ಯಾಯವನ್ನು ಯಾವೊಂದು ಚೀತ್ಕಾರವಿಲ್ಲದೆ ತಣ್ಣಗೆ ಹೇಳುತ್ತಲೇ ಅವನ ಜೀವನದ ವಿಕೃತಿಯನ್ನು ಮಾನವೀಯತೆಯೆಂಬ ಮದ್ದಿನಿಂದಷ್ಟೇ ಈ ಸತ್ಯೋತ್ತರ (ಪೋಸ್ಟ್ ಟ್ರೂತ್) ಕಾಲದಲ್ಲಿ ಚಿಕಿತ್ಸೆ ನೀಡಿ ಸುಧಾರಿಸಲು ಸಾಧ್ಯವೆಂಬ ಸತ್ಯವನ್ನು ಇಲ್ಲಿನ ಕತೆಗಳು ಎದುರುಗಿರುವವರಿಗೆ ಹೇಳಿದ ಕತೆಗಳಂತೆ ಕಂಡರೂ ಇವು ಏಕಾಂತದಲ್ಲಿ ಬರೆದ ಕತೆಗಳಂತಿವೆ.

ಇವತ್ತು ನಗರಗಳಲ್ಲಿ ಬದುಕುತ್ತಿರುವ ಬಹುಸಂಖ್ಯಾತರು ತಮ್ಮ ಹಳ್ಳಿಯ ಬದುಕಿನಿಂದ ಪಡೆದದ್ದು ಎಷ್ಟು ಮುಖ್ಯವೋ ಕಳೆದುಕೊಂಡದ್ದು ಕೂಡ ಅಷ್ಟೇ ಮುಖ್ಯವೇನೋ ಎಂಬ ಸತ್ಯವನ್ನು ಹೇಳುತ್ತಲೇ, ಇವೆರಡರಿಂದಲೂ ಪಡೆಯಬಲ್ಲ ಕಲಾತ್ಮಕ ಲೇಖಕ ಚೀಮನಹಳ್ಳಿ ರಮೇಶಬಾಬು ಎಂಬುದನ್ನು ಇಲ್ಲಿನ ಕತೆಗಳು ದೃಢಪಡಿಸುತ್ತವೆ.

ಕನ್ನಡದ ಪರಂಪರಾಗತ ಜೀವನದ ಅನುಭವ, ಕನ್ನಡದ ಸೊಗಸು ಮತ್ತು ಅಭಿರುಚಿಯನ್ನು ಅಷ್ಟೇ ತಾಜಾ ಆಗಿ ಕಟ್ಟಿಕೊಡಬಲ್ಲ ಕತೆಗಾರನೊಬ್ಬ ಬದುಕಿನ ತೀರಾ ಕಹಿಯಾದ ವಿಷಯವಾದರೂ ಅದನ್ನು ಎದುರಿಸಿ, ಯೋಚಿಸಿ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳುವ ಪಾತ್ರಗಳು ಇಲ್ಲಿನ ಕತೆಗಳಲ್ಲಿವೆ. ಈ ಸಂಕಲನದ ಒಂದೊಂದು ಪಾತ್ರಗಳು ಬದುಕಿನ ಅನುಭವದಿಂದ ಪರಿಪಕ್ವಗೊಂಡಂತಹವು ಎಂದು ಯಾವುದೇ ಮುಲಾಜಿಲ್ಲದೆ ಉಚಾಯಿಸಿ ಹೇಳಬಹುದು.

ಚೀಮನಹಳ್ಳಿ ರಮೇಶಬಾಬು ಅವರ ಸ್ತಿಮಿತ, ಪಕ್ವ ಪ್ರತಿಭೆಯ ಇಲ್ಲಿನ ಕತೆಗಳು ಒಂದೇ ಪೊದೆಯಂತಹ ಮಲ್ಲಿಗೆ ಗಿಡದಲ್ಲಿ ಒತ್ತೊತ್ತಾಗಿ ಅರಳಿದ ಮಲ್ಲಿಗೆಯ ಹೂವುಗಳಂತೆ ಗಾಢ ಸುಗಂಧವನ್ನು ಬೀರುತ್ತವೆ. ಇಲ್ಲಿನ ಯಾವ ಕತೆಯಲ್ಲೂ ಕೂಡ ಸಾಹಿತ್ಯ ರಚನೆಗೆ ವಿಮರ್ಶಕರು ಹೇಳುವ ಪ್ರತಿಮೆಯಾಗಲಿ ಅಥವಾ ಬರವಣಿಗೆಯ ಶಿಷ್ಟಾಚಾರಗಳ ಭಾರವಿಲ್ಲದೆ ಸಹಜ ಬದುಕಿನ ನೆರಳಚ್ಚಿನಂತಿವೆ. ಬದುಕಿನಿಂದ ಕಲಿತು ಮತ್ತು ನಮ್ಮ ಕಾಲವನ್ನು ಬದುಕುತ್ತಲೇ, ಆ ಕಾಲದಿಂದ ಒಳನೋಟವನ್ನ ಪಡೆಯುತ್ತಲೇ ತಿರುಚಿ ಕ್ಲಿಷ್ಟಗೊಳಿಸಲೂ, ಕ್ಲಿಷ್ಟವಾದದ್ದನ್ನು ಸರಳಗೊಳಿಸಲೂ ಹೋಗಿಲ್ಲದ ಇಲ್ಲಿನ ಕತೆಗಳು, ಕತೆಗಾರನೊಬ್ಬ ಕಂಡುಕೊಂಡ ಸತ್ಯಗಳನ್ನು ಹೇಳುವುದಕ್ಕಾಗಿ ಅನಗತ್ಯ ತಂತ್ರಗಳನ್ನು ಅವಲಂಬಿಸದೆ, ಹಳ್ಳಿಗನೊಬ್ಬ ಸಹಜವಾಗಿ ಬದುಕುವ ಬದುಕಿನ ಕತೆಗಳಂತೆ ಇವೆ.

ಈ ಎಲ್ಲ ಗುಣಗಳ ಜೊತೆಜೊತೆಗೇ ಮೊದಲ ಓದಿಗೆ ಈ ಕೆಲವು ಮಿತಿಗಳು ತಪ್ಪಿಸಿಕೊಳ್ಳದೆ ಮನಸ್ಸಿನಲ್ಲಿ ಉಳಿದುಬಿಟ್ಟವು:

1) ಸೋಷಿಯಲ್ ಮೀಡಿಯಾವನ್ನು ಸುದ್ದಿಯ ಮೂಲವನ್ನಾಗಿ ಬಳಸುವುದು ಹೆಚ್ಚಾಗಿರುವ, ಅನಿವಾರ್ಯವೂ ಆಗಿರುವ ಈ ಕಾಲದಲ್ಲಿ ಸೋಷಿಯಲ್ ಮೀಡಿಯಾದ ಬಗೆಗೆ ಕತೆಗಾರ ರಮೇಶ್ ಬಾಬು ಅವರ ನೆಗೆಟಿವ್ ಮನೋಭಾವ ಇಲ್ಲಿನ ಸಾಕಷ್ಟು ಕತೆಗಳಲ್ಲಿ ಎದ್ದುಕಾಣುತ್ತದೆ. ಬದುಕಿನ ಓಟದಲ್ಲಿ ಸೋಷಿಯಲ್ ಮೀಡಿಯಾ ಕೂಡ ಇಂದು ಮಾನವೀಯತೆಯನ್ನು ರೂಪಿಸುವ ಹಾದಿಯಲ್ಲಿ ಹೆಚ್ಚಲ್ಲದಿದ್ದರೂ ಕನಿಷ್ಠ ಸೇವೆ ಸಲ್ಲಿಸುತ್ತಿದೆ. ಇದೊಂದು ಅಂಶ ಮಾತ್ರ ಅವರ ಕತೆಗಳಲ್ಲಿನ ದೋಷದಂತೆ ಕಾಣುತ್ತದೆ.

2) ರಮೇಶ್ ಬಾಬು ಅವರ ಕತೆಗಳಲ್ಲಿ ಮತ್ತೊಂದು ಶಕ್ತಿ ಮತ್ತು ದೌರ್ಬಲ್ಯವೂ ಆಗಿರುವುದು ಅವುಗಳಲ್ಲಿ ಹುದುಗಿರುವ ಸಣ್ಣಸಣ್ಣ ವಿವರಗಳು. ಆ ವಿವರಗಳನ್ನು ಕಟ್ಟುತ್ತಲೇ ಕತೆಗೊಂದು ಆವರಣ ಕಲ್ಪಿಸಿಕೊಡುವ ಅವರ ಈ ಗುಣ ಕೆಲವು ಕಡೆಯಲ್ಲಿ ಕತೆಯ ಓಟವನ್ನು ನಿಲ್ಲಿಸಿಬಿಡುತ್ತದೆ.

ಕೊನೆಯದಾಗಿ: ಈ ಕತೆಗಳಿಗೆ ಮುನ್ನುಡಿ ಬರೆಯುತ್ತಾ ಕತೆಗಾರ ಕೇಶವ ಮಳಗಿ ಅವರು ಮುನ್ನುಡಿಯ ಕಡೆಯಲ್ಲಿ ಹೇಳಿರುವ ಈ ಮಾತುಗಳು ಬಹಳ ಮುಖ್ಯವಾದವು. “ಕನ್ನಡ ಕಥನ ಪರಂಪರೆಯ ಬೆಳವಣಿಗೆಯ ದೃಷ್ಟಿಯಿಂದ ಹೊಸ ಕಥನ ಮಾರ್ಗದಲ್ಲಿ ನಡೆಯುತ್ತಿರುವ ಹೊಸ ತಲೆಮಾರಿನ ಹೆಸರುಗಳಲ್ಲಿ ರಮೇಶಬಾಬು ಖಂಡಿತಾ ಪ್ರತ್ಯೇಕವಾಗಿ ನಿಲ್ಲಬಲ್ಲ ಸಾಮಥ್ರ್ಯ ಪಡೆದಿದ್ದಾರೆ. ಆದರೆ ವಿಸ್ಮೃತಿಯಿಂದ ನರಳುತ್ತಿರುವ, ಪುರಾತನರಿಂದ ಕಿಕ್ಕಿರಿದಿರುವ ಕನ್ನಡ ವಿಮರ್ಶೆಗೆ ಇವೆಲ್ಲಾ ಎಲ್ಲಿ ಕಾಣಬೇಕು? ಹೇಗೆ ಅರ್ಥವಾಗಬೇಕು?” ಎಂಬ ಬಹುಮುಖ್ಯ ಪ್ರಶ್ನೆಯನ್ನು ಕೇಳುತ್ತಲೇ ರಮೇಶ್ ಬಾಬು ಅವರ ಕಥೆಗಳ ತಾಕತ್ತನ್ನು ಪರೋಕ್ಷವಾಗಿ ಎತ್ತಿ ಹಿಡಿಯುತ್ತವೆ.

ಈ ಕಾರಣದಿಂದಲೇ ಓದುಗನಲ್ಲಿ ಕೃತಜ್ಞತೆಯನ್ನು ಉಕ್ಕಿಸುವ ಕತೆಗಾರ ಚೀಮನಹಳ್ಳಿ ರಮೇಶ ಬಾಬು.


ಇದನ್ನೂ ಓದಿ: ತಲೆಕೆಳಗಾಗಿರುವುದು ನಾನಲ್ಲ; ನಿಮ್ಮ ಶಿಕ್ಷಣ ವಿಧಾನ: ಕಲಾವಿದನ ಕಲ್ಪನೆ ವೈರಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...