Homeಅಂಕಣಗಳುಪುಟಕ್ಕಿಟ್ಟ ಪುಟಗಳುಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ

ಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ

- Advertisement -
- Advertisement -

ಪುಟಕಿಟ್ಟ ಪುಟಗಳು: ಯೋಗೇಶ್ ಮಾಸ್ಟರ್‌

ಗೊಂಡ್ವಾನ ಸಂಸ್ಕೃತಿ ಅಥವಾ ಸಿಂಧೂ ಸಂಸ್ಕೃತಿಯೆಂದು ಕರೆಯಲಾಗುವ ಕೃತಿಯೊಂದನ್ನು ಎಂ ಆರ್ ಪಂಪನಗೌಡ ಸಂಪಾದಿಸಿದ್ದಾರೆ. ಅದರಲ್ಲಿ ಕೆಲವು ತೀವ್ರ ಕುತೂಹಲಕರವಾದ ಅಂಶಗಳು ಶಿವನ ಬಗ್ಗೆ ಬೆಳಕು ಚೆಲ್ಲುತ್ತವೆ.

ಸಿಂಧು ಕೊಳ್ಳದ ಸಂಸ್ಕೃತಿಯನ್ನು ಹರಪ್ಪೀಯ ಸಂಸ್ಕೃತಿ ಎಂದು ಗುರುತಿಸಲಾಗುವುದು. ಕ್ರಿ ಪೂ 2500 ರಿಂದ ಕ್ರಿ ಪೂ 1800ರವರೆಗೆ ಇದರ ಅವಧಿಯೆಂದು ಗಣಿಸಲಾಗಿದೆ. ಇದು ವಿಶ್ವದ ಪ್ರಾಚೀನ ನಾಗರೀಕತೆಯ ಸಾಂಸ್ಕೃತಿಕ ನೆಲೆಗಳಲ್ಲಿ ಒಂದು. ಇದನ್ನು ಆರ್ಯಪೂರ್ವದ್ದೆಂದು ಶೋಧಿಸಲಾಗಿದೆ. ಬಹುಸಂಖ್ಯಾತರು ಇದನ್ನು ದ್ರಾವಿಡ ಸಂಸ್ಕೃತಿಯ ಮೂಲಸಂಸ್ಕೃತಿ ಎಂದು ಹೇಳುವರು. ಇದರ ಮೂಲಿಗರು ನಾಗವಂಶಿಗಳು, ಪಶುಪತಿ ಆರಾಧಕರು ಮತ್ತು ದ್ರಾವಿಡ ಭಾಷಿಗ ಗೊಂಡರು ಎಂಬುದು ಗೊಂಡಿ ಧರ್ಮದರ್ಶಕ ಮೋತಿರಾವಣ ಕಂಗಾಲಿಯವರ ವಾದ.

ಆರ್ಯರ ಆಕ್ರಮಣದ ಪರಿಣಾಮ

ಆರ್ಯರ ಆಕ್ರಮಣದ ನಂತರ ಸಿಂಧುಕೊಳ್ಳದ ದ್ರಾವಿಡರು ದೇಶಾಂತರವಾದರು. ಬಹುಸಂಖ್ಯಾತರು ಮಧ್ಯ ಮತ್ತು ದಕ್ಷಿಣ ಭಾರತಕ್ಕೆ ತಳ್ಳಲ್ಪಟ್ಟು ಕಾಲಾಂತರದಲ್ಲಿ ನರ್ಮದಾ, ಗೋದಾವರಿ, ಕೃಷ್ಣಾ, ತುಂಗಭದ್ರಾ, ಕಾವೇರಿ ಇತ್ಯಾದಿ ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸಲಾರಂಭಿಸಿದರು. ಸಿಂಧು ಕೊಳ್ಳದ ಸಿಂಧರು ಕಾಲಾಂತರದಲ್ಲಿ ಸಿಂಧರು ಮತ್ತು ಸೇಂದ್ರಕರಾಗಿ ವಿಭಜನೆಗೊಂಡು ಸಿಂಧರು ಗ್ವಾಲಿಯರ್ ಪ್ರದೇಶದ ಕಾಲಿ ಸಿಂಧದಲ್ಲಿ ಮತ್ತು ಸೇಂದ್ರಕರು ಮಧ್ಯಭಾರತದ ಮತ್ತು ದಕ್ಷಿಣಭಾರತದಲ್ಲಿ ರಾಜಕೀಯ ಸ್ಥಾಪಿಸಿದ ಮನೆತನಗಳು ಕಾಣಸಿಗುವುದೆಂದು ವಿಶ್ರಾಂತ ಕುಲಪತಿ ಡಾ. ಹೀರಾಲಾಲ್ ಶುಕ್ಲ ಅವರು ಹೇಳುವುದರಲ್ಲಿ ಹುರುಳಿದೆ. ಈ ಮನೆತನಗಳು ಮಧ್ಯಪ್ರದೇಶ, ಛತ್ತೀಸಗಡ, ಒಡಿಸ್ಸಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಇತ್ಯಾದಿ ಕಡೆಗಳಲ್ಲಿ ಇರುವುದಕ್ಕೆ ನಿದರ್ಶನಗಳಿವೆ. ಸಿಂಧರ ಅಥವಾ ಅವರ ಕಳ್ಳುಬಳ್ಳಿಯ ವಿವಿಧ ಮನೆತನಗಳು ಈ ಪ್ರದೇಶವನ್ನು ಆಳಿರುವ ಹಿನ್ನೆಲೆಯಲ್ಲಿ ನಾಗ, ಸಿಂಧ, ಗೊಂಡ ಹೆಸರಿನ ಸ್ಥಳನಾಮಗಳು ಈ ಪ್ರದೇಶದಲ್ಲಿ ಹೇರಳವಾಗಿ ಕಾಣಸಿಗುವವು. ಈ ನಾಗ ಸಿಂಧ ಗೊಂಡರು ಇಂದು ಕರ್ನಾಟಕದಲ್ಲಿ ಗೊಂಡ, ಲಾಳಗೊಂಡ, ಕುರುಬ, ಕುಡಿಒಕ್ಕಲಿಗ, ಆದಿಬಣಜಿಗ, ನೋಳಂಬ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವವರು. ಇವರೆಲ್ಲರ ದೈವ ಮಹಾಲಿಂಗ. ಇದರ ಮೂಲ ಸ್ವರೂಪಿ ಸಿಂಧುಕೊಳ್ಳದಿಂದ ಮಧ್ಯಭಾರತಕ್ಕೆ ತಳ್ಳಲ್ಪಟ್ಟ ಆದಿವಾಸಿ ಗೊಂಡರು ಪಶುಪತಿ (ಫೆರಸಾಪೆನ್) ಹೆಸರಿನ ದೈವವನ್ನು ಪ್ರಾಕೃತಿಕವಾಗಿ ಆರಾಧಿಸುವರು.

ಗೊಂಡ್ವಾನ ಮಹಾದ್ವೀಪದ ಇತಿಹಾಸವು ಬಹಳ ಪುರಾತನವಾದದ್ದು. ಇಂದಿಗೆ ಸುಮಾರು ಆರುಸಾವಿರ ವರ್ಷ ಪೂರ್ವದಲ್ಲಿ ಭರತವರ್ಷದಲ್ಲಿ ಗೊಂಡಿ ಸಂಸ್ಕೃತಿ ಪ್ರಭಾವಯುತವಾಗಿತ್ತು. ಆದ್ದರಿಂದ ಭಾರತಕ್ಕೆ ‘ಕುಯವರಾಷ್ಟ್ರ’ ಅಥವಾ ‘ಗೊಂಡ ರಾಷ್ಟ್ರ’ವೆಂದು ಕರೆಯಲಾಗುತ್ತಿತ್ತು ಎಂದು ಋಗ್ವೇದದಲ್ಲಿ ಇದೆಯೆಂದು ಹೇಳಲಾಗುತ್ತದೆ.

ಭಾರತಕ್ಕೆ ಬಂದ ಆರ್ಯರು ಆಗ ಅಸ್ತಿತ್ವದಲ್ಲಿದ್ದ ಗೊಂಡಿ ಭಾಷೆಯ ಶಬ್ದಗಳನ್ನು ತಮ್ಮ ಸಂಸ್ಕೃತ ಭಾಷೆಗೆ ತೆಗೆದುಕೊಂಡರು. ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾದ ಬ್ರಾಡ್ಸ್ ವೀಮ್ಸ್ ಹರ್ನಲ್ ಮತ್ತು ಗ್ರೀಯರ್ ಸನ್‍ರ ಅಭಿಪ್ರಾಯದ ಪ್ರಕಾರ ಪ್ರಾಚೀನವಾದದ್ದು ಪ್ರಾಕೃತ, ಉಳಿದವು ಆದಿವಾಸಿ ಭಾಷೆಗಳು. ಇವುಗಳಲ್ಲಿ ಗೊಂಡಿ ಭಾಷೆಯೂ ಒಂದಾಗಿದೆ.

ಸಿಂಧು ಬಯಲಿನ ಹರಪ್ಪ ಮೊಹೆಂಜದಾರೋ ಸಂಸ್ಕೃತಿಯ ಕಾಲಘಟ್ಟದಲ್ಲಿ ಇದ್ದ ಚಿತ್ರಲಿಪಿಯನ್ನು ಗೊಂಡರು ಇಂದಿಗೂ ಬಳಸುತ್ತಿದ್ದು ಇದನ್ನು ಗೊಂಡಿ ಭಾಷೆಯ ಮೂಲಕವೇ ಓದಲು ಸಾಧ್ಯವಾಗಿದೆ. ಪ್ರಾಯಶಃ ಈ ಚಿತ್ರಲಿಪಿಯೇ ಮನುಕುಲದ ಮೊದಲ ಲಿಪಿ.

ಗೊಂಡರ ಪೌರಾಣಿಕ ಐತಿಹ್ಯದ ಗೋತ್ರಗಳು

ಗೊಂಡರ ಪೌರಾಣಿಕ ಐತಿಹ್ಯದ ಪ್ರಕಾರ 88 ಸಂಭೂ (ಶಂಭು) ಗಳಿದ್ದು, ಅವರಲ್ಲಿ 44ನೇ ಶಂಭೂವಿನ ಶಿಷ್ಯನಾದ ಕುಪಾರ ಲಿಂಗೋನು, ಕಾಳಿಕಂಕಾಳಿ ಹಾಗೂ ಸುಖಾಶ್ರಯರ 33 ಕೋಟಿ (ಗರ್ಭಸ್ಥ) ಮಕ್ಕಳನ್ನು ಕೊಯ್ಲಿ ಕಛಾರಗಢ ಗುಹೆಯ ಬಂಧನದಿಂದ ಬಿಡಿಸಿ, ಲಾಂಜಿಕೋಟ್‍ನಲ್ಲಿ ಗೋತ್ರ, ದೇವತೆಗಳ ಗುಂಪುಗಳಾಗಿ ವಿಂಗಡಿಸಿದನು. ಹೀಗೆ ವಿವರಿಸುವ ಆ ಗೋತ್ರ ವ್ಯವಸ್ಥೆಯ ವೃಕ್ಷದಲ್ಲಿ ಅವುಗಳು ಹೇಗೆ ಗೋತ್ರಗಳಾಗಿ ಮುಂದುವರಿದವು ಎಂದು ವರ್ಣಿಸುತ್ತಾರೆ. ಮೂವತ್ತಮೂರು ಕೋಟಿ ದೇವತೆಗಳ ವಿಷಯವು ಇಲ್ಲಿಯೂ ಪ್ರಸ್ತಾಪವಾಗುವುದನ್ನು ಕಂಡರೆ, ಬಹುಶಃ ಗೊಂಡರ ಪುರಾಣ ರಚನಾಕಾರರೂ ವೈದಿಕ ಪುರಾಣದ ರಚನಾಕಾರರ ಪ್ರಭಾವಕ್ಕೆ ಒಳಗಾಗಿದ್ದಾರೇನೋ ಎಂದು ಅನ್ನಿಸಿದರೂ, ವೈದಿಕರೇ ಗೊಂಡರ ಪುರಾಣದ ಪ್ರಭಾವಕ್ಕೆ ಒಳಗಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಹೀಗೆ ವಿಭಾಗವಾಗಿರುವ ಗೊಂಡರ 750 ಗೋತ್ರಗಳನ್ವಯ ಪ್ರತಿಯೊಂದು ಗೋತ್ರಕ್ಕೂ ತಾವು ಪಾಲನೆ, ಪೋಷಣೆ, ರಕ್ಷಣೆ ಮಾಡಬೇಕಾದ ಸಸ್ಯ, ಪ್ರಾಣಿ, ಪಕ್ಷಿಗಳನ್ನು ನಿರ್ಣಯಿಸಿ ಒಂದೊಂದು ಗೋತ್ರಕ್ಕೆ 3 ಗಣ ಚಿಹ್ನೆಗಳನ್ನು 44ನೇ ಸಂಭೂವಿನ ಶಿಷ್ಯ ಕುಪಾರ ಲಿಂಗೋ ನಿರ್ಣಯಿಸಿರುತ್ತಾನೆ. ಗೊಂಡರದು ಏಕವರ್ಣವ್ಯವಸ್ಥೆಯಾದರೆ, ಮುಂದೆ ಬಂದ ಆರ್ಯರದು ಚಾತುರ್ವಣದ ವ್ಯವಸ್ಥೆ.

ಮುಂದೆ ಗೊಂಡರ 88ನೇ ಸಂಭೂ ಶೇಖರನ ಆಳ್ವಿಕೆ ಕ್ರಿಪೂ 6000ರಲ್ಲಿ ಆರಂಭವಾಗಿ ಕ್ರಿಪೂ 3102ರಲ್ಲಿ ಮುಗಿದಿದೆ. ಸುಮಾರು ಮೂರು ಸಾವಿರ ವರ್ಷಗಳ ಅಂತರದಲ್ಲಿ. ಇದನ್ನು ಲಾಳಗೊಂಡರ ನಾಳಗೊಂಡೇಶ್ವರ ಪುರಾಣಕಾವ್ಯಂನ ಹಿನ್ನೆಲೆಯಲ್ಲಿ ಹೀಗೆ ವ್ಯಾಖ್ಯಾನಿಸಬಹುದು.

ನಾಳಗೊಂಡೇಶ್ವರನು ಕಲಿಯುಗದ ಆರಂಭದಲ್ಲಿದ್ದವನೆಂದೂ ಅವನ ಸಮಾಧಿಯನ್ನು ಕೇದಾರದಲ್ಲಿ ಬಾಣಾಸುರನ ಮಗಳಾದ ಶ್ರೀಕೃಷ್ಣನ ಮೊಮ್ಮಗ ಅನಿರುದ್ಧನ ಹೆಂಡತಿಯಾದ ಉಷಾದೇವಿಯು ಸ್ಥಾಪಿಸಿದ್ದಾಳೆಂದು ಹೇಳಲಾಗಿದೆ. ನಾಳಗೊಂಡೇಶನು ತನ್ನ ಅನುಯಾಯಿಗಳಿಗೆ ದಕ್ಷಿಣಕ್ಕೆ ಹೋಗಲು ನಿರ್ದೇಶಿಸಿದನು. ಶಾಂತಿಪ್ರಿಯರಾದ ನೀವು ಅಂದರೆ ಗೊಂಡರು ದಕ್ಷಿಣಕ್ಕೆ ಹೋದರೆ ನಿಮಗೆ ಊರ, ನಾಡಿನ ಯಜಮಾನ್ಯ ಸಿಗುತ್ತದೆ. ಇನ್ನು ಮುಂದೆ ದ್ರಾವಿಡ ಆರ್ಯ ಘರ್ಷಣೆ ಹೆಚ್ಚುತ್ತದೆ ಎಂಬ ಮಾತಿನ ಅನ್ವಯ ಭಿಲ್ಲ, ಖೋತ, ಗೊಂಡ ಇತ್ಯಾದಿ ಬುಡಕಟ್ಟುಗಳು ದಕ್ಷಿಣಕ್ಕೆ ಚಲಿಸಿವೆ ಎನ್ನಬಹುದು. ಇದನ್ನು ಗೆಜಿಟಿಯರ್ಸ್‍ಗಳಲ್ಲಿ ಗೊಂಡರನ್ನು ರಾವಣ ವಂಶೀಯರೆಂದೂ, ಅದಕ್ಕೇ ದಕ್ಷಿಣಕ್ಕೆ ತಳ್ಳಲಾಯಿತೆಂದು ಉಲ್ಲೇಖಿಸಿದ್ದಾರೆ.

ನಾಗವಂಶಜರು

ಮಹಾಭಾರತದ ಯುದ್ಧ ಮುಗಿದು, ಕಲಿಯುಗ ಪ್ರವೇಶದ ನಂತರ (ಈಗ ಕಲಿಯುಗ-5114) ನಾಗ ವಂಶಜರು ಖಾಂಡವ ದಹನದ ನಂತರ ದಕ್ಷಿಣಕ್ಕೆ ಸ್ಥಾನಾಂತರವಾದರೆನ್ನಬಹುದು. ಏಕೆಂದರೆ, ನಾಗ ವಂಶಜರು ಮಹಾಭಾರತ ಯುದ್ಧದಲ್ಲಿ ಯಾರ ಪರ ವಿರೋಧವನ್ನೂ ವಹಿಸಿರಲಿಲ್ಲ. ನಂತರ ಅಶ್ವಮೇಧಯಾಗದ ನೆಪದಲ್ಲಿ ನಾಗಲೋಕವನ್ನು ಆಕ್ರಮಿಸಲು ಹೋದಾಗ ಬಬ್ರುವಾಹನನಿಂದ ಪಾಂಡವ ಅರ್ಜುನನ ಮುಖಭಂಗವಾಯಿತು. ನಾಗ ವಂಶಜರು ಪ್ರಾಬಲ್ಯವಿದ್ದ ನಾಡೇ ನಾಗರಖಂಡ, ನಾಗಲೋಕ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿರಬಹುದು ಎಂದು ತಮ್ಮ ಹೈಪೋಥಿಸಿಸ್‍ನ ಪ್ರಕಾರ ಹೇಳುತ್ತಾರೆ.

ಇಂದಿಗೂ ಗೊಂಡರು ಸಂಭೂವನ್ನು ನಾಗ ವಂಶದವನೆಂದು ಕರೆಯುತ್ತಾರೆ. ಅವನ ಟೋಟಮ್ ಅಥವಾ ಪಶು ಸಂಕೇತ ನಾಗ. ಸಪ್ತ ನಾಗದೇವತೆಯ ದೇವಸ್ಥಾನಗಳು ಕರ್ನಾಟಕದಲ್ಲಿ ವಿಶೇಷವಾಗಿವೆ. ಹಾಗಾಗಿಯೇ ಶಿವನೂ ಕೂಡ ನಾಗಧಾರಿಯಾಗಿಯೇ ಕಾಣಿಸಿಕೊಳ್ಳುತ್ತಾನೆ. ದಕ್ಷಿಣಭಾರತದ ಬಹುಸಂಖ್ಯಾತ ರಾಜವಂಶಜರು ತಾವು ನಾಗವಂಶಜರೆಂದೂ, ಫಣೀಂದ್ರ ವಂಶಜರೆಂದೂ ಹೇಳಿಕೊಳ್ಳುತ್ತಾ, ತಮ್ಮ ಮೂಲವನ್ನು ಕಾಳಂಜಪುರಕ್ಕೆ, ಅಹಿಚ್ಛತ್ರಪುರಕ್ಕೆ ಜೋಡಿಸಿಕೊಳ್ಳುತ್ತಾರೆ. ಈ ಅಹಿಚ್ಛತ್ರಪುರವು ಹಸ್ತಿನಾವತಿಯ ಹತ್ತಿರದ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿದೆ.

ಇವರು ಇನ್ನೂ ಮುಂದುವರೆದು ಹಲವು ದೇವತೆಗಳನ್ನು ತಮ್ಮ ಗೊಂಡ ಸಂಸ್ಕೃತಿಯ ಗೋತ್ರಕ್ಕೇ ಕೂಡಿಸುತ್ತಾರೆ.

ಹನುಮಂತ: ಗೊಂಡರ ಮುಂಜಾಲ್ ಗೋತ್ರದವನಾದರೆ, ಗಣೇಶನು ಗಜೇಶನೆಂದು ಕರೆಯಲ್ಪಟ್ಟವನು. ದೇವತೆಗಳ ಮತ್ತು ದಾನವರ ಸಂಯುಕ್ತ ಸೇನಾಧಿಪತಿ ಎನ್ನುತ್ತಾರೆ. ಮೂಷಕ ಗೋತ್ರ ಚಿಹ್ನೆಯವರನ್ನು ಸೋಲಿಸಿ, ತನ್ನ ಅಡಿಯಾಳಾಗಿ ಮಾಡಿಕೊಂಡವ. ದಕ್ಷಿಣ ಕನ್ನಡದ ಗೊಂಡರು ಇಂದಿಗೂ ಆನೆ ಮುಖವಾಡ ಧರಿಸಿ ನೃತ್ಯ ಮಾಡುವರು. ಮಹಿಷಾಸುರನೂ ಕೂಡ ಇದೇ ನಾಗವಂಶದವನಾಗಿದ್ದು, ಕೋಣದ ಗೋತ್ರದವ. ಬಲಿ ಚಕ್ರವರ್ತಿಯು ಬಲಿಜ ಅಥವಾ ಆದಿ ಬಣಜಿಗರ ಮೂಲಿಗ. ಇವನೂ ನಾಗರ ಖಂಡೆಯವನು. ಕೇರಳ ಹಾಗೂ ಕರಾವಳಿಯಲ್ಲಿ ಇವನನ್ನು ಆರಾಧಿಸುತ್ತಾರೆ.

ದಕ್ಷನ ಅಹಂಕಾರ ಹಾಗೂ ದ್ರಾವಿಡರ ಅವಹೇಳನದ ಫಲವಾಗಿ ಸಂಭೂ ಶೇಖರನ ಶಿಷ್ಯರಿಂದ ಅವನ ತಲೆ ಕತ್ತರಿಸಲ್ಪಟ್ಟು ನಂತರ ಸಂಭೂ ಶೇಖರ ಕುರಿತಲೆ ನೀಡಿದ್ದು ಆ ಗೋತ್ರವನ್ನು ವಿಧೇಯಗೊಳಿಸಿದರ ಸಂಕೇತ.

ಗೊಂಡಿ ಭಾಷೆಯಲ್ಲಿ ನೀಲಕಂಠ ಪಕ್ಷಿಯನ್ನು ರಾವೇನ ಅಥವಾ ರಾವಣ ಎಂದು ಕರೆಯಲಾಗುವುದು. ಇವನು ಗಢಮಂಡಲದ ಅಧಿಪತಿಯಾಗಿದ್ದು, ಉತ್ತರ ಭಾರತದಲ್ಲಿ ರಾವಣನ ಗೋತ್ರಜರಿಂದ ಇತ್ತೀಚೆಗೆ ರಾಜಸ್ಥಾನದಲ್ಲಿ ಭವ್ಯವಾದ ಮಂದಿರ ಸ್ಥಾಪನೆ ನಡೆದಿದೆ. ಅದೇ ರೀತಿ ಮಂಡೋದರಿ ಮಯ ರಾಜನ ಮಗಳು. ಮೀರತ್‍ನಲ್ಲಿ ಅವಳ ಜನ್ಮಸ್ಥಳ.

ನಂದ ಎಂದರೆ ಗೊಂಡಿ ಭಾಷೆಯಲ್ಲಿ ‘ಎತ್ತು’. ಮೌರ್ಯಪೂರ್ವ ನಂದರ ಮುಖ್ಯಮಂತ್ರಿಯ ಹೆಸರು ಅಮಾತ್ಯರಾಕ್ಷಸ ಎಂದಿದೆ. ‘ಯಾದಿಂಗ’ ಆಕಳುಯಾದ (ಗೊಂಡಿ) ಗೋತ್ರದ ಕುಲಚಿಹ್ನೆ ‘ಗುಪೇತ್’ ಗುಪ್ತರ ಗೋತ್ರ. ಜೇಡ ಎಂದು ಇದರ ಅರ್ಥ. ಚರಿತ್ರೆಯ ಕಾಲದಲ್ಲಿ ನಗರೀಕರಣದ ಆದ್ಯ ಪ್ರವರ್ತಕರು. ಗುಪ್ತರು ವಿದೇಶಿ ವ್ಯಾಪಾರಕ್ಕೆ ಹೆಚ್ಚು ಒತ್ತು ಕೊಟ್ಟವರು. ನಗರೀಕರಣ ಹಂತದಲ್ಲಿ ನಗರಾಧಿಪತಿಯಾಗಿ, ಸಂಭೂವನ್ನು ನಗರೇಶ್ವರನನ್ನಾಗಿ ಮಾರ್ಪಡಿಸಿ ಪೂಜಿಸಲಾರಂಭಿಸಿದರು. ಇವರು ದೇವಾಲಯದ ಆರ್ಥಿಕ ಪದ್ಧತಿಯ ಮೂಲಿಗರು ಎಂದು ಊಹಿಸಲಾಗುತ್ತದೆ.

ಸಂಕರದಿಂದ ಶಂಕರ

10ನೇ ಸಂಭೂಶೇಖರನ ಆಳ್ವಿಕೆಯ ಸಮಯದಲ್ಲಿ ಆರ್ಯ ದ್ರಾವಿಡರಲ್ಲಿ ಪರಸ್ಪರ ಹೊಕ್ಕುಬಳಕೆ ಕೌಟುಂಬಿಕವಾಗಿ ಆಗತೊಡಗಿತ್ತು. ಈ ಬಗೆಯ ವರ್ಣಸಂಕರಕ್ಕೆ ಸಂಭೂಶೇಖರನ ಸಮ್ಮತವಿದ್ದಂತೆ ತೋರುತ್ತದೆ. ಹಾಗಾಗಿಯೇ ಅವನನ್ನು ಸಂಭೂಸಂಕರ ಅಥವಾ ಶಂಭೂ ಶಂಕರನೆಂದು ಕರೆಯಲಾಗತೊಡಗಿತಂತೆ.

ಈ ಗೊಂಡ್ವಾನ ಸಂಸ್ಕೃತಿಯನ್ನು ವಿವರಿಸುವ ಕೃತಿಯಲ್ಲಿ ಮತ್ತೊಂದು ಅಂಶವನ್ನು ಒತ್ತಿ ಹೇಳುತ್ತಾರೆ.

“ಆರಂಭದಿಂದಲೂ ಆರ್ಯ ಮತ್ತು ಅನಾರ್ಯರ ಸಂಘರ್ಷ ಸಹಸ್ರಾರು ವರ್ಷಗಳವರೆಗೆ ನಡೆಯಿತು. ಈಗ ಎರಡೂ ಸಮುದಾಯಗಳು ಒಟ್ಟಾಗಿ ಬದುಕಿ ಭಾರತದ ಆಧಾರಸ್ತಂಭಗಳಾಗಿವೆ. ಆದರೆ ಎರಡು ಸಂಸ್ಕೃತಿಗಳ ಆಚರಣೆಗಳು ಭೂಮಿ ಆಕಾಶದಷ್ಟು ವ್ಯತ್ಯಾಸವಿದೆ. ಒಂದು ಸತ್ಯದ ಪ್ರತೀಕವಾದರೆ ಇನ್ನೊಂದು ಮೋಸದ ಬಲೆಯಂತಿದೆ.”

ಹಾಗೇ ಮುಂದುವರಿಯುತ್ತಾ, “ಶಂಭು ಮಹದೇವನಿಗೆ ಸೇರಿದ ಈ ಭೂಮಿಯ ಮೇಲೆ ಅತಿಕ್ರಮಣ ಮಾಡಿದ ಆರ್ಯರು ಕೂಟನೀತಿಯಿಂದ, ಪರಮೇಶ್ವರನನ್ನು ಜಾಲದಲ್ಲಿ ಬೀಳಿಸಲು ಮಾದಕದ್ರವ್ಯ ನೀಡಿ, ನಿಷ್ಕ್ರಿಯಗೊಳಿಸಿ ಸುಪ್ತ ಅವಸ್ಥೆಯಲ್ಲಿದ್ದಾಗ, ಮೋಹಜಾಲದ ಶಿಕ್ಷಣದಲ್ಲಿ ತರಬೇತು ಮಾಡಿದ ಪಾರ್ವತಿಯನ್ನು ಕಳುಹಿಸಿದರು. ಈಶ್ವರನ ಬಳಿ ಬಂದ ಪಾರ್ವತಿ, ದುರ್ಗಾ, ಜಗದಂಬಾ ರೂಪ ಧರಿಸಿ ಶಂಭು ಮಹಾದೇವನ ದಾನವ ಗಣ, ದಯೀತಗಣ, ದಸ್ಯೂರಗಣ, ದೈಭೂತಗಣ, ದೈಬೀರಗಣಗಳ ಸಂಹಾರ ಮಾಡಿದರು. ಶಂಭುವಿಗೆ ತನ್ನ ತಪ್ಪಿನ ಅರಿವಾಗಿ ಸತಪುಡಾದ ಪೆಂಕ್ ಮೇಡೀ ಬಿಟ್ಟು ಹಿಮಾಲಯದ ನಿರ್ಜನ ಪ್ರದೇಶಕ್ಕೆ ಹೋದನು. ಅಲ್ಲಿ ಅವನನ್ನು ಗುರುತಿಸುವವರು ಯಾರೂ ಇರಲಿಲ್ಲ. ಮಾದಕ ಪದಾರ್ಥ ಸೇವಿಸಿದ್ದರಿಂದ ವೀರ್ಯವಿರದೇ ನಿಸ್ತೇಜನಾಗಿದ್ದ. ಅರ್ಧ ನರ ಅರ್ಧ ನಾರಿಯಾಗಿ ಪರಿವರ್ತಿತನಾಗಿದ್ದ. ಜನರು ಕೋಯಾ ವಂಶದವರು ಸಂಭು ಮಹಾದೇವನನ್ನು ಮಹಾದೇವ ಎಂದು ಕರೆಯುವರು. ಶಂಭುವನ್ನು ಅಗಾಧ ರೌದ್ರ ರೂಪ ಜ್ವಾಲೆಯಿಂದ ಉಳಿಯಲು ಶಂಭುವನ್ನು ಆರಾಧಿಸುತ್ತಾರೆ. ಶಿವನ ತಲೆ ಯಾವಾಗಲೂ ತಣ್ಣಗಿರಲೆಂದು ಜಲದ ಹನಿ ಬೀಳುವಂತೆ ಮಾಡಿರುತ್ತಾರೆ. ಒಟ್ಟಾರೆ ಶಿವಶಂಕರ ಆರ್ಯ ಅನಾರ್ಯರ ದೇವರು” ಎಂದು ಪ್ರತಿಪಾದಿಸುತ್ತಾರೆ.


ಇದನ್ನೂ ಓದಿ: ತಲೆಕೆಳಗಾಗಿರುವುದು ನಾನಲ್ಲ; ನಿಮ್ಮ ಶಿಕ್ಷಣ ವಿಧಾನ: ಕಲಾವಿದನ ಕಲ್ಪನೆ ವೈರಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...