ಚೀನಾ ಸರ್ಕಾರವು ತನ್ನ ಮಹತ್ವದ ನೀತಿ ಬದಲಾವಣೆಯೊಂದರಲ್ಲಿ, ತನ್ನ ದೀರ್ಘಾವಧಿಯ ಎರಡು ಮಕ್ಕಳ ನೀತಿಯಲ್ಲಿ ಬದಲಾವಣೆ ಮಾಡಿದೆ. ಇದರೊಂದಿಗೆ ಚೀನಾದ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ. ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ಕಮ್ಯುನಿಸ್ಟ್ ಪಕ್ಷದ ಪೊಲಿಟ್‌ಬ್ಯುರೊ ಈ ನಿರ್ಧಾರ ಕೈಗೊಂಡಿದೆ.
“ದಂಪತಿಗಳು ಮೂರು ಮಕ್ಕಳನ್ನು ಹೊಂದಬಹುದು” ಎಂದು ರಾಜ್ಯ ಮಾಧ್ಯಮ ಕ್ಸಿನ್ಹುವಾ ಸೋಮವಾರ ವರದಿ ಮಾಡಿದೆ.
ಜನನ ಪ್ರಮಾಣದಲ್ಲಿ ಆತಂಕಕಾರಿ ಕುಸಿತ ಮತ್ತು ಐವತ್ತಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯ ಹೆಚ್ಚಳದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚೀನಾದ ಫಲವತ್ತತೆ ದರವು ಪ್ರಸ್ತುತ 1.3 ರಷ್ಟಿದೆ. ಮುದುಕರ ಜನಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ 2015 ರಲ್ಲಿ ಚೀನಾ ಸರ್ಕಾರವು ತನ್ನ ಜನಸಂಖ್ಯಾ ನೀತಿಯನ್ನು ಒಂದು ಮಗುವಿನಿಂದ ಎರಡು ಮಗುವಾಗಿ ಬದಲಾಯಿಸಿತ್ತು.
ಇದನ್ನೂ ಓದಿ: ಕಪ್ಪು ಫಂಗಸ್ ಬಗ್ಗೆ ಕೇಂದ್ರಕ್ಕೆ 3 ಪ್ರಶ್ನೆಗಳನ್ನು ಕೇಳಿದ ರಾಹುಲ್ ಗಾಂಧಿ
“ಈ ನೀತಿ ಹಳೆಯದಾಗಿದೆ. ಚೀನಾಕ್ಕೆ ಬೇಕಾಗಿರುವುದು ಮತ್ತೊಂದು ರಾಜ್ಯ ನೀತಿಯಲ್ಲ, ಬದಲಿಗೆ ಉತ್ತಮವಾದ ಸಮಾಜವಾಗಿದೆ” ಎಂದು ಕ್ಯಾಲಿಫೋರ್ನಿಯಾ ಇರ್ವಿನ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಾಂಗ್ ಫೆಂಗ್ ಹೇಳಿದ್ದಾರೆ.
ಚೀನಾದ ಈ ಹೊಸ ನೀತಿಯ ಬಗ್ಗೆ ಕೆಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. “ಈ ನೀತಿಯಿಂದ ಅಧಿಕಾರಿಗಳು ನಿರೀಕ್ಷಿಸಿದಷ್ಟು ಸಾಧನೆ ಇರದೆ ಇರಬಹುದು. ಈ ದಿನಗಳಲ್ಲಿ ಮಗುವನ್ನು ಬೆಳೆಸುವುದು ತುಂಬಾ ದುಬಾರಿಯಾಗಿದ್ದು, ಚೀನಾದಲ್ಲಿ ವಸತಿ ಅಗ್ಗವಾಗಿಲ್ಲ” ಎಂದು ಗುವಾಂಗ್‌ಸೂದಲ್ಲಿನ ಸ್ವತಂತ್ರ ಜನಸಂಖ್ಯಾಶಾಸ್ತ್ರಜ್ಞ ಹಿ ಯಾಫು ಹೇಳಿದ್ದಾರೆ.
ಆದಾಗ್ಯೂ, ಹಾಂಗ್ ಕಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟುವರ್ಟ್ ಗೀಟೆಲ್-ಬ್ಯಾಟನ್ ಈ ಕ್ರಮವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಯೋಗಿ ಸರ್ಕಾರದ ವಿರುದ್ಧ ಜನಾಕ್ರೋಶ: ಕೋವಿಡ್ ಬಿಕ್ಕಟ್ಟಿನಲ್ಲಿ ಮುಂದಿನ ಚುನಾವಣೆಯ ಚರ್ಚೆ!


