ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕಾರ ಭಾರತ ಮತ್ತು ಇತರ ದೇಶಗಳ ವಿರುದ್ಧ ಚೀನಾ ತನ್ನ ಆಕ್ರಮಣಕಾರಿ ನಿಲುವು ಚೀನಾದ ಆಡಳಿತ ಪಕ್ಷದ “ನಿಜವಾದ ಸ್ವರೂಪ” ವನ್ನು ದೃಢಪಡಿಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಹೇಳಿದ್ದಾರೆ.
ಪೂರ್ವ ಲಡಾಕ್‌ನಲ್ಲಿ ಭಾರತ ಮತ್ತು ಚೀನಾದ ಸೈನ್ಯದ ನಡುವಿನ ವಿವಾದದ ಹಿನ್ನೆಲೆಯಲ್ಲಿ, ಅಮೆರಿಕಾವು ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಶಾಂತಿಯುತ ನಿರ್ಣಯವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ಕಳೆದ ಏಳು ವಾರಗಳಿಂದ ಪೂರ್ವ ಲಡಾಕ್‌ನ ಅನೇಕ ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳು ತೀವ್ರ ಸಂಘರ್ಷಕ್ಕೆ ಒಳಗಾಗಿದ್ದು, ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಉದ್ವಿಗ್ನತೆ ಹೆಚ್ಚಾಯಿತು. ಚೀನಾದ ಕಡೆಯಿಂದ ಸಾವುನೋವುಗಳಾಗಿದ್ದರೂ ಅದರ ವಿವರವನ್ನು ಇನ್ನೂ ಬಹಿರಂಗಪಡಿಸಿಲ್ಲ.
“ಭಾರತ ಮತ್ತು ಚೀನಾಕ್ಕೆ ಸಂಬಂಧಿಸಿದಂತೆ, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಧ್ಯಕ್ಷರು ಸಹ ಹಾಗೆ ಮಾಡುತ್ತಿದ್ದಾರೆ. ಭಾರತ-ಚೀನಾ ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನಿಲುವು ಚೀನಾ ಕಮ್ಯುನಿಸ್ಟ್ ಪಕ್ಷದ ಆಕ್ರಮಣಶೀಲತೆ ತೋರಸುತ್ತದೆ” ಎಂದು ಅವರು ಹೇಳಿದರು.
ಅಮೆರಿಕಾವು ಚೀನಾ-ಭಾರತ ಗಡಿವಿವಾದವನ್ನಿಟ್ಟುಕೊಂಡು ಭಾರತ ಸೇರಿದಂತೆ ಇತರ ನರೆಯ ರಾಷ್ಟ್ರಗಳಲ್ಲಿ ತನ್ನ ಸೇನಾ ನೆಲೆಯನ್ನು ವಿಸ್ತರಿಸಲು ಹವಣಿಸುತ್ತಿದ್ದು, ಇದರ ಭಾಗವಾಗಿ ಯುರೊಪಿನ ಹಲವಾರು ಕಡೆಯ ತನ್ನ ಸೇನೆಯನ್ನು ಕರೆಸಿಕೊಳ್ಳಲು ತಯಾರಿ ನಡೆಸುತ್ತಿದೆ.
ಓದಿ: ಚೀನಾವನ್ನು ಎದುರಿಸಲು ಯುರೋಪಿನಲ್ಲಿರುವ ತನ್ನ ಸೈನ್ಯವನ್ನು ಕಡಿಮೆ ಮಾಡುತ್ತಿದ್ದೇವೆ: ಅಮೆರಿಕಾ


