Homeಮುಖಪುಟಲಡಾಕ್‌ನಲ್ಲಿ 35-40 ಚದರ ಕಿ.ಮೀ. ಭೂಭಾಗವನ್ನು ಚೀನಾ ಆಕ್ರಮಿಸಿದೆ : ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್....

ಲಡಾಕ್‌ನಲ್ಲಿ 35-40 ಚದರ ಕಿ.ಮೀ. ಭೂಭಾಗವನ್ನು ಚೀನಾ ಆಕ್ರಮಿಸಿದೆ : ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್

ಭಾರತವು ಆಕ್ಸಾಯ್ ಚಿನ್ ಪ್ರದೇಶವನ್ನು ಮರಳಿ ಪಡೆಯಲು ಬಯಸಿದೆ ಎಂದು ಚೀನಾ ಭಾವಿಸಿದೆ. ಅದಕ್ಕಾಗಿ ಅದು ಲಡಾಕ್‌ನಲ್ಲಿ 35-40 ಚದರ ಕಿ.ಮೀ. ನೆಲವನ್ನು ಅತಿಕ್ರಮಿಸಿದೆ. ಲಡಾಕ್ ಮಾತ್ರವೇ ಚೀನಾ ಮತ್ತು ಪಾಕಿಸ್ತಾನದ ನಡುವೆ ನೇರವಾದ ಮಿಲಿಟರಿ ಸಂಪರ್ಕ ಸಾಧ್ಯಮಾಡಬಲ್ಲ ಭೂಭಾಗವಾಗಿದೆ ಎನ್ನುತ್ತಾರೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್

- Advertisement -
- Advertisement -

ಎಚ್.ಎಸ್. ಪನಾಗ್ – ನಿವೃತ್ತ ಲೆಫ್ಟಿನೆಂಟ್ ಜನರಲ್

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಕಳೆದ ನಾಲ್ಕು ವಾರಗಳಲ್ಲಿ ಭಾರತ ಮತ್ತು ಟಿಬೆಟ್ ನಡುವಿನ ವಾಸ್ತವಿಕ ಗಡಿಯಾಗಿರುವ ನೈಜ ನಿಯಂತ್ರಣ ರೇಖೆಯಲ್ಲಿ (ಲೈನ್‌ ಆಫ್‌ ಕಂಟ್ರೋಲ್‌) ಅಸಾಧಾರಣವಾದುದೇನೋ ಸಂಭವಿಸುತ್ತಿದೆ. ಮೇ 5-6ರ ರಾತ್ರಿ ಪನ್‌ಗೊಂಗ್ ತ್ಸೋ ಉತ್ತರ ದಂಡೆಯಲ್ಲಿ ಮತ್ತು ಮೇ 9ರಂದು ಉತ್ತರ ಸಿಕ್ಕಿಂನ ನಕು ಲಾದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಚಕಮಕಿ ನಡೆದ ಬಗ್ಗೆ ಮೊತ್ತಮೊದಲಾಗಿ ಮೇ 10ರಂದು ಭಾರತೀಯ ಮಾಧ್ಯಮಗಳು ಸುದ್ದಿ ಬಹಿರಂಗ ಮಾಡಿದವು.

ಆಗಿನಿಂದ ಗಲ್ವಾನ್ ನದಿ, ಪನ್‌ಗೊಂಗ್ ತ್ಸೋ ಉತ್ತರ ದಂಡೆ ಮತ್ತು ಬಹುಶಃ ಚಾಂಗ್ ಚೆನ್‌ಮೋ ನದಿ ಕಣಿವೆಯಲ್ಲಿರುವ ಹಾಟ್‌ಸ್ಪ್ರಿಂಗ್ಸ್ ಹಾಗೂ ಡೆಮ್‌ಚೊಕ್‌ನಲ್ಲಿ ಮುಖಾಮುಖಿ ನಡೆದಿರುವ ಬಗ್ಗೆ ವರದಿಗಳು ಬರುತ್ತಿವೆ. ಪರಿಸ್ಥಿತಿ ಉಲ್ಭಣಗೊಂಡರೆ ಅಗತ್ಯವೆಂದು ಎರಡೂ ಕಡೆಗಳು ಪ್ರತಿದ್ವಂದ್ವಿಯಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿವೆ ಮತ್ತು ಮೀಸಲು ಪಡೆಗಳನ್ನು ನೆಲೆಗೊಳಿಸಿವೆ.

ಹೆಚ್ಚುತ್ತಿರುವ ಹೆಲಿಕಾಪ್ಟರ್ ಚಟುವಟಿಕೆ, ಮತ್ತು ಭಾರತದ ಕಡೆಯಿಂದ ಆಗೊಮ್ಮೆ ಈಗೊಮ್ಮೆ ಫೈಟರ್ ವಿಮಾನ ಹಾರಾಟದ ವರದಿಗಳಿವೆ. ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ, ಮುಖ್ಯವಾಗಿ ಉತ್ತರಖಂಡದ ಮಧ್ಯ ವಲಯದಲ್ಲಿನ ಇತರ ಪ್ರದೇಶಗಳಲ್ಲಿಯೂ ಮಿಲಿಟರಿ ಚಟುವಟಿಕೆಗಳು ಹೆಚ್ಚುತ್ತಿರುವ ಕೆಲವು ವರದಿಗಳೂ ಇವೆ. ನೈಜ ನಿಯಂತ್ರಣ ರೇಖೆಯಿಂದ 50 ಕಿ.ಮೀ. ದೂರದಲ್ಲಿರುವ ಎನ್‌ಗರಿಯಲ್ಲಿ ಫೈಟರ್ ವಿಮಾನಗಳು ನಿಂತಿರುವ ಉಪಗ್ರಹ ಚಿತ್ರಗಳನ್ನು ಮಾಧ್ಯಮಗಳು ಪ್ರಕಟಿಸಿವೆ. ಚೀನಾವು ಎಪ್ರಿಲ್ ಕೊನೆಯ ಭಾಗದಿಂದ ತನ್ನ ಪಡೆಗಳನ್ನು ಹೆಚ್ಚಿಸುತ್ತಿರುವ ಬಗ್ಗೆ ಮತ್ತು ಗಸ್ತು ಪಡೆಗಳ ಮುಖಾಮುಖಿಯ ಬಗೆಯೂ ಊಹಾಪೋಹಗಳಿವೆ.

ಭಾರತವು ಆಕ್ರಮಣಕಾರಿಯಾಗಿ ಚೀನಾ ದಾವೆಯ ರೇಖೆಯನ್ನು ದಾಟಿದೆ ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ)ಯ ಗಸ್ತು ಪಡೆಗಳನ್ನು ತಡೆಯುತ್ತಿದೆ ಎಂದು ಚೀನಾದ ಮಾಧ್ಯಮಗಳು ಮತ್ತು ಅಧಿಕೃತ ವಕ್ತಾರರು ಆರೋಪಿಸಿದ್ದಾರೆ. ದೇಶದ ರಕ್ಷಣೆಗಾಗಿ ಸಿದ್ಧರಾಗಿರುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತನ್ನ ಸೈನಿಕರಿಗೆ ಕರೆ ನೀಡಿದ್ದಾರೆ.

ಯಾವುದೇ ಸರಕಾರಿ ಅಥವಾ ಮಿಲಿಟರಿ ಪ್ರಕಟಣೆಗಳು ಇಲ್ಲದಿರುವುದರಿಂದ ನೈಜ ನಿಯಂತ್ರಣ ರೇಖೆಯ ಘಟನೆಗಳು ಮತ್ತು ಚೀನಾದ ರಾಜಕೀಯ/ಮಿಲಿಟರಿ ಉದ್ದೇಶಗಳ ಕುರಿತು ಊಹಾಪೋಹಗಳು ಹಬ್ಬಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ 2018ರಲ್ಲಿ ವುಹಾನ್‌ನಲ್ಲಿ ಮತ್ತು 2019ರಲ್ಲಿ ತಮಿಳುನಾಡಿನ ಮಹಮಲ್ಲಪುರದಲ್ಲಿ ಎರಡು ಬಾರಿ ಅನೌಪಚಾರಿಕ ಶೃಂಗಸಭೆಗಳು ನಡೆದಿದ್ದು, ನೈಜ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡಲು ಮತ್ತು ಗಡಿ ನಿರ್ವಹಣೆಯ ಕುರಿತು ತಮ್ಮತಮ್ಮ ಸೇನೆಗಳಿಗೆ ಕಾರ್ಯವ್ಯೂಹಾತ್ಮಕ ನಿರ್ದೇಶನಗಳನ್ನು ನೀಡಲು ಇಬ್ಬರೂ ನಾಯಕರು ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಈ ಊಹಾಪೋಹಗಳು ಇನ್ನೂ ಹೆಚ್ಚಾಗಿವೆ.

ಯಾವುದೇ ಎರಡು ದೇಶಗಳ ನಡುವಿನ ಘರ್ಷಣೆಯ ಮೂಲವಿರುವುದು ರಾಜಕೀಯ ಉದ್ದೇಶ ಅಥವಾ ಗುರಿಯಲ್ಲಿ. ಮಿಲಿಟರಿ ಕಾರ್ಯಾಚರಣೆಗಳು ಆ ಉದ್ದೇಶ ಸಾಧನೆಯ ಸಾಧನಗಳು ಮಾತ್ರ. ನಾನು ಈ ಪ್ರಕ್ರಿಯೆಯನ್ನು ತಿರುವುಮುರುವುಗೊಳಿಸಿ ಮಿಲಿಟರಿ ಪರಿಸ್ಥಿತಿ ಮತ್ತು ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಪ್ರದೇಶಗಳ ವ್ಯೂಹಾತ್ಮಕ ಮಹತ್ವವನ್ನು ವಿಶ್ಲೇಷಿಸುವ ಮೂಲಕ ರಾಜಕೀಯ ಉದ್ದೇಶಗಳನ್ನು ಕಂಡುಕೊಳ್ಳಲು ಯತ್ನಿಸುತ್ತೇನೆ.

ಮಿಲಿಟರಿ ಪರಿಸ್ಥಿತಿ

ಮೊಟ್ಟ ಮೊದಲಾಗಿಯೇ ಸ್ಪಷ್ಟಪಡಿಸುತ್ತೇನೆ- 1962, 1965 ಮತ್ತು 1999ರಲ್ಲಿ ನಡೆದಂತೆಯೇ ಮತ್ತೊಮ್ಮೆ ನಾವು ಕಾರ್ಯವ್ಯೂಹಾತ್ಮಕ ಮತ್ತು ತಾಂತ್ರಿಕ ಮಟ್ಟದಲ್ಲಿ ಅಚ್ಚರಿಗೆ ಒಳಗಾಗಿದ್ದೇವೆ. ಹೇಗೆ ನಾವು ಬೇರೆ ವಲಯಗಳಿಂದ ಗಡಿಬಿಡಿಯಲ್ಲಿ ಹೆಚ್ಚುವರಿ ಪಡೆಗಳನ್ನು ಕಳುಹಿಸಬೇಕಾಯಿತು ಎಂಬುದು ನಾವು ಈ ಬಾರಿಯೂ ಬೇಸ್ತುಬಿದ್ದಿದ್ದೆವು ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಕಾರ್ಯವ್ಯೂಹಾತ್ಮಕ ಮಟ್ಟದಲ್ಲಿ ಪಿಎಲ್ಎಯು ಗಡಿಯಲ್ಲಿ ಮಾಮೂಲಿ ಗಡಿ ಭದ್ರತಾ ಪಡೆಗಳನ್ನು ಬದಲಿಸಿ ಹಿಂಭಾಗದ ನೆಲೆಗಳಿಂದ ಸೇನೆಯನ್ನು ಕಳುಹಿಸಿ ತನ್ನ ಬಲವನ್ನು ಹೆಚ್ಚಿಸಿತು ಎಂಬುದನ್ನು ಕಂಡುಕೊಳ್ಳಲು ರಿಸರ್ಚ್ ಎಂಡ್ ಅನಾಲಿಸಿಸ್ ವಿಂಗ್ (ರಾ) ವಿಫಲವಾಯಿತು. ಮಾನವ ರಹಿತ ವಾಯು ವಾಹನ (ಯುಎವಿ)ಗಳ ಮೂಲಕ ನಮ್ಮ ತಾಂತ್ರಿಕ ಕಣ್ಗಾವಲಾಗಲೀ, ಗಸ್ತು ಪಡೆಗಳಾಗಲೀ ಚೀನಾ ಕಡೆಯಲ್ಲಿ ದೊಡ್ಡ ಪ್ರಮಾಣದ ಸೈನಿಕ ಚಲನೆಯನ್ನು ಪತ್ತೆಹಚ್ಚಲು ವಿಫಲವಾದವು. ಈ ಭಾಗದಲ್ಲಿ ಐಟಿಬಿಪಿ (ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್) ಕಾರ್ಯನಿರ್ವಹಿಸುತ್ತದೆ ಮತ್ತು ಇದು ಸೇನೆಯ ನಿಯಂತ್ರಣದ ಅಡಿಯಲ್ಲಿ ಬರುವುದಿಲ್ಲ ಎಂಬುದು ವಿಪರ್ಯಾಸ.

ದೃಢಪಡಿಸಲಾಗದ ವರದಿಗಳ ಪ್ರಕಾರ ಪಿಎಲ್ಎ ನೈಜ ನಿಯಂತ್ರಣ ರೇಖೆಯನ್ನು ದಾಟಿದೆ ಮತ್ತು ಗಲ್ವಾನ್ ನದಿಯುದ್ದಕ್ಕೂ 3-4 ಕಿ.ಮೀ.ನಷ್ಟು ಮತ್ತು ಪನ್‌ಗೊಂಗ್ ತ್ಸೋ ಉತ್ತರ ದಂಡೆಯ ಉದ್ದಕ್ಕೂ “ಫಿಂಗರ್ 5” ಮತ್ತು “ಫಿಂಗರ್ 8” ನಡುವೆ 8-10 ಕಿ.ಮೀ.ನಷ್ಟು ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಲಡಾಕ್‌ನಲ್ಲಿ ಚಾಂಗ್ ಚೆನ್‌ಮೋ ನದಿ ಕಣಿವೆಯ ಹಾಟ್‌ಸ್ಪ್ರಿಂಗ್ಸ್ ಪ್ರದೇಶ ಮತ್ತು ಡೆಮ್‌ಚೊಕ್‌ನಲ್ಲಿಯೂ ಸಣ್ಣ ಪ್ರಮಾಣದ ಅತಿಕ್ರಮಣಗಳು ನಡೆದಿರುವಂತೆ ಕಾಣುತ್ತದೆ.

ನನ್ನ ಅಂದಾಜೆಂದರೆ, ಪಿಎಲ್ಎಯು ಗಲ್ವಾನ್ ನದಿ ಕಣಿವೆ ಮತ್ತು ಪನ್‌ಗೊಂಗ್ ತ್ಸೋ ಉತ್ತರ ದಂಡೆಯುದ್ದಕ್ಕೂ ಗರಿಷ್ಟ ತಲಾ ಒಂದೊಂದು ಬ್ರಿಗೇಡ್‌ನಷ್ಟು ಸೈನಿಕರನ್ನು ನಿಯೋಜಿಸಿದೆ. ಆಕ್ರಮಣದ ಸಾಧ್ಯತೆ ಇರುವ ಸೂಕ್ತವಾದ ಸ್ಥಳಗಳಲ್ಲಿ ಮತ್ತು ನೈಜ ನಿಯಂತ್ರಣ ರೇಖೆಯ ದುರ್ಬಲ ಸ್ಥಳಗಳಲ್ಲಿ ಮುಂಜಾಗ್ರತಾ ನಿಯೋಜನೆಗಳನ್ನು ಮಾಡಬಹುದಿತ್ತು. ಪರಿಸ್ಥಿತಿ ಉಲ್ಭಣಿಸಿದರೆ ಭಾರತೀಯ ಪ್ರತಿಕ್ರಿಯೆಗೆ ತ್ವರಿತವಾಗಿ ಮೀಸಲು ಪಡೆಗಳು ಒದಗುತ್ತಿದ್ದವು. ಎನ್‌ಗರಿಯಲ್ಲಿರುವ ವಾಯುನೆಲೆಯನ್ನು ಉತ್ತಮಪಡಿಸಲಾಗಿದ್ದು, ಅಲ್ಲಿ ಫೈಟರ್ ವಿಮಾನಗಳನ್ನು ನೆಲೆಗೊಳಿಸಲಾಗಿದೆ. ದೆಪ್ಸಂಗ್ ಬಯಲು, ಹಾಟ್‌ಸ್ಪ್ರಿಂಗ್ಸ್, ಸ್ಪನ್‌ಗೂರ್ ಗ್ಯಾಪ್ ಮತ್ತು ಚುಮಾರ್‌ನಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿರುವ ಸಾಧ್ಯತೆಯಿದೆ.

ನಿಯಮಿತ ಸೇನಾಪಡೆಗಳು ನಡೆಸುವ ಅತಿಕ್ರಮಣಗಳು ಮತ್ತು ಗಸ್ತು ಪಡೆಗಳು ನಡೆಸುವ ತಮ್ಮತಮ್ಮ ದಾವೆಯ ಗಡಿರೇಖೆಗಳ ಉಲ್ಲಂಘನೆಗಳು ಒಂದೇ ರೀತಿಯಲ್ಲ ಎಂದು ಇಲ್ಲಿ ಹೇಳುವುದು ಸೂಕ್ತ. ಒಂದು ಬ್ರಿಗೇಡ್ ಸಂಖ್ಯಾಬಲದ ಸೇನೆಯು ಗಲ್ವಾನ್ ನದಿಯಲ್ಲಿ 3-4 ಕಿ.ಮೀ. ಪ್ರದೇಶವನ್ನು ಭದ್ರಪಡಿಸಿಕೊಂಡಿದೆ ಎಂದಾದರೆ, ಅದು ಉತ್ತರ ಮತ್ತು ದಕ್ಷಿಣದ ಎತ್ತರ ಪ್ರದೇಶಗಳನ್ನು, ಅಂದರೆ ಸುಮಾರು 15-20 ಚದರ ಕಿ.ಮೀ. ನೆಲವನ್ನು ಭದ್ರಪಡಿಸಿಕೊಂಡಿದೆ ಎಂದರ್ಥ. ಅದೇ ರೀತಿಯಲ್ಲಿ ಪನ್‌ಗೊಂಗ್ ತ್ಸೋ ಉದ್ದಕ್ಕೂ ಉತ್ತರ ದಂಡೆಯಲ್ಲಿ ಪಿಎಲ್ಎ ಬ್ರಿಗೇಡ್ 8-10 ಕಿ.ಮೀ. ಒಳಬಂದಿದೆ ಎಂದರೆ ಅದು ಉತ್ತರದ ಎತ್ತರ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು, ವಸ್ತುಶಃ 35-40 ಚದರ ಕಿ.ಮೀ ಪ್ರದೇಶವನ್ನು ನಿಯಂತ್ರಿಸಲು ಶಕ್ತವಾಗುತ್ತದೆ. ಹೀಗೆ ವಶಪಡಿಸಿಕೊಂಡ ನೆಲದ ಆಧಾರದಲ್ಲಿಯೇ ಮುಂದೆ ಚೀನಾ ನೈಜ ನಿಯಂತ್ರಣ ರೇಖೆಯ ದಾವೆ ಹೂಡಿದರೆ ಅದು ಆಕ್ರಮಿಸಿರುವ ಪ್ರದೇಶ ಗಣನೀಯವಾಗಿ ಹೆಚ್ಚುತ್ತದೆ.

ಮಧ್ಯ ವಲಯದಲ್ಲಿ ನಮ್ಮ ನಿಯೋಜನೆಯು ತೆಳುವಾಗಿದೆ. ಮಧ್ಯ ವಲಯದಲ್ಲಿ ಪಿಎಲ್ಎಯು ಗರಿಷ್ಟ ಒಂದು ಬ್ರಿಗೇಡ್ ಸೇನೆಯನ್ನು ನಿಯೋಜಿಸಿದ್ದರೆ, ಅದು ನಮ್ಮ ವ್ಯೂಹಾತ್ಮಕ ಮೀಸಲು ಬಲವನ್ನು ನಿರ್ದಿಷ್ಟ ಸ್ಥಳಕ್ಕೆ ಕಟ್ಟಿಹಾಕುವ ಮತ್ತು ಪರಿಸ್ಥಿತಿ ಉಲ್ಭಣಗೊಂಡ ಸಂದರ್ಭದಲ್ಲಿ ಹೆಚ್ಚುವರಿ ಪ್ರದೇಶದ ಅತಿಕ್ರಮಣದ ಬೆದರಿಕೆ ಒಡ್ಡುವ ಸಲುವಾಗಿಯಾಗಿದೆ.

ಉತ್ತರ ಸಿಕ್ಕಿಂನಲ್ಲಿ ಪ್ರಸ್ಥಭೂಮಿ ಪ್ರದೇಶದಲ್ಲಿ ಒಡ್ಡಿರುವ ಸೀಮಿತ ಬೆದರಿಕೆಯು ನಾವು ಚುಂಬಿ ಕಣಿವೆಗೆ ಆಕ್ರಮಣಕಾರಿ ದಾಳಿ ನಡೆಸದಂತೆ ಎಚ್ಚರಿಕೆಯ ಸೂಚನೆಯಾಗಿದೆ. ಅರುಣಾಚಲ ಪ್ರದೇಶದಲ್ಲಿಯೂ ಮುಂಜಾಗ್ರತಾ ನಿಯೋಜನೆಯನ್ನು ಮಾಡಲಾಗಿರಬಹುದು.

ಚೀನಾದ ಮಿಲಿಟರಿ ಗುರಿಯು ಲಡಾಕ್‌ನಲ್ಲಿ ನಮ್ಮ ಗಡಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ನಿಲ್ಲಿಸುವುದಾಗಿರಬಹುದು. ಅದು ಮುಖ್ಯವಾಗಿ ಗಲ್ವಾನ್, ಹಾಟ್‌ಸ್ಪ್ರಿಂಗ್ಸ್ ಮತ್ತು ಪನ್‌ಗೊಂಗ್ ತ್ಸೋ ಕ್ಷೇತ್ರಗಳಲ್ಲಿ ಆಕ್ಸಾಯ್ ಚಿನ್‌ ಮತ್ತು ರಾಷ್ಟ್ರೀಯ ಹೆದ್ದಾರಿ 219ಕ್ಕೆ ಬೆದರಿಕೆ ಒಡ್ಡುತ್ತದೆ. ನಮ್ಮ ಪ್ರತಿಕ್ರಿಯೆಯನ್ನು ಆಧರಿಸಿ ಅದು ಸೀಮಿತ ಗಡಿ ಚಕಮಕಿಗೆ ಸಿದ್ಧವಾಗಬಹುದು. “ಮುಖಾಮುಖಿ ಪ್ರದೇಶ”ಗಳ ವ್ಯೂಹಾತ್ಮಕ ಪ್ರಾಮುಖ್ಯತೆ ಎಂದರೆ, ಚೀನಾ ಮತ್ತು ಪಾಕಿಸ್ತಾನದ ನಡುವೆ ನೇರ ಮತ್ತು ವಾಸ್ತವಿಕವಾಗಿ ಸಂಪರ್ಕ ಕಲ್ಪಿಸಬಹುದಾದ ಏಕೈಕ ಪ್ರದೇಶವೆಂದರೆ ಲಡಾಕ್. ಅದಲ್ಲದೇ ಭಾರತದಿಂದ ಆಕ್ಸಾಯ್ ಚಿನ್‌ಗೆ ಪ್ರವೇಶ ಕಲ್ಪಿಸಬಹುದಾದ ಏಕೈಕ ಪ್ರದೇಶ ಕೂಡಾ ಲಡಾಕ್ ಆಗಿದೆ. ಆದುದರಿಂದ ಸಬ್ ಸೆಕ್ಟರ್ ನಾರ್ತ್ (ಎಸ್‌ಎಸ್‌ಎನ್)ನಲ್ಲಿ ಭಾರತವು ಯಾವುದೇ ಬೆದರಿಕೆ ಒಡ್ಡುವ ಸಾಧ್ಯತೆ ಚೀನಾಕ್ಕೆ ಬೇಕಾಗಿಲ್ಲ. ಹದಿನೈದು ವರ್ಷಗಳ ಹಿಂದೆ ಚೀನಾದ ಸೇನೆಯು ಒಂದು ಡಿವಿಜನ್ ಸೇನಾಬಲ ಮತ್ತು ಯಾಂತ್ರೀಕೃತ ಬಲ (ಮೆಕೆನೈಸ್ಡ್)ದೊಂದಿಗೆ ಎಸ್‌ಎಸ್‌ಎನ್‌ನಿಂದ ಆಕ್ಸಾಯ್‌ ಚಿನ್‌ಗೆ ಆಕ್ರಮಣ ನಡೆಸುವ ಅಣಕು ಯುದ್ಧದಾಟವನ್ನು ಆಡಿತ್ತು.

ನಮಗಿರುವ ಅಪಾಯವನ್ನು ದೃಷ್ಟಿಯಲ್ಲಿರಿಸಿಕೊಂಡು ನಾವು 2007ರಲ್ಲಿ ಎಸ್‌ಎಸ್‌ಎನ್‌ನಲ್ಲಿ ಎರಡು ರಸ್ತೆಗಳ ನಿರ್ಮಾಣವನ್ನು ಆರಂಭಿಸಿದ್ದೆವು. ಮೊದಲನೆಯದು ಸೊಸೊಮದಿಂದ ನುಬ್ರಾ ನದಿ ಕಣಿವೆಯಲ್ಲಿ ಸಸೆರ್ ಲಾ ಪಾಸ್ ಮೂಲಕದ ರಸ್ತೆ. ದುರದೃಷ್ಟವಶಾತ್ ಸಸೆರ್ ಲಾ ಹಿಮಾಚ್ಛಾದಿತ ಪ್ರದೇಶವಾಗಿದೆ. ಇಲ್ಲಿ ನಾವು ಸುರಂಗವನ್ನು ನಿರ್ಮಿಸದ ಹೊರತು ಈ ರಸ್ತೆಯು ಕೇವಲ ಬೇಸಿಗೆ ರಸ್ತೆಯಾಗಿ ಉಳಿಯುವುದು. ಇನ್ನೊಂದು ಶೈಯೋಕ್ ನದಿ ಕಣಿವೆಯುದ್ದಕ್ಕೂ ಮುರ್ಗೊ ಮತ್ತು ದೆಪ್ಸಾಂಗ್ ಮೂಲಕ ನೈಜ ನಿಯಂತ್ರಣ ರೇಖೆಗೆ ಸಮಾನಂತರವಾಗಿರುವ 255 ಕಿ.ಮೀ. ಉದ್ದದ ರಸ್ತೆ. ಇಂತಹ ಇನ್ನಷ್ಟು ನಿರ್ಮಾಣಗಳು ಚೀನಾಕ್ಕೆ ಬೇಕಾಗಿಲ್ಲ.

(ಇದೇ ರೀತಿಯ ಅನೇಕ ಮಿಲಿಟರಿ ಕಾರ್ಯವ್ಯೂಹಾತ್ಮಕ ಮಹತ್ವದ ಪ್ರದೇಶಗಳು ಮತ್ತು ಕಾರಣಗಳು ಇಲ್ಲಿದ್ದು, ಸಾಮಾನ್ಯ ಓದುಗರಿಗೆ ಅವು ಅಷ್ಟೊಂದು ಪ್ರಸ್ತುತವಲ್ಲ ಎಂಬ ನೆಲೆಯಲ್ಲಿ ವಿವರಗಳನ್ನು ನೀಡಲಾಗಿಲ್ಲ.)

ರಾಜಕೀಯ ಗುರಿ

ವ್ಯೂಹಾತ್ಮಕ ದೃಷ್ಟಿಯಿಂದ ಬೇಕಾದ ಪ್ರದೇಶಗಳನ್ನು ಚೀನಾವು 1962ಕ್ಕೆ ಮುಂಚೆಯೇ ವಶಪಡಿಸಿಕೊಂಡಿತ್ತು. ಅದೆಂದರೆ, ಪ್ರಮುಖವಾಗಿ ಟಿಬೆಟ್- ಝಿನ್ಸಿಯಾಂಗ್ ರಾಷ್ಟ್ರೀಯ ಹೆದ್ದಾರಿ 219ಕ್ಕೆ ಅಗತ್ಯವಾಗಿ ಬೇಕಾಗಿದ್ದ ಆಕ್ಸಾಯ್ ಚಿನ್. 1962ರ ಯುದ್ಧದ ಬಳಿಕ ಭಾರತಕ್ಕೆ ಆಕ್ಸಾಯ್ ಚಿನ್ ಪ್ರವೇಶ ನಿರಾಕರಿಸುವ ಕೆಲವು ವ್ಯೂಹಾತ್ಮಕ ಪ್ರದೇಶಗಳನ್ನು ಹೊರತುಪಡಿಸಿ, ತಾನು ಆಕ್ರಮಿಸಿದ್ದ ಉಳಿದೆಲ್ಲಾ ಸ್ಥಳಗಳನ್ನು ಚೀನಾ ತೆರವು ಮಾಡಿತ್ತು. ಭಾರತದ ಬಗ್ಗೆ ಚೀನಾವು ಅತಿಯಾದ ಸಂಶಯ ಹೊಂದಿದ್ದು, ಭಾರತವು ಆಕ್ಸಾಯ್ ಚಿನ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಯತ್ನಿಸಬಹುದು ಎಂಬ ಭಯ ಅದಕ್ಕಿದೆ. ಮುಖ್ಯವಾಗಿ ಚೀನಾದ ಏಕೈಕ ರಾಜಕೀಯ ಗುರಿಯೆಂದರೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು.

ಈಗ ಎರಡೂ ದೇಶಗಳಿಗೆ ಯುದ್ಧ ಬೇಕಾಗಿಲ್ಲ. ಈಗ ಎಪ್ರಿಲ್ 1, 2020ರಲ್ಲಿ ಇದ್ದಂತೆ ಯಥಾಸ್ಥಿತಿ ಮರಳಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಮೊದಲ ಆದ್ಯತೆ ನೀಡಬೇಕು. ರಾಜತಾಂತ್ರಿಕ ಪ್ರಯತ್ನ ಕೆಲಸ ಮಾಡದಿದ್ದರೆ ಭಾರತವು ಗಡಿ ಚಕಮಕಿಗಳು ಅಥವಾ ಸೀಮಿತ ಯುದ್ಧಕ್ಕೂ ಸಿದ್ಧವಾಗಬೇಕಿದೆ. ಅಂತಿಮವಾಗಿ ಯಥಾಸ್ಥಿತಿಯ ಸ್ಥಾಪನೆಯಾದಾಗ, ಗುಪ್ತಚರ ವೈಫಲ್ಯ ಮತ್ತು ನಮ್ಮ ಭೂಪ್ರದೇಶದ ನಷ್ಟಕ್ಕಾಗಿ ನಾವು ನರೇಂದ್ರ ಮೋದಿ ಸರಕಾರ ಮತ್ತು ಮಿಲಿಟರಿಯನ್ನು ಹೊಣೆಮಾಡಬೇಕಾಗಿದೆ.

(ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್, ಪಿವಿಎಸ್‌ಎಂ, ಎವಿಎಸ್‌ಎಂ (ನಿವೃತ್ತ) ಅವರು 40 ವರ್ಷಗಳ ಕಾಲ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ‘ಸಿ’ ನಾರ್ದರ್ನ್ ಕಮಾಂಡ್ ಮತ್ತು ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಓಸಿ) ಆಗಿದ್ದರು. ನಿವೃತ್ತಿಯ ಬಳಿಕ ಸೇನಾಪಡೆಗಳ ನ್ಯಾಯಮಂಡಳಿ (ಎಎಫ್‌ಟಿ)ಯ ಸದಸ್ಯರಾಗಿದ್ದಾರೆ. ಅಭಿಪ್ರಾಯಗಳು ವೈಯಕ್ತಿಕ)


ಇದನ್ನೂ ಓದಿ: ಗಡಿ ವಿವಾದ: ಟ್ರಂಪ್ ಮಧ್ಯಸ್ಥಿಕೆಯ ಪ್ರಸ್ತಾಪ ತಿರಸ್ಕರಿಸಿದ ಚೀನಾ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...