ಭಾರತ ಸ್ವಾತಂತ್ರ್ಯ ಪಡೆದು ತನ್ನದೇ ಸಂವಿಧಾನವನ್ನು ರಚಿಸಿಕೊಂಡು ಏಳು ದಶಕಗಳಾಯಿತು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸಿದ ಆರ್‌ಎಸ್‌ಎಸ್, `ಅಖಂಡ ಭಾರತ’ದ ಕುರಿತು ಆಗಾಗ್ಗೆ ಮಾತನಾಡುತ್ತದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಕಳೆದ ವರ್ಷ ‘ಅಖಂಡ ಭಾರತ’ದ ಕುರಿತು ಪ್ರಸ್ತಾಪಿಸಿದ್ದರು. ಈ ಪರಿಕಲ್ಪನೆ ಈಗ ಪಠ್ಯಪುಸ್ತಕದಲ್ಲೂ ಕಾಣಿಸಿಕೊಂಡಿದೆ. ಪಠ್ಯಪುಸ್ತಕದಿಂದ ಸಿದ್ಧಾಂತಗಳನ್ನು ತೆಗೆದುಹಾಕಲಾಗಿದೆ ಎನ್ನುವ ಪಠ್ಯಪರಿಶೀಲನಾ ಸಮಿತಿ ತನ್ನದೇ ಮಾತನ್ನು ಉಲ್ಲಂಘಿಸಿದಂತೆ ಕಾಣುತ್ತಿದೆ. ಆರ್‌ಎಸ್‌ಎಸ್ ಪ್ರತಿಪಾದಿಸುವ ‘ಅಖಂಡ ಭಾರತ’ ಪರಿಕಲ್ಪನೆಯು ಹೊಸ ಪಠ್ಯದಲ್ಲಿ ತುರುಕಲ್ಪಟ್ಟಿದೆ.
ಎಂಟನೇ ತರಗತಿಯ ಸಮಾಜ ವಿಜ್ಞಾನ ಭಾಗ -1ರ ಪರಿಷ್ಕೃತ ಪಠ್ಯದಲ್ಲಿ ‘ಭರತವರ್ಷ’ ಎಂಬ ಶೀರ್ಷಿಕೆಯಲ್ಲಿ ಪಾಠವನ್ನು ಇಡಲಾಗಿದೆ. ಚೀನಾ ದೇಶವನ್ನೂ ಅಖಂಡ ಭಾರತ ಪರಿಕಲ್ಪನೆಯೊಳಗೆ ಎಳೆದುಕೊಳ್ಳಲಾಗಿದೆ.
‘ಭರತವರ್ಷ’ ಪಾಠದಲ್ಲಿ ಏನಿದೆ?
“ಜಗತ್ತಿನ ಪ್ರತಿಯೊಂದು ರಾಷ್ಟ್ರ ಹಾಗೂ ಜನಸಮುದಾಯಗಳ ಮೇಲೆ ಭೌಗೋಳಿಕ ಪರಿಸರವು ಪ್ರಭಾವ ಬೀರಿವೆ. ಮಾನವನ ಜೀವನಕ್ಕೂ ಅವನ ಪರಿಸರಕ್ಕೂ ನಿಕಟ ಸಂಬಂಧವಿದೆ. ಆದ್ದರಿಂದ ಮನುಷ್ಯನ ಚರಿತ್ರೆ ತಿಳಿಯಲು ಭೌಗೋಳಿಕ ಪರಿಸರದ ಅರಿವು ಅತ್ಯವಶ್ಯಕವಾಗಿದೆ. ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ವಿಶಾಲ ಪ್ರದೇಶವನ್ನು ಹೊಂದಿರುವ ಭಾರತವು ಒಂದು ಉಪಖಂಡ. ಮೂರು ಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಭಾಗದಿಂದಲೂ ಆವೃತ್ತವಾಗಿರುವುದರಿಂದ ಇದೊಂದು ಪರ್ಯಾಯ ದ್ವೀಪವಾಗಿದೆ. ಭಾರತ ಇಂದು ಪಾಕಿಸ್ತಾನ, ಅಫಘಾನಿಸ್ಥಾನ, ಚೀನಾ, ನೇಪಾಳ, ಭೂತಾನ್, ಬಾಂಗ್ಲಾ ಮತ್ತು ಮಯನ್ಮಾರ್‌ಗಳೊಂದಿಗೆ ತನ್ನ ಭೂಗಡಿಯನ್ನು ಹೊಂದಿದೆ. ಈ ಎಲ್ಲ ಪ್ರದೇಶಗಳು ಒಟ್ಟಾಗಿ ಭರತವರ್ಷ ಎಂದು ಕರೆಯಲ್ಪಟ್ಟಿತ್ತು. ಇದನ್ನು ಭರತ ಖಂಡ, ಸಿಂಧೂ ದ್ವೀಪ, ಬೃಹತ ಭಾರತ, ಅಖಂಡ ಭಾರತ ಎಂದೂ ಕರೆಯಲಾಗುತ್ತಿತ್ತು. 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳು ಮತ್ತು ಒಂದು ರಾಷ್ಟ್ರ ರಾಜಧಾನಿ (ದೆಹಲಿ) ಪ್ರದೇಶ ಇದರ ವ್ಯಾಪ್ತಿಯಲ್ಲಿವೆ.
– ಹೀಗೆ ಆರಂಭವಾಗುತ್ತದೆ ಪಾಠ.
ಅಖಂಡ ಭಾರತ ಪರಿಕಲ್ಪನೆ
‘ವಿಶ್ವದ ಕಲ್ಯಾಣಕ್ಕಾಗಿ ಅದ್ಭುತವಾದ ಅಖಂಡ ಭಾರತವನ್ನು ಮತ್ತೊಮ್ಮೆ ಒಗ್ಗೂಡಿಸುವ ಅಗತ್ಯವಿದೆ. ಇದಕ್ಕಾಗಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಅವಶ್ಯಕತೆ ಇದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳೆದ ವರ್ಷ ಹೇಳಿದ್ದರು.
‘ಅಖಂಡ ಭಾರತ’ದ ಒಗ್ಗೂಡುವಿಕೆಯು ಬಲ ಪ್ರಯೋಗದಿಂದ ಆಗುವುದಿಲ್ಲ, ಆದರೆ, ಅದು ಮಾನವೀಯತೆ ಸಾರುವ ಹಿಂದೂಧರ್ಮದಿಂದ ಮಾತ್ರ ಸಾಧ್ಯವಾಗಲಿದೆ. ದೇಶದಿಂದ ವಿಭಜನೆಗೊಂಡು ದೀರ್ಘ ಸಮಯದಿಂದ ಹೊರಗುಳಿದಿರುವ ಪಾಕಿಸ್ತಾನದಂತಹ ದೇಶಗಳು ಇಂದು ಸಂಕಷ್ಟದಲ್ಲಿವೆ. ಈ ಎಲ್ಲ ದೇಶಗಳಿಗೂ ಇನ್ನು ಮುಂದೆ ಅಖಂಡ ಭಾರತದ ಅಗತ್ಯ ಹೆಚ್ಚಿರಲಿದೆ’ ಎಂದು ಪ್ರತಿಪಾದಿಸಿದ್ದರು.
ಅಖಂಡ ಭಾರತ ಎಂದು ಗೂಗಲ್ ಮಾಡಿದರೆ, “ಕೇಸರಿ ವರ್ಣ”ದ ಭೂಪಟಗಳು ತೆರೆದುಕೊಳ್ಳುತ್ತವೆ. ಬ್ರಿಟಿಷರಿಗೆ ಸರಣಿ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದ ವಿ.ಡಿ.ಸಾವರ್ಕರ್ ಅವರೂ ಅಖಂಡ ಭಾರತ ಪರಿಕಲ್ಪನೆಯನ್ನು ಪ್ರತಿಪಾದಿಸಿದ ವಿವರಗಳಿವೆ.
"ಅಖಂಡ ಭಾರತ ದಿವಸ"
ದೇಶದ ಐಕ್ಯತೆಯನ್ನು ಸಾರುವ ಹಿನ್ನೆಲೆ ಅಖಂಡ ಭಾರತ ದಿವಸವನ್ನು ಪ್ರತಿವರ್ಷ ಆಗಸ್ಟ್ 14 ರಂದು ಆಚರಿಸಲಾಗುತ್ತಿದೆ. ಅಖಂಡ ಭಾರತದ ಕಲ್ಪನೆ ಸಿಂಧೂ ನಾಗರಿಕತೆಯಷ್ಟೇ ಹಳೆಯದಾಗಿದ್ದು, ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಇದರ ಕುರಿತು ವಿವರಿಸಲ್ಪಟ್ಟಿದೆ.#AkhandBharatDivas pic.twitter.com/yKdTDJUyHH
— Arvind Bellad (@BelladArvind) August 14, 2021
ತನ್ನದೇ ಚೌಕಟ್ಟು ಮೀರಿದ ಸಮಿತಿ
ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯ ಪರಿಷ್ಕರಣೆಯಲ್ಲಿ ಕೆಲವು ಚೌಕಟ್ಟುಗಳನ್ನು ಹಾಕಿಕೊಂಡಿರುವುದಾಗಿ ಬರೆದುಕೊಂಡಿದೆ. 1. ಯಾವುದೇ ಜಾತಿ, ಧರ್ಮ, ಪಂಥ ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ ಅಪಮಾನವಾಗುವ ಆಕ್ಷೇಪಾರ್ಹ ಅಂಶಗಳಿರದಂತೆ ಎಚ್ಚರ ವಹಿಸಬೇಕು. 2. ವಿಷಯಗಳನ್ನು ಕ್ರಮಬದ್ಧವಾಗಿ, ಕಾಲಪಟ್ಟಿಗನುಗುಣವಾಗಿ ಕೊಡಬೇಕು. 3. ಅನಗತ್ಯ ವಿಷಯಗಳು ತುಂಬಿತುಳುಕಾಡುವ ಮಾಹಿತಿಕೋಶವಾಗಿಸದೆ ಜ್ಞಾನಕೋಶಗಳಾಗಿ ಮಾಡಬೇಕು. 4. ಸ್ವ ಹಿತಾಸಕ್ತಿಯ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು. 5. ಅರ್ಧಸತ್ಯ, ಅಸತ್ಯ, ಉತ್ಪ್ರೇಕ್ಷೆ, ನಿರ್ಣಯ ಮುಂತಾದವನ್ನು ಕೈಬಿಟ್ಟು ಅಧಿಕೃತ ಆಧಾರಗಳಿರುವ ಸಂಗತಿಗಳನ್ನಷ್ಟೇ ಮುಂದಿಡಬೇಕು. 6. ಎಲ್ಲ ವಿಷಯಗಳಿಗೆ ತಕ್ಕ ಪ್ರಾತಿನಿಧ್ಯ ಕೊಡಬೇಕು. 7. ಐತಿಹಾಸಿಕ ಉಪೇಕ್ಷಿತ ಸಂಗತಿಗಳನ್ನು, ಅವುಗಳ ಪ್ರಾಮುಖ್ಯಕ್ಕನುಗುಣವಾಗಿ ಪಠ್ಯಗಳಲ್ಲಿ ತರಬೇಕು. 8. ಎಲ್ಲ ಬಗೆಯ ತಪ್ಪುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಗ್ಗಿಸಬೇಕು. – ಹೀಗೆ ಚೌಕಟ್ಟುಗಳನ್ನು ಸಮಿತಿ ಹಾಕಿಕೊಂಡಿದೆ. ಆದರೆ ಎಂಟನೇ ತರಗತಿಯ ಇತಿಹಾಸ ಪಠ್ಯವನ್ನು ನೋಡುತ್ತಾ ಹೋದರೆ ವೈದಿಕತೆಯ ವೈಭವೀಕರಣ ಎದ್ದು ಕಾಣುತ್ತದೆ. (ಎಂಟನೇ ತರಗತಿಯಲ್ಲಿ ಮಾಡಲಾಗಿರುವ ಬದಲಾವಣೆಗಳ ಕುರಿತು ಸರಣಿ ಲೇಖನ ಬರಲಿದೆ.)



ಗುರುಗಳೇ ಇನ್ನಾದರೂ ಬಿಡಿ ಸಮಿತಿ ಬರ್ಕಾಸ್ತ್ ಆಗಿದೆ