Homeಚಳವಳಿಸಿಎಂ ಬೊಮ್ಮಾಯಿ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ: ಮುಖಾಮುಖಿ ಮಾತುಕತೆಗೆ ಒತ್ತಾಯ

ಸಿಎಂ ಬೊಮ್ಮಾಯಿ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ: ಮುಖಾಮುಖಿ ಮಾತುಕತೆಗೆ ಒತ್ತಾಯ

ಕೆಂಪೇಗೌಡರ ಬಗ್ಗೆ ಮುಖ್ಯಮಂತ್ರಿಯವರು ತಿಳಿಸಿರುವ ಹೊಸಪಾಠವನ್ನು ಎಲ್ಲಿ ಸೇರಿಸಿದ್ದಾರೆಂದು ಸ್ಪಷ್ಟವಿಲ್ಲ- ಬರಗೂರು

- Advertisement -
- Advertisement -

ಪಠ್ಯ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿಯವರು ನೀಡಿದರು ಪತ್ರಿಕಾ ಹೇಳಿಕೆಗೆ ಪ್ರೊ. ಬರಗೂರು ರಾಮಚಂದ್ರಪ್ಪನವರು ಸ್ಪಷ್ಟನೆ ನೀಡಿದ್ದು, ಮುಖಾಮುಖಿ ಚರ್ಚೆಗೆ ಒತ್ತಾಯಿಸಿದ್ದಾರೆ.

ಈ ಕುರಿತು 4 ಅಂಶಗಳ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಬಸವಣ್ಣನವರ ಕುರಿತು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಹಲವು ಅಂಶಗಳನ್ನು ಕೈಬಿಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.

ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ಮತ್ತು ನಾಡಿನ ಇತರೆ ಸ್ವಾಮೀಜಿಯವರು ಬಸವಣ್ಣನವರ ವಿಷಯದಲ್ಲಿ ಎತ್ತಿದ ಪ್ರಶ್ನೆಗೆ ‘ಪ್ರೊ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯ ಅಂಶಗಳಿವೆ’ ಎಂದು ಸಿಎಂ ಹೇಳಿದ್ದಾರೆ. ಆದರೆ ವಾಸ್ತವ ಹೀಗಿದೆ : 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರಲ್ಲಿ ನಾವು ಅಳವಡಿಸಿದ್ದ ವಿವರಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಮರುಪರಿಷ್ಕರಣೆಯಲ್ಲಿ ಉಳಿಸಿಕೊಂಡಿದ್ದರೂ 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿದ್ದ ಬಸವಣ್ಣನವರ ವಿವರಗಳಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಬಿಡಲಾಗಿದೆ. ಮರುಪರಿಷ್ಕರಣೆಯ ಪಠ್ಯದಲ್ಲಿ ಬಸವಣ್ಣನವರು ವೈದಿಕ ಮೂಲ ಮೌಲ್ಯಾಚರಣೆಗಳನ್ನು ವಿರೋಧಿಸಿದ್ದು, ಯಜ್ಞೋಪವೀತವನ್ನು ಕಿತ್ತೆಸೆದದ್ದು, ಉನ್ನತಾಧಿಕಾರದಲ್ಲಿದ್ದರೂ ಚಳವಳಿ ಕಟ್ಟಿದ್ದು, ‘ದೇಹವೇ ದೇಗುಲ’ ಎಂಬ ಹೊಚ್ಚ ಹೊಸ ಪರಿಕಲ್ಪನೆ ನೀಡಿದ್ದು, ಜನಸಾಮಾನ್ಯರಿಗೆ ತಲುಪುವ ಸರಳ ಕನ್ನಡದಲ್ಲಿ ವಚನಕಾರರು ಬರೆದದ್ದು-ಮುಂತಾದ ವಿಷಯಗಳನ್ನು ಮರುಪರಿಷ್ಕರಣೆಯಲ್ಲಿ ಬಿಡಲಾಗಿದೆ. ನಾವು ಪರಿಷ್ಕರಣೆ ಮಾಡಿದಾಗ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕಕ್ಕೆ ‘ಬಸವಣ್ಣನವರ ಜೀವನ ದರ್ಶನ’ ಕುರಿತ ಹೊಸ ಪಾಠವನ್ನು ಸೇರಿಸಿದ್ದೆವು ಎಂಬ ವಿಷಯವನ್ನು ಇಲ್ಲಿ ತಿಳಿಸಬಯಸುತ್ತೇನೆ ಎಂದು ಬರಗೂರು ಹೇಳಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ಹತ್ತು ರಚನೆಗಳು ಮರುಪರಿಷ್ಕರಣೆಯ ಒಟ್ಟು ಕನ್ನಡ ಭಾಷಾ ಪಠ್ಯಗಳಲ್ಲಿ ಇರುವುದು ನಿಜ, ನಾವು ಪರಿಷ್ಕರಣೆ ಮಾಡಿದಾಗ ಮೂಲ ಪಠ್ಯಪುಸ್ತಕದಲ್ಲಿ ಇಲ್ಲದ ಕೆಲವು ಮುಖ್ಯ ಸಾಹಿತಿಗಳ ಪಾಠ ಸೇರಿಸುವುದಕ್ಕಾಗಿ ಸಾಮಾನ್ಯ ಮಾನದಂಡವನ್ನು ರೂಪಿಸಿಕೊಂಡೆವು. ರಾಷ್ಟ್ರಕವಿ ಕುವೆಂಪು ಅವರ ಅಪೂರ್ವ ಸಾಧನೆಗೆ ಚ್ಯುತಿಯುಂಟು ಮಾಡದೆ, ಮೂಲ ಪಠ್ಯಪುಸ್ತಕಗಳಲ್ಲಿ ಇಲ್ಲದೆ ಇದ್ದ, ಕಲ್ಯಾಣ ಕರ್ನಾಟಕದ ಸಿಂಪಿ ಲಿಂಗಣ್ಣ, ಶಾಂತರಸ, ಚೆನ್ನಣ್ಣ ವಾಲೀಕಾರ ಅವರಲ್ಲದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕೆಲವು ಲೇಖಕಿಯರ ಪಾಠಗಳನ್ನು ಸೇರಿಸಿದೆವು. ಈ ನಮ್ಮ ನಡೆಯು ಕುವೆಂಪು ಅವರ ಅಖಂಡ ಕರ್ನಾಟಕ ಪರಿಕಲ್ಪನೆ ಮತ್ತು ಸಾಮಾಜಿಕ ನ್ಯಾಯ ಕಲ್ಪನೆಗೆ ಅನುಗುಣವಾಗಿತ್ತು ಎಂದು ಬರಗೂರು ಹೇಳಿದ್ದಾರೆ.

ಮುಂದುವರೆದು ಕುವೆಂಪು ಅವರ ಪಠ್ಯ ಹೆಚ್ಚು ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ನೀಡಿದ ಸಂಖ್ಯಾ ಮಾಹಿತಿಯಿಂದ, ನಾಡಗೀತೆ, ನಾಡಧ್ವಜ, ಕನ್ನಡ ಭಾಷೆಗಳಿಗೆ ಮಾಡಿದ ಅವಮಾನಕ್ಕೆ ಖಂಡಿತ ರಿಯಾಯಿತಿ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಹೊಸದಾಗಿ ಪಾಠ ಸೇರಿಸಿರುವುದಾಗಿ ಹೇಳಿದ್ದಾರೆ. ವಾಸ್ತವವೆಂದರೆ, 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿ ‘ಯಲಹಂಕ ನಾಡಪ್ರಭುಗಳು’ ಎಂಬ ಪಾಠವನ್ನು ನಮ್ಮ ಪರಿಷ್ಕರಣೆಯ ಕಾಲದಲ್ಲೇ ಸೇರಿಸಿದ್ದೇವೆ, ಕೆಂಪೇಗೌಡರ ವಂಶಾವಳಿ ಮತ್ತು ಆಳ್ವಿಕೆಯ ವಿವರಗಳನ್ನು ನೀಡಿದ್ದೇವೆ ಆದರೆ ಮರುಪರಿಷ್ಕರಣೆಯಲ್ಲಿ ನಾವು ಕೊಟ್ಟಿದ್ದ ವಿವರಗಳನ್ನು ಕಡಿತ ಮಾಡಲಾಗಿದೆ. ಜೊತೆಗೆ ಯಲಹಂಕ ನಾಡಪ್ರಭುಗಳ ಆಳ್ವಿಕೆಯ ವಿಸ್ತೀರ್ಣವನ್ನು ಬೆಂಗಳೂರು ಜಿಲ್ಲೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಬೆಂಗಳೂರು, ರಾಮನಗರ, ತುಮಕೂರು, ಅವಿಭಜಿತ ಕೋಲಾರ ಜಿಲ್ಲೆಗಳು ಕೂಡ ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದನ್ನು ವಿವರಿಸಲಾಗಿತ್ತು. ಇದನ್ನು ಮರುಪರಿಷ್ಕರಣೆಯಲ್ಲಿ ಬಿಟ್ಟಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರು ತಿಳಿಸಿರುವ ಹೊಸಪಾಠವನ್ನು ಎಲ್ಲಿ ಸೇರಿಸಿದ್ದಾರೆಂದು ಸ್ಪಷ್ಟವಿಲ್ಲ ಎಂದು ಬರಗೂರು ಹೇಳಿದ್ದಾರೆ.

ಇದನ್ನೂ ಓದಿ; ಬಹುತ್ವಕ್ಕೆ ಮಾರಕವಾದ ಪಠ್ಯ ಹೇರಲು ಕಾಂಗ್ರೆಸ್ ಬಿಡುವುದಿಲ್ಲ: ರಾಹುಲ್ ಗಾಂಧಿ

ಪರಿಷ್ಕರಣೆ ಎಂದಾಗ ಕೆಲವನ್ನು ಬಿಡುವುದು ಮತ್ತು ಸೇರಿಸುವುದು ಇರುತ್ತದೆ. ಆದರೆ ಈ ಕ್ರಿಯೆಗೆ ನ್ಯಾಯಸಮ್ಮತ ಮಾನದಂಡವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇಂಥದೊಂದು ನ್ಯಾಯಸಮ್ಮತ ಮಾನದಂಡವು ಮರುಪರಿಷ್ಕರಣೆಯಲ್ಲಿ ಕಾಣಿಸುವುದಿಲ್ಲ. ಕನ್ನಡ ಭಾಷಾ ಪಠ್ಯಗಳಲ್ಲಿ ದೇವನೂರರನ್ನು ಹೊರತುಪಡಿಸಿ ಎಲ್ಲಾ ದಲಿತ ಮೂಲದ ಸಾಹಿತಿಗಳ ರಚನೆಗಳನ್ನು ತೆಗೆಯಲಾಗಿದೆ. ಬಹುಪಾಲು ಮಹಿಳಾ ಸಾಹಿತಿಗಳ ರಚನೆಗಳನ್ನು ಬಿಡಲಾಗಿದೆ. ಬುದ್ಧ, ಅಂಬೇಡ್ಕರ್ ಅಂಥವರ ವಸ್ತುವುಳ್ಳ ಕವನಗಳನ್ನು ಕೈಬಿಡಲಾಗಿದೆ. 6ನೇ ತರಗತಿಯ ಸಮಾಜ ವಿಜ್ಞಾನದಿಂದ ಬೌದ್ಧಧರ್ಮ ಮತ್ತು ಜೈನಧರ್ಮದ ವಿವರಗಳನ್ನು ತೆಗೆಯಲಾಗಿದೆ. ನಾವು ಹೊಸದಾಗಿ ಸೇರಿಸಿದ್ದ ಸಾವಿತ್ರಿಬಾಯಿ ಫುಲೆ ಮುಂತಾದ ಸುಧಾರಕಿಯರ ಪಾಠಕ್ಕೆ ಕೊಕ್ ಕೊಡಲಾಗಿದೆ. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ, ನಾಸಿಕ್ ದೇವಾಲಯ ಪ್ರವೇಶದಂತಹ ಅನೇಕ ಸಾಲುಗಳು ಮರುಪರಿಷ್ಕರಣೆಯಲ್ಲಿ ಇಲ್ಲವಾಗಿವೆ. ನಾವು ಸೇರಿಸಿದ್ದ ನಾರಾಯಣ ಗುರು ಕುರಿತ ಪಾಠವನ್ನು ಬಿಟ್ಟಿದ್ದು ಮತ್ತೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಇಲ್ಲಿ ತೆಗೆದದ್ದು, ಸೇರಿಸಿದ್ದು ಯಾರನ್ನು ಮತ್ತು ಎಂಥ ಪಾಠವನ್ನು ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ದಲಿತ ವಿರೋಧಿ, ಮಹಿಳಾ ವಿರೋಧಿ ಮತ್ತು ಸಂವಿಧಾನಾತ್ಮಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿ ಕ್ರಮವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಗೌಣವಾಗಿದೆ. ಅಷ್ಟೇ ಅಲ್ಲ, ಬಸವಣ್ಣ, ಕುವೆಂಪು ಅವರ ಆದರ್ಶಕ್ಕೂ ವಿರುದ್ಧವಾಗಿದೆ. ಮಾನ್ಯ ಮುಖ್ಯಮಂತ್ರಿಯವರು ಪ್ರತಿರೋಧಿಸುತ್ತಿರುವ ಸಂಸ್ಥೆ ಹಾಗೂ ವ್ಯಕ್ತಿಗಳನ್ನು ಕರೆದು ಮಾತಾಡಿ ತೀರ್ಮಾನಕ್ಕೆ ಬರುವುದು ಪ್ರಜಾಸತ್ತಾತ್ಮಕ ಸರ್ಕಾರದ ಜವಾಬ್ದಾರಿ. ಇಲ್ಲದಿದ್ದರೆ ಏಕಪಕ್ಷೀಯವಾಗುತ್ತದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಸುಳ್ಳು ಹೇಳುವುದು ಹೇಗೆ ಎಂಬುದನ್ನು ಮನುವಾದಿಗಳು ಮುಖ್ಯ ಮಂತ್ರಿ ಬೊಮ್ಮಾಯಿಯವರಿಗೆ ಬಹಳ ಚೆನ್ನಾಗಿ ಹೇಳಿಕೊಟ್ಟಿರುವಂತಿದೆ.

  2. ಎಲ್ಲಾ ಕಡೆಗಳಿಂದಲೂ ವಿರೋಧ ಬಂದಿದ್ದರೂ, ಬೊಮ್ಮಾಯಿ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ ಯಂತೆ ಸ್ಪಷ್ಟನೆ ನೀಡದೆ ಜಾರಿಕೆ,ಬೇಜಾವ್ದಾರಿ ಹಾರಿಕೆ ಉತ್ತರ ಕೊಟ್ಟಿರುವುದು ನೋಡಿದರೆ ,ಇವರೆಲ್ಲಾ ವೈದಿಕ ಸಮುದಾಯದ ಗುಲಾಮರಷ್ಟೇ.

  3. ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲಾ ಅಂತ ಅಂದುಕೊಂಡಂನಂತೆ, ಆದರೆ ಮುಖವೆಲ್ಲಾ ಮಣ್ಣಾಆಗಿತ್ತಂತೆ, ಹಾಗಾಗಿದೆ ಸರ್ಕಾರದ ಸ್ಥಿತಿ.

LEAVE A REPLY

Please enter your comment!
Please enter your name here

- Advertisment -

Must Read

‘ಬಿಜೆಪಿ ಟಿಕೆಟ್ ಆಮಿಷ ನೀಡಿ ರಾಜೀನಾಮೆ ಕೊಡಿಸಿ ವಂಚಿಸಿದ್ರು’: ಮಣಿಪುರ ಹಿಂಸಾಚಾರದ ತನಿಖೆ ನಡೆಸುತ್ತಿದ್ದ...

0
ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವ ವಹಿಸಲು ಸುಪ್ರೀಂ ನಿರ್ದೇಶನದ ಕೆಲವೇ ದಿನಗಳಲ್ಲಿ ಅಸ್ಸಾಂ-ಮೇಘಾಲಯ ಕೇಡರ್‌ನ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ...