ಪಾಕಿಸ್ತಾನದ ಆಜ್ಞೆಯ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ವಿಷಯವನ್ನು ಚೀನಾ ಪ್ರಸ್ತಾಪಿಸಿದ ಒಂದು ದಿನದ ನಂತರ ಭಾರತವು, ತನ್ನ ಆಂತರಿಕ ವ್ಯವಹಾರಗಳಲ್ಲಿ ಚೀನಾದ ಹಸ್ತಕ್ಷೇಪವನ್ನು “ದೃಢವಾಗಿ ತಿರಸ್ಕರಿಸುತ್ತದೆ” ಎಂದು ಹೇಳಿದೆ.
ಇದರ ನಡುವೆ, ಯುಎನ್ ವಿಶೇಷ ವರದಿಗಾರ ನಿಲ್ಸ್ ಮೆಲ್ಜರ್, ಭಾರತಕ್ಕೆ ಭೇಟಿ ನೀಡುವ ಬಗ್ಗೆ ಅವರು ಮಾಡಿದ ಮನವಿಗೆ ಭಾರತ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದ್ದಾರೆ. ಈ ಕುರಿತು ಪ್ರತಿವರ್ಷವೂ ಔಪಚಾರಿಕವಾಗಿ ಮನವಿ ಮಾಡಿದ್ದರೂ ಸಹ ಭಾರತಕ್ಕೆ ಭೇಟಿ ನೀಡುವುದರ ಕುರಿತಂತೆ ಒಮ್ಮೆಯೂ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
ಗುರುವಾರ, ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು “ಜಮ್ಮು ಮತ್ತು ಕಾಶ್ಮೀರದ ಭಾರತೀಯ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚೀನಾ ಯುಎನ್ ಭದ್ರತಾ ಮಂಡಳಿಯಲ್ಲಿ ಚರ್ಚೆಯನ್ನು ಪ್ರಾರಂಭಿಸಿದೆ ಎಂದು ನಾವು ಗಮನಿಸಿದ್ದೇವೆ. ಭಾರತದ ಆಂತರಿಕ ವಿಷಯದ ಬಗ್ಗೆ ಚರ್ಚಿಸಲು ಚೀನಾ ಪ್ರಯತ್ನಿಸಿದ್ದು ಇದೇ ಮೊದಲಲ್ಲ” ಎಂದು ಹೇಳಿದ್ದಾರೆ.
ಹಿಂದಿನ ಸಂದರ್ಭಗಳಂತೆ, ಅವರ ಈ ಪ್ರಯತ್ನಕ್ಕೆ ಅಷ್ಟೆನೂ ಬೆಂಬಲ ವ್ಯಕ್ತವಾಗಲಿಲ್ಲ. ನಮ್ಮ ಆಂತರಿಕ ವ್ಯವಹಾರಗಳಲ್ಲಿ ಚೀನಾದ ಹಸ್ತಕ್ಷೇಪವನ್ನು ನಾವು ದೃಢವಾಗಿ ತಿರಸ್ಕರಿಸುತ್ತೇವೆ ಅವರು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ, “ಪಾಕಿಸ್ತಾನದ ಮತ್ತೊಂದು ಪ್ರಯತ್ನ ವಿಫಲವಾಗಿದೆ! ಎಂದು ಹೇಳಿದ್ದಾರೆ. ಕಳೆದ ವರ್ಷದಿಂದ UNSCಯಲ್ಲಿ ಯಾವುದೇ ಫಲಿತಾಂಶ ಅಥವಾ ನಿರ್ಣಯವಿಲ್ಲದೆ ಈ ವಿಷಯವನ್ನು ಎತ್ತಿದ್ದು ಇದು ಮೂರನೇ ಬಾರಿ. ಮೊದಲು ಕಳೆದ ಆಗಸ್ಟ್‌ನಲ್ಲಿ ಮತ್ತು ಮತ್ತೆ ಜನವರಿಯಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದರ ನಡುವೆ ಜಿನೀವಾದಲ್ಲಿ, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು, ವಿಶೇಷ ವರದಿಗಾರರು ಸೇರಿದಂತೆ ಕಾಶ್ಮೀರ ಭೂಪ್ರದೇಶದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಪರಿಹರಿಸಲು “ತುರ್ತು ಕ್ರಮ” ತೆಗೆದುಕೊಳ್ಳುವಂತೆ ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಪರಿಸ್ಥಿತಿಯನ್ನು ಪರಿಹರಿಸಲು ಭಾರತವು ಯಾವುದೇ ನೈಜ ಮತ್ತು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅಂತರರಾಷ್ಟ್ರೀಯ ಸಮುದಾಯವು ಮುಂದಿನ ಹೆಜ್ಜೆ ಇಡುತ್ತದೆ” ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಯುಎಸ್ ಕಾರ್ಯದರ್ಶಿ ಜೊತೆ ಲಡಾಖ್ ಕುರಿತು ಚರ್ಚೆ; ಎಸ್ ಜೈಶಂಕರ್


