ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ.
ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ನಿಯೋಗ, ಮಂಗಳವಾರ (ಜ.13) ಆರ್‌ಎಸ್‌ಎಸ್ ಕಚೇರಿಯಲ್ಲಿ, ಅದರ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಎಂದು ತಿಳಿದು ಬಂದಿದೆ.
ಬಿಜೆಪಿಯ ದೆಹಲಿ ಕಚೇರಿಗೆ ಸಿಪಿಸಿ ನಿಯೋಗ ಭೇಟಿ ನೀಡಿರುವ ಮಾಹಿತಿಯನ್ನು, ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಘಟಕದ ಮುಖ್ಯಸ್ಥ ವಿಜಯ್ ಚೌತೈವಾಲೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, “ಅಂತಾರಾಷ್ಟ್ರೀಯ ಸಂಪರ್ಕ ವಿಭಾಗದ ಉಪಾಧ್ಯಕ್ಷರಾಗಿರುವ ಸನ್ ಹೈಯಾನ್ ನೇತೃತ್ವದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವು ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದೆ” ಎಂದು ಹೇಳಿದ್ದಾರೆ.
“ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ಬಿಜೆಪಿ ನಿಯೋಗವು ‘ಬಿಜೆಪಿ ಮತ್ತು ಸಿಪಿಸಿ’ ನಡುವಿನ ಅಂತರ-ಪಕ್ಷ ಸಂವಹನವನ್ನು ಹೇಗೆ ಮುಂದುವರಿಸುವುದು ಎಂಬುದರ ಕುರಿತು ದೀರ್ಘವಾಗಿ ಚರ್ಚಿಸಿದೆ” ಎಂದು ಚೌತೈವಾಲೆ ತಿಳಿಸಿದ್ದಾರೆ.
ಮಂಗಳವಾರ ಕೇಶವ್ ಕುಂಜ್‌ನಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿಯಾದ ನಿಯೋಗ ಸುಮಾರು30-40 ನಿಮಿಷ ಮಾತುಕತೆ ನಡೆಸಿದೆ. ಇದು ಸೌಜನ್ಯಯುತ ಭೇಟಿ, ಆರ್‌ಎಸ್‌ಎಸ್‌ನ ಕಾರ್ಯನಿರ್ವಹಣೆಯ ಬಗ್ಗೆ ನಿಯೋಗ ಮಾಹಿತಿ ಪಡೆದುಕೊಂಡಿದೆ ಎಂದು ವರದಿಗಳು ಹೇಳಿವೆ.
ಬಿಜೆಪಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷಗಳು 2000ರ ದಶಕದ ಅಂತ್ಯದಿಂದಲೂ ಒಳ್ಳೆಯ ಸಂಪರ್ಕದಲ್ಲಿವೆ. ಬಿಜೆಪಿಯ ಹಲವಾರು ನಿಯೋಗಗಳು ಚೀನಾದ ನಾಯಕರನ್ನು ಭೇಟಿ ಮಾಡಲು ಬೀಜಿಂಗ್‌ಗೆ ಭೇಟಿ ನೀಡಿವೆ. 2009ರಲ್ಲಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ನಿಯೋಗವು ಚೀನಾಕ್ಕೆ ಭೇಟಿ ನೀಡಿತ್ತು ಎಂದು ವರದಿಗಳು ಉಲ್ಲೇಖಿಸಿವೆ.
ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವು ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರನ್ನು ಕೂಡ ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಪಕ್ಷದ ನಾಯಕರೊಬ್ಬರನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ.
ಈ ನಡುವೆ, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ಮಂಗಳವಾರ ಚೀನಾದ ನಿಯೋಗದೊಂದಿಗಿನ ಬಿಜೆಪಿ ಸಭೆಯನ್ನು ಟೀಕಿಸಿದ್ದಾರೆ.
“ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ಪಾಕಿಸ್ತಾನವನ್ನು ಬೆಂಬಲಿಸಿತ್ತು” ಎಂದು ಶ್ರೀನಾತೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. “ನಮ್ಮ ಧೈರ್ಯಶಾಲಿ ಸೈನಿಕರು ಗಾಲ್ವಾನ್‌ನಲ್ಲಿ ಹುತಾತ್ಮರಾದರು. ಲಡಾಖ್‌ನಲ್ಲಿ ಅತಿಕ್ರಮಣ ಮಾಡಿದ ನಂತರ ಚೀನಾ ಅಲ್ಲಿಯೇ ಕುಳಿತಿದೆ. ಅದು ಅರುಣಾಚಲ ಪ್ರದೇಶದ ಹಳ್ಳಿಗಳನ್ನು ಕಬಳಿಸುತ್ತಿದೆ. ಇಲ್ಲಿ, ಅಪ್ಪುಗೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ತಮ್ಮ ಪಕ್ಷವು ತನ್ನ ಚೀನಾ ನೀತಿಯ ಬಗ್ಗೆ ಸರ್ಕಾರದಿಂದ ಸಂಪೂರ್ಣ ಹೊಣೆಗಾರಿಕೆ ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ತುಹಿನ್ ಸಿನ್ಹಾ, “ಇದು ಔಪಚಾರಿಕ ಸಭೆಯ ಪ್ರಕ್ರಿಯೆಯಾಗಿತ್ತು. ಪರಿಸ್ಥಿತಿ ಸುಧಾರಿಸಿದಾಗ ಔಪಚಾರಿಕ ಸಭೆ ನಡೆಯುತ್ತದೆ. ನಾವು ಅದನ್ನು ಬಹಳ ಬಹಿರಂಗವಾಗಿ ಮಾಡುತ್ತೇವೆ” ಎಂದಿದ್ದಾರೆ.
“ನಾವು ವರ್ಷಗಳ ಕಾಲ ವಿವರಿಸಲು ಸಾಧ್ಯವಾಗದ ಯಾವುದೇ ತಿಳುವಳಿಕೆ ಒಪ್ಪಂದಕ್ಕೆ ರಹಸ್ಯವಾಗಿ ಸಹಿ ಹಾಕುವುದಿಲ್ಲ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂಬುವುದು ಬಿಜೆಪಿಯ ಆರೋಪವಾಗಿದೆ.


