ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 11 ಜನರಲ್ಲಿ ಒಬ್ಬರಾದ ದಿವ್ಯಾಂಶಿ ಅವರ ತಾಯಿ, ತಮ್ಮ ಮಗಳ ಸಾವಿಗೆ ಕರ್ನಾಟಕ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ಈ ದುರಂತವನ್ನು ಹುಚ್ಚುತನ ಹಾಗೂ ರಾಜ್ಯ ಸರ್ಕಾರದ ನಿರ್ವಹಣೆಯ ದುಷ್ಪರಿಣಾಮ ಎಂದು ಕರೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025 ವಿಜಯೋತ್ಸವದ ಸಂದರ್ಭದಲ್ಲಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ದಿವ್ಯಾಂಶಿ ಸಾವನ್ನಪ್ಪಿದರು. ಕಾಲ್ತುಳಿತವು 11 ಜೀವಗಳನ್ನು ಬಲಿ ತೆಗೆದುಕೊಂಡಿತು; 47 ಅಭಿಮಾನಿಗಳನ್ನು ಗಾಯಗೊಳಿಸಿತು. ಅಂದಾಜು 2 ರಿಂದ 3 ಲಕ್ಷ ಜನರು ಕೇವಲ 35,000 ಸಾಮರ್ಥ್ಯವಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣ ಪ್ರವೇಶಿಸಲು ಆಗಮಿಸಿದ್ದರು.
“ನಾನು ಸಂಚಾರ ಪೊಲೀಸರನ್ನು ದೂಷಿಸುತ್ತೇನೆ; ಅವರಿಗೆ ಜನಸಂದಣಿಯನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿರಲಿಲ್ಲವೇ? ಸಾಕಷ್ಟು ಪೊಲೀಸ್ ನಿಯೋಜನೆ ಇತ್ತು. ಆದರೆ, ಯಾರೂ ಏನನ್ನೂ ನಿರ್ವಹಿಸಲಿಲ್ಲ. ಹೊರಗೆ ಇದು ನಡೆಯುತ್ತಿರುವಾಗ ಸರ್ಕಾರ ಕ್ರೀಡಾಂಗಣದೊಳಗೆ ಆಚರಣೆಗಳನ್ನು ನಡೆಸಿದ್ದು ಹುಚ್ಚುತನ” ಎಂದು ಅವರು ವರದಿಗಾರರ ಮುಂದೆ ಹೇಳಿದರು.

ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿ ದಿವ್ಯಾಂಶಿ ಬುಧವಾರ ತನ್ನ ತಾಯಿಯೊಂದಿಗೆ ತನ್ನ ಕ್ರಿಕೆಟ್ ಆರಾಧ್ಯ ದೈವ ವಿರಾಟ್ ಕೊಹ್ಲಿಯನ್ನು ನೋಡಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
“ನಾವು ಫುಟ್‌ಪಾತ್‌ನಲ್ಲಿ ಆರಾಮವಾಗಿ ಕುಳಿತಿದ್ದೆವು. ಒಳಗೆ ಹೋಗುವ ಯೋಜನೆಯೂ ಇರಲಿಲ್ಲ. ಅವಳು ಕ್ರಿಕೆಟ್‌ನಿಂದ ತುಂಬಾ ಆಕರ್ಷಿತಳಾಗಿದ್ದಳು, ಆಟಗಾರರ ಬಗ್ಗೆ ಅವಳಿಗೆ ಎಲ್ಲವೂ ತಿಳಿದಿತ್ತು. ಅವಳು ಕೊಹ್ಲಿಯನ್ನು ನೋಡಲು ಬಯಸಿದ್ದಳು” ಎಂದು ತಾಯಿ ಹೇಳಿದರು.
ಮಧ್ಯಾಹ್ನ 3.30 ರ ಸುಮಾರಿಗೆ ಜನಸಂದಣಿ ಅನಿಯಂತ್ರಿತವಾಗಿ ಹೆಚ್ಚಾದಾಗ ಕಾಲ್ತುಳಿತ ಸಂಭವಿಸಿತು. “ನನಗೆ ಉಸಿರುಗಟ್ಟಿಸುತ್ತಿತ್ತು; ನಾನು ಒಬ್ಬ ವ್ಯಕ್ತಿಯನ್ನು ಸುರಕ್ಷಿತವಾಗಿ ಎಳೆಯುವಲ್ಲಿ ಯಶಸ್ವಿಯಾಗಿದ್ದೆ. ನಂತರ, ಕೇವಲ ಐದು ನಿಮಿಷಗಳಲ್ಲಿ, ದಿವ್ಯಾಂಶಿ ಕಾಣೆಯಾದಳು. ಅವಳು ಒಳಗೆ ಹೋಗಿರಬಹುದು ಎಂದು ನಾನು ಭಾವಿಸಿದೆ. ಕೆಲಹೊತ್ತಿನ ಬಳಿಕ ಗಾಯಗೊಂಡಿದ್ದ ಆಕೆಯನ್ನು ನಾನು ನೋಡಿದೆ” ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.
ತನ್ನ ಮಗಳ ಬಹುಮುಖ ಪ್ರತಿಭೆ ಕುರಿತು ಮಾತನಾಡಿದ ಅವರು, “ಅವಳು ಒಬ್ಬ ದೇವತೆ; ಅವಳ ಹೊಸ ಶಾಲೆಗೆ ಸೇರಿ ಕೇವಲ ಎರಡು ವರ್ಷವಾಗಿತ್ತು. ಶಿಕ್ಷಕರು ಈಗಾಗಲೇ ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತಿದ್ದರು. ಅವಳನ್ನು ಹೆತ್ತಾಗ ನನಗೆ ಕೇವಲ 20 ವರ್ಷ; ನಾವು ಒಟ್ಟಿಗೆ ಬೆಳೆದೆವು. ನಾನು ಮನೆಯಲ್ಲಿ ಇಲ್ಲದಿದ್ದರೆ ಆಕೆಯ ತಮ್ಮನನ್ನು ತಾಯಿಯಂತೆ ಬೆಳೆಸುತ್ತಿದ್ದಳು” ಎಂದು ಭಾವುಕರಾದರು.
ಕಾಲ್ತುಳಿತ ದುರಂತ: ಉನ್ನತ ಅಧಿಕಾರಿಗಳ ಎತ್ತಂಗಡಿಯಿಂದ ಸಿಎಂ ಅತ್ಯಾಪ್ತರ ತಲೆದಂಡದವರೆಗಿನ ಬೆಳವಣಿಗೆ


