ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದ ಪರಿಣಾಮ 10ಕ್ಕೂ ಹೆಚ್ಚು ಜನರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಗುರುವಾರ (ಡಿ.25) ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ. ಕಂಟೇನರ್ ಲಾರಿಯೊಂದು ಡಿವೈಡರ್ ದಾಟಿ ರಸ್ತೆಯ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಸೀಬರ್ಡ್ ಸಂಸ್ಥೆಯ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಲೀಪರ್ ಕೋಚ್ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದೆ. ಅಪಘಾತಕ್ಕೆ ನಿದ್ದೆ ಮಂಪರಿನಲ್ಲಿ ಅಜಾಗರೂಕತೆಯಿಂದ ಲಾರಿ ಚಲಾಯಿಸಿದ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.
ಅಪಘಾತಕ್ಕೀಡಾದ ಬಸ್‌ನಲ್ಲಿ ಒಟ್ಟು 32 ಜನರಿದ್ದರು. ಈ ಪೈಕಿ ಇದುವರೆಗೆ 21 ಜನರು ಪತ್ತೆಯಾಗಿದ್ದಾರೆ. ಉಳಿದ 11 ಜನರ ಮಾಹಿತಿ ದೊರೆತಿಲ್ಲ. ಹಾಗಾಗಿ, ಅವರು ಸಾವನ್ನಪ್ಪಿರಬಹುದು, ಜೊತೆಗೆ ಲಾರಿ ಚಾಲಕ ಕೂಡ ಸಾವಿಗೀಡಾಗಿದ್ದಾರೆ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಮಾಹಿತಿ ನೀಡಿದ್ದಾರೆ.
ಲಾರಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಬೆಂಗಳೂರಿಂದ ಗೋಕರ್ಣಕ್ಕೆ ಹೋಗುತ್ತಿತ್ತು. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಬಸ್‌ನಲ್ಲಿ ಹೆಚ್ಚಿನ ಜನರು ಗೋಕರ್ಣ ಮೂಲದವರೇ ಇದ್ದರು. ಹಾಗಾಗಿ, ಅಲ್ಲಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಘಟನಾ ಸ್ಥಳಕ್ಕೆ ಕ್ರೇನ್‌ಗಳನ್ನು ತಂದು ಸುಟ್ಟು ಕರಕಲಾದ ಬಸ್‌ನ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ವೈದ್ಯರು ಮತ್ತು ತಜ್ಞರ ತಂಡ ಬಸ್‌ನ ಒಳಗಡೆಯಿಂದ ಮೃತದೇಹಗಳನ್ನು ಹೊರ ತೆಗೆದು, ಅವುಗಳಿಗೆ ಗುರುತು ಹಾಕುತ್ತಿದ್ದು, ಡಿಎನ್‌ಎ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.


