ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಪೌರತ್ವ ತಿದ್ದುಪಡಿ ಮಸೂದೆಯನ್ನು (2019) ಲೋಕಸಭೆಯಲ್ಲಿ ಮಂಡಿಸಿದರು.
ಮಸೂದೆ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸಿದೆ ಮತ್ತು ಆದ್ದರಿಂದ ಕೆಳಮನೆಯಲ್ಲಿ ಚರ್ಚಿಸಬಾರದು ಎಂದು ಪ್ರತಿಪಕ್ಷಗಳು ಆರೋಪಿಸಿದರೆ, ಅಮಿತ್ ಶಾ ಅವರು ಉದ್ದೇಶಿತ ಶಾಸನವು ಮುಸ್ಲಿಮರ ವಿರುದ್ಧವಲ್ಲ ಎಂದು ಸಮರ್ಥಿಸಿಕೊಂಡರು. ಬಹಳ ಚರ್ಚೆಯ ನಂತರ, ’293’ ಮತಗಳು ಚರ್ಚೆಯ ಪರ ಬಿದ್ದಿದ್ದರಿಂದ ಚರ್ಚೆಗೆ ಮಸೂದೆಯನ್ನು ಪರಿಚಯಿಸಲು ಸದನ ನಿರ್ಧರಿಸಿತು.

ಪ್ರಸ್ತಾವಿತ ಶಾಸನದ ಪ್ರಕಾರ, 2014 ರ ಡಿಸೆಂಬರ್ 31 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ಮತ್ತು ಧಾರ್ಮಿಕ ಕಿರುಕುಳವನ್ನು ಎದುರಿಸಿದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸದಸ್ಯರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ. ಅವರಿಗೆ ಭಾರತೀಯ ಪೌರತ್ವ ನೀಡಲಾಗುವುದು.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು, ಸಿಖ್ಖರು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಜೈನರ ವಿರುದ್ಧ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಈ ಮಸೂದೆಯು ಈ ಕಿರುಕುಳಕ್ಕೊಳಗಾದ ಜನರಿಗೆ ಪೌರತ್ವವನ್ನು ನೀಡುತ್ತದೆ. ಅಲ್ಲದೆ, ಈ ಮಸೂದೆ ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂಬ ಆರೋಪ ತಪ್ಪಾಗಿದೆ ಎಂದು ಗೃಹ ಮಂತ್ರಿ ಅಮಿತ್ ಶಾ ತಿಳಿಸಿದ್ದಾರೆ.
ಈ ಮೂರು (ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ) ರಾಷ್ಟ್ರಗಳ ಯಾವುದೇ ಮುಸ್ಲಿಮರು ನಮ್ಮ ಕಾನೂನಿನ ಪ್ರಕಾರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರೆ, ನಾವು ಅದನ್ನು ಪರಿಗಣಿಸುತ್ತೇವೆ. ಆದರೆ ಧಾರ್ಮಿಕ ಕಿರುಕುಳ ಎದುರಿಸದ ವ್ಯಕ್ತಿಯು ಈ ತಿದ್ದುಪಡಿಯ ಪ್ರಯೋಜನವನ್ನು ಪಡೆಯಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಮಸೂದೆಯ ವಿರುದ್ಧ ಕಳೆದ ಹಲವು ದಿನಗಳಿಂದ ಅಸ್ಸಾಂ, ಮಣಿಪುರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಕೂಡ ಹಲವೆಡೆ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿವೆ.
ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಸಿಪಿಐ, ಸಿಪಿಐ(ಎಂ), ಆಮ್ ಆದ್ಮಿ ಪಕ್ಷ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಬೀದಿಯಲ್ಲಿ ನೂರಾರು ಕಡೆ ಪ್ರತಿಭಟನೆಗಳು ದಾಖಲಾಗಿವೆ.


