Homeಮುಖಪುಟ"ಯಾವುದೇ ಕಾರಣಗಳಿದ್ದರೂ ಸಹ ಜನರು ಹಸಿವಿನಿಂದ ಸಾಯುವಂತೆ ಮಾಡಬಾರದು" : ಕೇಂದ್ರಕ್ಕೆ ಸುಪ್ರೀಂ ತರಾಟೆ

“ಯಾವುದೇ ಕಾರಣಗಳಿದ್ದರೂ ಸಹ ಜನರು ಹಸಿವಿನಿಂದ ಸಾಯುವಂತೆ ಮಾಡಬಾರದು” : ಕೇಂದ್ರಕ್ಕೆ ಸುಪ್ರೀಂ ತರಾಟೆ

- Advertisement -
- Advertisement -

ತ್ರಿಪುರದ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಬ್ರೂ ನಿರಾಶ್ರಿತರಿಗೆ ಪಡಿತರವನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಇನ್ನು 15 ದಿನಗಳಲ್ಲಿ ಇದಕ್ಕೆ ಕಾರಣ ನೀಡುವಂತೆ ಆದೇಶಿಸಿದೆ.

“ಈ ಕುರಿತು ಎರಡು ವಾರದಲ್ಲಿ ವರದಿ ನೀಡಿ. ಈ ರೀತಿ ಮಾಡುವುದು ಸರಿಯಲ್ಲ. ಯಾವುದೇ ಕಾರಣಗಳಿದ್ದರೂ ಸಹ ಜನರು ಹಸಿವಿನಿಂದ ಸಾಯುವಂತೆ ಮಾಡಬಾರದು” ಎಂದು ಮುಖ್ಯ ನ್ಯಾಯಮೂರ್ತಿಗಳಾದ ಶರತ್‌ ಅರವಿಂದ್‌ ಬೊಬ್ಡೆ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಹಲವು ಕಾರಣಗಳಿಗಾಗಿ ತಮ್ಮ ಸಂಬಂಧಿಕರನ್ನು ಕಳೆದುಕೊಂಡ 32,000 ಕ್ಕೂ ಹೆಚ್ಚು ಬ್ರೂ ನಿರಾಶ್ರಿತರು ತ್ರಿಪುರದ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರೂ ಮಿಝೋರಾಂಗೆ ತೆರಳಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದ.

ಇದಕ್ಕೆ ಪ್ರತಿಯಾಗಿ ಬ್ರೂ ನಿರಾಶ್ರಿತರು ಭಾರತ ದೇಶದಲ್ಲಿ ಎಲ್ಲಿ ಬೇಕಾದರೂ ವಾಸಿಸಲು ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ನಾವು ಒಳ್ಳೆಯ ನಾಗರಿಕರಾಗಿದ್ದು ನಾವು ಇಲ್ಲಿ ಶಾಂತಿಯಿಂದ ನೆಲೆಸಿದ್ದೇವೆ. ದೇಶದ ನಾಗರಿಕರಿಗೆ ಸಿಗಬೇಕಾದ ಎಲ್ಲಾ ಹಕ್ಕುಗಳು ನಮಗೂ ಸಹ ದಕ್ಕಬೇಕು. ನಮ್ಮ ಸಮಸ್ಯೆಯನ್ನು ಬಗೆಹರಿಸದೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಮ್ಮನ್ನು ದಬ್ಬುವುದು ಸಾವಿನ ಬಾಯಿಗೆ ದೂಡಿದಂತೆಯೇ ಹೊರತು ಮತ್ತೇನಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮಗೆ ರೇಷನ್ ನೀಡುವುದನ್ನು ನಿಲ್ಲಿಸಿದ್ದಾರೆ. ವೈದ್ಯಕೀಯ ಸೌಲಭ್ಯವೂ ಇಲ್ಲ. ಒಂದು ವಾರದಲ್ಲಿಯೇ ಸುಮಾರು 7 ಜನ ಹಸಿವಿನಿಂದ ಮಡಿದಿದ್ದಾರೆ. ನಾವು ಕೂಡ ಇಲ್ಲಿಯೇ ಸಾಯಲು ಸಿದ್ದರಿದ್ದೇವೆಯೇ ಹೊರತು ಮಿಝೋರಾಂಗೆ ತೆರಳಿ ಸಾಮಾಜಿಕ, ಧಾರ್ಮಿಕ ಕಿರುಕುಳಕ್ಕೆ ಒಳಗಾಗಲು ಸಿದ್ದರಿಲ್ಲ ಎಂದು ಬ್ರೂ ನಿರಾಶ್ರಿತರು ಪಟ್ಟು ಹಿಡಿದಿದ್ದಾರೆ.

ಬ್ರೂ ನಿರಾಶ್ರಿತರನ್ನು ವಾಪಸ್ ಕಳುಹಿಸಲು ಕೇಂದ್ರದ ಗಡುವು ಮುಗಿದ ಒಂದು ದಿನದ ನಂತರ ಡಿಸೆಂಬರ್‌ 1ರ ಭಾನುವಾರದಿಂದ ಪಡಿತರ ಸರಬರಾಜನ್ನು ನಿಲ್ಲಿಸಲಾಯಿತು. ಒಂಬತ್ತನೇ ಮತ್ತು ಅಂತಿಮ ಹಂತದ ವಾಪಸಾತಿ ಪಂತದಲ್ಲಿ 4,000 ಕ್ಕೂ ಹೆಚ್ಚು ಸ್ಥಳಾಂತರಗೊಂಡ ಕುಟುಂಬಗಳಲ್ಲಿ ಕೇವಲ 171 ಜನರನ್ನು ಮಾತ್ರ ಮಿಜೋರಾಂಗೆ ಕಳುಹಿಸಬಹುದಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮಿಜೋರಾಂಗೆ ವಾಪಸಾಗುವ ಬದಲು ತ್ರಿಪುರದಲ್ಲಿ ಪುನರ್ವಸತಿ ಕಲ್ಪಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ 32,000 ಕ್ಕೂ ಹೆಚ್ಚು ಬ್ರೂ ಸ್ಥಳಾಂತರಗೊಂಡವರಿಗೆ ಪಡಿತರ ಸರಬರಾಜನ್ನು ಮತ್ತೆ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ನಿಷೇದಾಜ್ಞೆ, ಲಾಠಿ ಚಾರ್ಜ್‌ ಮೂಲಕ ಅವರನ್ನು ಸ್ಥಳಾಂತರಿಸಲು ಸರ್ಕಾರ ಮೊದಲು ಪ್ರಯತ್ನಿಸಿತು. ಆದರೆ ಅದು ಸಫಲವಾಗಲಿಲ್ಲ. ನಂತರ ಸರ್ಕಾರ ಇಲ್ಲಿಂದ ಸ್ಥಳಾಂತರಗೊಂಡವರ ಖಾತೆಗೆ 25 ಸಾವಿರ ಹಣ ಹಾಕುವುದಾಗಿಯೂ ಭರವಸೆ ನೀಡಿತ್ತು. ಆದರೂ ಅವರು ಜಗ್ಗಲಿಲ್ಲ. ಹಾಗಾಗಿ ಸರ್ಕಾರ ಈಗ ಅವರಿಗೆ ಮೂಲಭೂತವಾಗಿ ಸಿಗಬೇಕಾದ ಆಹಾರ ಮತ್ತು ವೈದ್ಯಕೀಯ ಸೇವೆಯನ್ನು ನಿಲ್ಲಿಸಿದೆ. ಹಾಗಾಗಿಯೇ ಸುಪ್ರೀಂ ಕೋರ್ಟ್‌ ಸರ್ಕಾರವನ್ನು ಜಾಡಿಸಿದೆ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...