- Advertisement -
ಬೆಂಗಳೂರು ಮತ್ತು ತುಮಕೂರು ಜಿಲ್ಲೆ ಸೇರಿ 23 ಮಂದಿ ಪೌರಕಾರ್ಮಿಕರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಇದು ಸಮುದಾಯದ ನಡುವೆ ಕೊರೊನ ಹರಡುವ ಆತಂಕವನ್ನು ಹುಟ್ಟುಹಾಕಿದೆ. ಕೊರೊನ ವಿರುದ್ದ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸರಿಯಾಗಿ ಸುರಕ್ಷಾ ಸಲಕರಣೆಗಳನ್ನು ನೀಡಿಲ್ಲ. ಹಾಗಾಗಿ ಸೋಂಕು ಹರಡಲು ಕಾರಣವಾಗಿದೆ. ದಲಿತರೇ ಹೆಚ್ಚಾಗಿರುವ ಪೌರಕಾರ್ಮಿಕರ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ನಿರ್ಲಕ್ಷ್ಯ ವಹಿಸಿರುವುದು ಎದ್ದುಕಾಣುತ್ತದೆ ಎಂದು ದೂರಲಾಗಿದೆ.
ಪೌರಕಾರ್ಮಿಕರು ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡಬೇಕಾಗಿ ಬಂದಿದೆ ಮತ್ತು ಅವರು ಕೊರೊನ ಸೋಂಕಿತರನ್ನು ಕ್ವಾರಂಟೈನ್ ಮತ್ತು ಸೀಲ್ ಡೌನ್ ಮಾಡಿರುವ ಪ್ರದೇಶಗಳಲ್ಲಿ ಯಾವುದೇ ಸುರಕ್ಷಾ ಸಲಕರಣೆಗಳಿಲ್ಲದೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ವಾರಂಟೈನ್ ನಲ್ಲಿರುವವರು ಎಸೆಯುವ ಕಸವನ್ನು ಮುಟ್ಟಿ ಎತ್ತಿ ಹಾಕಬೇಕು. ಸ್ವಚ್ಚಗೊಳಿಸಬೇಕು. ಕಸದ ಆಟೋದವರು ಕೂಡ ಸೋಂಕು ಹರಡಿರುವವರು ನೀಡುವ ಕಸವನ್ನು ತೆಗೆದುಕೊಳ್ಳಬೇಕು. ಅದರಲ್ಲಿ ರೋಗಾಣುಗಳಿದ್ದು ಪೌರಕಾರ್ಮಿಕರಿಗೆ ಕೊರೊನ ಹರಡಲು ಕಾರಣವಾಗಿದೆ.
ಕೊರೊನಾ ವಾರಿಯರ್ ಗಳೆಂದು ಎನ್-95 ಮಾಸ್ಕ್, ವೈಯಕ್ತಿಕ ಸುರಕ್ಷ ಸಲಕರಣೆಗಳನ್ನು ರಾಜ್ಯ ಸರ್ಕಾರ ಖರೀದಿಸಿದೆ. ಆದರೆ ಇವು ಕೆಲವರಿಗೆ ಮಾತ್ರ ದೊರೆಯುತ್ತವೆಯೇ ಹೊರತು ಪೌರಕಾರ್ಮಿಕರಿಗೆ ಸಿಗುತ್ತಿಲ್ಲ. ಕೊರೊನ ಸೋಂಕಿತರು ಹೆಚ್ಚಾಗಿರುವ ಅಪಾಯಕಾರಿ ಪ್ರದೇಶದಲ್ಲಿ ಸಾಮಾನ್ಯ ಮಾಸ್ಕ್ ಧರಿಸಿ ಪೌರ ಕಾರ್ಮಿಕರು ಕೆಲಸ ಮಾಡಿ ನೇರವಾಗಿಯೇ ಮನೆಗಳಿಗೆ ಮರಳುತ್ತಾರೆ. ಸೋಂಕು ಅಂಟಿಕೊಂಡಿದ್ದರೆ ಮನೆಯವರಿಗೂ ಅದು ಹರಡುತ್ತದೆ. ಹಾಗಾಗಿ ಕೆಲಸದ ಪ್ರದೇಶಗಳಲ್ಲೇ ಸ್ನಾನ ಮಾಡಿ, ಬಟ್ಟೆಗಳನ್ನು ಬದಲಿಸಲು ಸೌಕರ್ಯ ಕಲ್ಪಿಸಿದರೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ.
ಪೌರಕಾರ್ಮಿಕರ ಸುರಕ್ಷತೆ ಗಮನಹರಿಸಬೇಕು. ಕ್ವಾರಂಟೈನ್ ಮತ್ತು ಸೀಲ್ ಡೌನ್ ಪ್ರದೇಶಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಗಳನ್ನು ಕೊಡಬೇಕು. ಕೆಲಸದ ಪ್ರದೇಶದಲ್ಲೇ ಸ್ನಾನಕ್ಕೆ ಸೌಕರ್ಯ ಮಾಡಿಕೊಡಬೇಕೆಂದು ನಾನುಗೌರಿ.ಕಾಂ ವರದಿ ಮಾಡಿತ್ತು. ಆದರೆ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಪರಿಣಾಮ ಇಂದು 23ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು ಕೊರೊನ ಸೋಂಕಿನಿಂದ ನರಳಬೇಕಾಗಿ ಬಂದಿದೆ. ಇದರಿಂದ ಅವರ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ.
ನಾನುಗೌರಿ.ಕಾಂ ಜೊತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ದೂರವಾಣಿಯಲ್ಲಿ ಮಾತನಾಡಿದರು. “ಸಂಘದಿಂದ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಕೊಡಬೇಕು. ಎನ್-95 ಮಾಸ್ಕ್ ಕೊಡಬೇಕು. ರ್ಯಾಂಡಮ್ ಆಗಿ ಪರೀಕ್ಷೆ ನಡೆಸಬೇಕು. ಕನಿಷ್ಠ 2 ವಾರಕ್ಕೊಮ್ಮೆ ಎಲ್ಲಾ ಪೌರಕಾರ್ಮಿಕರಿಗೂ ಪರೀಕ್ಷೆ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. ಆದರೆ ಇದ್ಯಾವುದನ್ನು ಸರ್ಕಾರ ಪಾಲಿಸುತ್ತಿಲ್ಲ” ಎಂದು ದೂರಿದರು.

“ದಾನಿಗಳು ನೀಡಿದ ಸಾಮಾನ್ಯ ಮಾಸ್ಕ್ ಗಳನ್ನು ಪೌರಕಾರ್ಮಿಕರಿಗೆ ವಿತರಿಸಲಾಗಿದೆ. ಗ್ಲೌಸ್ ಕೊಟ್ಟು ಕೆಲಸ ಮಾಡಿಸುತ್ತಿದ್ದಾರೆ. ಕ್ವಾರಂಟೈನ್ ಪ್ರದೇಶದಲ್ಲು ಪೌರಕಾರ್ಮಿಕರು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಕೊರೊನ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ವಚ್ಛತಾ ಕಾರ್ಮಿಕರು ಮತ್ತು ಕಸ ಎತ್ತುವಳಿ ಮಾಡುವ ಕಾರ್ಮಿಕರು ಸ್ಥಳದಲ್ಲಿ ಸ್ನಾನ ಮಾಡದೆ ನೇರ ಮನೆಗೆ ತೆರಳುವುದರಿಂದ ಕುಟುಂಬದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಸಮುದಾಯದ ನಡುವೆಯೇ ಸೋಂಕು ಹರಡಲಿದೆ. ಬಡತನದಲ್ಲಿ ಜೀವನ ನಡೆಸುವ ಪೌರಕಾರ್ಮಿಕರು ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದು ಸರಿಯಲ್ಲ. ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಕೆಲಸದ ಸ್ಥಳದಲ್ಲಿ ಸ್ನಾನಕ್ಕೆ ಅವಕಾಶ ಕಲ್ಪಿಸಬೇಕು” ಎಂದು ಅವರು ಆಗ್ರಹಿಸಿದರು.
ಹೆಸರು ಹೇಳಲು ಇಚ್ಚಿಸದ ಪೌರಕಾರ್ಮಿಕರು ತಮಗಾಗುತ್ತಿರುವ ಅನ್ಯಾಯವನ್ನು ತೋಡಿಕೊಂಡರು. “ನಾವು ಗುಣಮಟ್ಟದ ಮಾಸ್ಕ್ ಕೇಳಿದರೆ ಕೊಡುತ್ತಿಲ್ಲ. ಖರೀದಿ ಮಾಡಿದ್ದರೂ ಅವು ಪ್ರಬಲರಿಗೆ ಮಾತ್ರ ದೊರೆಯುತ್ತವೆ. ನಾವು ಸಾಮಾನ್ಯ ಮಾಸ್ಕ್ ಧರಿಸಿ ಗ್ಲೌಸ್ ಹಾಕಿಕೊಂಡು ಕ್ವಾರಂಟೈನ್ ಪ್ರದೇಶದಲ್ಲಿ ಕೆಲಸ ಮಾಡಬೇಕಾಗಿದೆ. ನಮಗೂ ಹೆಂಡತಿ, ಮಕ್ಕಳು, ಕುಟುಂಬ ಇದೆ. ನಮಗೆ ಸೋಂಕು ಹರಡಿದರೆ ಇಡೀ ಕುಟುಂಬಕ್ಕೆ ಹರಡುವ ಅಪಾಯವಿದೆ. ನಾವು ಆತಂಕದಲ್ಲೇ ಕೆಲಸ ಮಾಡುತ್ತೇವೆ. ನಮಗೆ ಯಾರೂ ನೆರವಿಗೆ ಬರುತ್ತಿಲ್ಲ” ಎಂದು ಹೇಳಿದರು.
ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆ ಎರಡರಲ್ಲೇ 23 ಮಂದಿ ಪೌರಕಾರ್ಮಿಕರಿಗೆ ಕೊರೊನ ಸೋಂಕು ಹರಡಿದ್ದರೆ ಇನ್ನು ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಇಬ್ಬರು ಮತ್ತು ಸಿರಾದಲ್ಲಿ ಇಬ್ಬರಿಗೆ ಕೊರೊನ ಸೋಂಕು ತಗುಲಿದೆ. ಕೊರೊನ ವಾರಿಯರ್ ಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಇವರನ್ನು ಕೇವಲ ಸನ್ಮಾನಿಸುವುದರಿಂದ, ಪುಷ್ಪ ಹಾಕುವುದರಿಂದ ರೋಗ ನಿಯಂತ್ರಿಸಲು ಸಾಧ್ಯವಿಲ್ಲ. ಪೌರಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವುದರಿಂದ ಕೊರೊನ ಸಮುದಾಯದಲ್ಲಿ ಹರಡುವುದನ್ನು ನಿಲ್ಲಿಸಬಹುದಾಗಿದೆ.


