ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಮಾಡಿರುವ ಭಾಷಣದ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹೊಸ ವರದಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರಿಗೆ ಪತ್ರ ಬರೆದಿರುವ ಸಿಜೆಐ ಸಂಜೀವ್ ಖನ್ನಾ ಅವರು, ಹೊಸ ವರದಿ ನೀಡುವಂತೆ ಕೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತನ್ನ ವಿವಾದಾತ್ಮಕ ಭಾಷಣ ಸಂಬಂಧ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂ ಮುಂದೆ ಹಾಜರಾದ ಎರಡು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಡಿಸೆಂಬರ್ 17ರಂದು ನ್ಯಾಯಾಧೀಶ ಯಾದವ್ ಅವರು ಸಿಜೆಐ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಮುಂದೆ ಹಾಜರಾಗಿ ವಿವರಣೆ ನೀಡಿದ್ದರು. ಈ ವೇಳೆ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆಯೇ? ಇಲ್ಲಾ ಕ್ಷಮೆ ಯಾಚನೆ ಮಾಡಿದ್ದಾರೆಯೇ? ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಕೊಲಿಜಿಯಂ ನ್ಯಾ. ಯಾದವ್ ಅವರಿಗೆ ಎಚ್ಚರಿಕೆ ನೀಡಿ ಕಳಿಸಿದೆ ಎಂದು ಕೆಲ ಮಾಧ್ಯಮ ವರದಿಗಳು ತಿಳಿಸಿವೆ.
ಇದೀಗ ಸಿಜೆಐ ಹೊಸ ವರದಿ ಕೇಳಿರುವುದು ನ್ಯಾ. ಯಾದವ್ ವಿರುದ್ದ ಆಂತರಿಕ ಕ್ರಮ ಕೈಗೊಳ್ಳುವ ಮೊದಲ ಹೆಜ್ಜೆಯಾಗಿರಬಹುದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
1995ರ ಸಿ ರವಿಚಂದ್ರನ್ ಅಯ್ಯರ್ VS ನ್ಯಾಯಮೂರ್ತಿ ಎ.ಎಂ ಭಟ್ಟಾಚಾರ್ಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಹೈಕೋರ್ಟ್ ನ್ಯಾಯಾಧೀಶರ ವಿರುದ್ದ ಆರೋಪ ಕೇಳಿ ಬಂದಾಗ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರೋಪಿತರ ವಿಚಾರಣೆ ನಡೆಸಬೇಕು. ನಂತರ ಈ ಕುರಿತು ಸಿಜೆಐ ಜೊತೆ ಸಮಾಲೋಚನೆ ಮಾಡಬೇಕು.
ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಎಂ. ಭಟ್ಟಾಚಾರ್ಜಿ ವಿರುದ್ಧ ಹಣಕಾಸಿನ ಅಕ್ರಮದ ಆರೋಪಗಳಿದ್ದವು. ಇಲ್ಲಿ ನ್ಯಾಯಾಲಯವು “ಕೆಟ್ಟ ನಡವಳಿಕೆ ಮತ್ತು ದೋಷಾರೋಪಣೆಗೆ ಅರ್ಹವಲ್ಲದ ಆರೋಪದ ನಡುವಿನ ಅಂತರ”ವನ್ನು ಪರಿಗಣಿಸಿತ್ತು.
ಆರೋಪಗಳು ಕೇಳಿ ಬಂದ ನಂತರ ನ್ಯಾಯಮೂರ್ತಿ ಭಟ್ಟಾಚಾರ್ಜಿ ರಾಜೀನಾಮೆ ನೀಡಿದ್ದರೂ, ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಕಾನೂನನ್ನು ರೂಪಿಸಿತು. ಭವಿಷ್ಯದ ಇಂತಹ ಪ್ರಕರಣಗಳಿಗೆ ಅದು ಮಾರ್ಗಸೂಚಿಯಾಯಿತು.
ಮಾರ್ಗಸೂಚಿ ಪ್ರಕಾರ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಿಂದ ಬಂದ ವರದಿಯನ್ನು ಅಧ್ಯಯನ ಮಾಡಿದ ಬಳಿಕ, ನ್ಯಾಯಾಧೀಶರ ವಿರುದ್ದದ ಆರೋಪ ರುಜುವಾತಾದರೆ ಸಿಜೆಐ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು.
ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಕಾನೂನು ಘಟಕ 2024ರ ಡಿಸೆಂಬರ್ 8ರಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಅವರು ಮುಸ್ಲಿಂ ಗುರಿಯಾಗಿಸಿ ‘ಸಂವಿಧಾನ ವಿರೋಧಿ’ ಹೇಳಿಕೆ ನೀಡಿದ್ದರು.
ಇದನ್ನೂ ಓದಿ : ಇದೆ ತಿಂಗಳು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ


