ದೆಹಲಿಯ ಮನೆಯಲ್ಲಿ ಹಣ ಪತ್ತೆಯಾದ ಬಗ್ಗೆ ಸುಪ್ರೀಂ ಕೋರ್ಟ್‌ನ ಆಂತರಿಕ ಸಮಿತಿ ನೀಡಿದ ವರದಿ ಪ್ರಶ್ನಿಸಿ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಬುಧವಾರ ಹಿಂದೆ ಸರಿದಿದ್ದಾರೆ.
ಪ್ರಸ್ತುತ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾ. ಯಶವಂತ್ ವರ್ಮಾ ಅವರು, ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಸರ್ಕಾರಿ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ ದೊಡ್ಡ ಮೊತ್ತದ ಹಣ ಪತ್ತೆಯಾಗಿತ್ತು.
ಈ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದ ಸುಪ್ರೀಂ ಕೋರ್ಟ್‌ನ ಆಂತರಿಕ ಸಮಿತಿ, ಹಣ ಪತ್ತೆಯಾಗಿರುವುದನ್ನು ದೃಢೀಕರಿಸಿ ವರದಿ ನೀಡಿತ್ತು. ಈ ವರದಿಯನ್ನು ಪ್ರಶ್ನಿಸಿ ನ್ಯಾ. ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾ.ವರ್ಮಾ ಅವರ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಅವರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಬುಧವಾರ ಸಿಜೆಐ ಮುಂದೆ ಮನವಿ ಮಾಡಿದ್ದರು.
ಈ ಪ್ರಕರಣ ಕೆಲವು ಸಾಂವಿಧಾನಿಕ ಬಿಕ್ಕಟ್ಟುಗಳಿಗೆ ಕಾರಣವಾಗಲಿದೆ. ಆದ್ದರಿಂದ ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ನಾನು ಕೂಡ ಆಂತರಿಕ ಸಮಿತಿಯ ಭಾಗವಾಗಿದ್ದರಿಂದ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ನಾವು ಇದನ್ನು ಪಟ್ಟಿ ಮಾಡುತ್ತೇವೆ” ಎಂದು ಹೇಳಿದ್ದಾರೆ.
ನ್ಯಾ. ವರ್ಮಾ ಅವರು, ಮಾಜಿ ಸಿಜೆಐ ಸಂಜೀವ್ ಖನ್ನಾ ಅವರು ಹೈಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ತನ್ನನ್ನು ವಜಾಗೊಳಿಸುವಂತೆ ಮಾಡಿದ ಶಿಫಾರಸನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂಬುವುದಾಗಿ ಘೋಷಿಸುವಂತೆ ಕೋರಿದ್ದಾರೆ.
ಆಂತರಿಕ ಸಮಿತಿ ರಚಿಸಿದ್ದನ್ನು ನ್ಯಾ, ವರ್ಮಾ ಪ್ರಶ್ನಿಸಿದ್ದು, ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಆದ್ದರಿಂದ ಆಂತರಿಕ ಸಮಿತಿ ರಚಿಸಿರುವ ಸುಪ್ರೀಂ ಕೋರ್ಟ್‌ನ ನಡೆ ಅಸಂವಿಧಾನಿಕ ಎಂದು ಅವರು ವಾದಿಸಿದ್ದಾರೆ.
ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968 ರ ಅಡಿಯಲ್ಲಿ ಒದಗಿಸಲಾದ ಸುರಕ್ಷತಾ ಕ್ರಮಗಳಡಿ ಆಂತರಿಕ ಕಾರ್ಯವಿಧಾನವು ಹೊಂದಿಲ್ಲ ಎಂದಿದ್ದಾರೆ.
ಈ ನಡುವೆ ಅತ್ತ ಸಂಸತ್ತಿನಲ್ಲಿ ನ್ಯಾ. ವರ್ಮಾ ಅವರನ್ನು ಪದಚ್ಯುತಗೊಳಿಸುವ ಸಲುವಾಗಿ ನಿರ್ಣಯ ಮಂಡಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.
ಪ್ರಕರಣದ ಹಿನ್ನೆಲೆ : ನ್ಯಾ.ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ಉಳಿದುಕೊಂಡಿದ್ದ ದೆಹಲಿಯ ಮನೆಯಲ್ಲಿ ಮಾರ್ಚ್ 14ರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಾಗ ಮನೆಯಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಈ ವಿಚಾರ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ, ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ್ದ ನ್ಯಾ. ವರ್ಮಾ, “ಇದು ನನ್ನನ್ನು ಸಿಲುಕಿಸಲು ನಡೆದಿರುವ ಪಿತೂರಿ” ಎಂದಿದ್ದರು.
ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ವರ್ಮಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಯಾದರೂ ಅವರಿಗೆ ಯಾವುದೇ ಕೆಲಸ ವಹಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ಮತ್ತೊಂದೆಡೆ ತನಿಖೆಗೆ ಸಿಜೆಐ ಆಂತರಿಕ ಸಮಿತಿ ರಚಿಸಿದ್ದರು.
ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆಯಾದ ಬಳಿಕ ನ್ಯಾಯಾಂಗದ ಪಾರದರ್ಶಕತೆಯ ಬಗ್ಗೆ ದೇಶದಲ್ಲಿ ಚರ್ಚೆಯಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಏಪ್ರಿಲ್ 1ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ, ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಮುಖ್ಯ ನ್ಯಾಯಮೂರ್ತಿ ಮುಂದೆ ಬಹಿರಂಗಪಡಿಸಲು ನಿರ್ಧರಿಸಿದ್ದರು. ಅದರಂತೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನ 21 ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
2006ರ ಮುಂಬೈ ರೈಲು ಸ್ಫೋಟ ಪ್ರಕರಣ: 12 ಜನರ ಖುಲಾಸೆ ನಂತರ ಕಾಂಗ್ರೆಸ್ ಕ್ಷಮೆಗೆ ಜಮಿಯತ್ ಒತ್ತಾಯ


