ಜನವರಿ 2019ರಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ಹಾಲಿ ಸಿಜೆಐ ಡಿ ವೈ ಚಂದ್ರಚೂಡ್ ಶಿಫಾರಸು ಮಾಡಿದ್ದಾರೆ.
ಈ ಬಗ್ಗೆ ಡಿವೈ ಚಂದ್ರಚೂಡ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಚಂದ್ರಚೂಡ್ ಬಳಿಕ ಖನ್ನಾ ಅವರು ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತಿಯಾಗಲಿದ್ದು, ಆ ಬಳಿಕ ಖನ್ನಾ ಅವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ವೃತ್ತಿ ಜೀವನದ ಪರಿಚಯ
ಮೇ 1960ರಲ್ಲಿ ಜನಿಸಿದ ಜಸ್ಟಿಸ್ ಖನ್ನಾ ಅವರು, 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ಸೇರಿಕೊಂಡರು. ದೆಹಲಿಯ ತೀಸ್ ಹಜಾರಿ ಸಂಕೀರ್ಣದಲ್ಲಿ ಜಿಲ್ಲಾ ನ್ಯಾಯಾಲಯಗಳ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಅವರು, ದೆಹಲಿ ಹೈಕೋರ್ಟ್‌ವರೆಗೂ ಕೆಲಸ ಮಾಡಿದ್ದಾರೆ.
ಖನ್ನಾ ಅವರು ಸಾಂವಿಧಾನಿಕ ಕಾನೂನು, ನೇರ ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಕಾನೂನು, ಕಂಪನಿ ಕಾನೂನು, ಭೂ ಕಾನೂನು, ಪರಿಸರ ಕಾನೂನು ಮತ್ತು ವೈದ್ಯಕೀಯ ನಿರ್ಲಕ್ಷ್ಯವನ್ನು ಒಳಗೊಂಡ ವಿವಿಧ ನ್ಯಾಯಮಂಡಳಿಗಳ ಭಾಗವಾಗಿದ್ದರು. ಹೆಚ್ಚುವರಿಯಾಗಿ, ಅವರು ದೀರ್ಘಾವಧಿಯವರೆಗೆ ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲರ ಹುದ್ದೆಯನ್ನು ಹೊಂದಿದ್ದರು.
2004 ರಲ್ಲಿ, ನ್ಯಾಯಮೂರ್ತಿ ಖನ್ನಾ ಅವರನ್ನು ದೆಹಲಿಯ ಸ್ಥಾಯಿ ವಕೀಲರಾಗಿ (ಸಿವಿಲ್) ನೇಮಿಸಲಾಯಿತು. ಅಲ್ಲಿ ಅವರ ಅಧಿಕಾರಾವಧಿಯಲ್ಲಿ, ಅವರು ದೆಹಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ಅಮಿಕಸ್ ಕ್ಯೂರಿಯಾಗಿ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆ ನಡೆಸಿದ್ದಾರೆ.
2005 ರಲ್ಲಿ, ಖನ್ನಾ ಅವರು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು 2006 ರಲ್ಲಿ ಖಾಯಂ ನ್ಯಾಯಾಧೀಶರಾದರು. ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಖನ್ನಾ ಅವರು ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳ ಅಧ್ಯಕ್ಷ/ಪ್ರಭಾರ ನ್ಯಾಯಾಧೀಶರೂ ಆಗಿದ್ದರು.
ಜನವರಿ 18,2019 ರಂದು, ನ್ಯಾಯಮೂರ್ತಿ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲಾಯಿತು. ಅಲ್ಲಿ ಅವರು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಅಧಿಕಾರಾವಧಿಯಲ್ಲಿ, ಅವರು ಜೂನ್ 2023 ರಿಂದ ಡಿಸೆಂಬರ್ 2023 ರವರೆಗೆ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ್ದರು.
ಪ್ರಸ್ತುತ, ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ ಮತ್ತು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಸಲಹೆಗಾರರ ಸದಸ್ಯರಾಗಿದ್ದಾರೆ.
ನ್ಯಾಯಮೂರ್ತಿ ಖನ್ನಾ ಅವರು ಮೇ 2025ರಲ್ಲಿ ನಿವೃತ್ತರಾಗಲಿದ್ದಾರೆ. ಪ್ರಸ್ತುತ ಸಿಜೆಐ ಆಗಿರುವ ಡಿವೈ ಚಂದ್ರಚೂಡ್ ಅವರ ನಿವೃತ್ತಿ ಬಳಿಕ ಮುಂದಿನ ತಿಂಗಳು (ನವೆಂಬರ್) ಸಿಜೆಐ ಹುದ್ದೆಗೇರಲಿರುವ ಅವರು, ಆರು ತಿಂಗಳ ಕಾಲ ಆ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಇದನ್ನೂ ಓದಿ : ‘ಕಣ್ಣು ತೆರೆದ ನ್ಯಾಯ..’: ಲೇಡಿ ಜಸ್ಟಿಸ್ ನೂತನ ಪ್ರತಿಮೆ ಅನಾವರಣಗೊಳಿಸಿದ ಸುಪ್ರೀಂ ಕೋರ್ಟ್, ಕತ್ತಿ ಬದಲಿಗೆ ಸಂವಿಧಾನ


