ಸುಪ್ರೀಂ ಕೋರ್ಟ್‌ನಿಂದ ನಿವೃತ್ತಿ ಹೊಂದಿದ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರಿಗೆ ಸಾಂಪ್ರದಾಯಿಕ ವಿದಾಯ ಸಮಾರಂಭವನ್ನು ಆಯೋಜಿಸದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅನ್ನು ಶುಕ್ರವಾರ (ಮೇ.16) ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಬಹಿರಂಗವಾಗಿ ಟೀಕಿಸಿದ್ದಾರೆ. “ಈ ನಿರ್ಧಾರವು ವಿಷಾದನೀಯ ಮತ್ತು ಸಂಪ್ರದಾಯವನ್ನು ಕೈ ಬಿಟ್ಟಂತೆ” ಎಂದು ಹೇಳಿದ್ದಾರೆ.
“ಬಾರ್ ಅಸೋಸಿಯೇಷನ್‌ನ ಈ ನಡೆಯನ್ನು ನಾನು ಬಹಿರಂಗವಾಗಿ ಖಂಡಿಸಬೇಕು, ಏಕೆಂದರೆ ನಾನು ಸ್ಪಷ್ಟವಾಗಿ ಮಾತನಾಡುವುದರಲ್ಲಿ ನಂಬಿಕೆ ಇಡುತ್ತೇನೆ… ಅಸೋಸಿಯೇಷನ್ ಇಂತಹ ನಿಲುವನ್ನು ತೆಗೆದುಕೊಳ್ಳಬಾರದಿತ್ತು” ಎಂದು ತ್ರಿವೇದಿ ಅವರ ಕೊನೆಯ ಕೆಲಸದ ದಿನದಂದು ಅವರನ್ನು ಗೌರವಿಸಲು ನಡೆದ ನ್ಯಾಯಮೂರ್ತಿಗಳಾದ ತ್ರಿವೇದಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ವಿಧ್ಯುಕ್ತ ಪೀಠದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಬಾರ್ ಅಸೋಸಿಯೇಷನ್ ನಿರ್ಧಾರದ ಹೊರತಾಗಿಯೂ ಅದರ ಅಧ್ಯಕ್ಷ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಉಪಾಧ್ಯಕ್ಷೆ ರಚನಾ ಶ್ರೀವಾಸ್ತವ ಅವರು ವಿಚಾರಣೆಗೆ ಹಾಜರಾಗಿದಕ್ಕಾಗಿ ಸಿಜೆಐ ಗವಾಯಿ ಶ್ಲಾಘಿಸಿದ್ದಾರೆ. “ಕಪಿಲ್ ಸಿಬಲ್ ಮತ್ತು ರಚನಾ ಶ್ರೀವಾಸ್ತವ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಅವರ ಸಂಘದ ನಿರ್ಣಯದ ಹೊರತಾಗಿಯೂ, ಅವರು ಇಲ್ಲಿದ್ದಾರೆ. ಅವರ ಉಪಸ್ಥಿತಿಯನ್ನು ನಾನು ಬಹಿರಂಗವಾಗಿ ಪ್ರಶಂಸಿಸುತ್ತೇನೆ” ಎಂದು ಸಿಜೆಐ ಹೇಳಿದ್ದಾರೆ.
ಮುಂದುವರೆದು, “ಕೋರ್ಟ್ ಹಾಲ್ ತುಂಬುವ ರೀತಿಯಲ್ಲಿ ಎಲ್ಲರೂ ನೆರೆದಿರುವುದನ್ನು ನೋಡಿದರೆ ಬೇಲಾ ತ್ರಿವೇದಿ ಅವರು ತುಂಬಾ ಉತ್ತಮ ನ್ಯಾಯಮೂರ್ತಿಗಳು ಎನ್ನುವುದು ವಿಧಿತವಾಗುತ್ತದೆ. ವಿಭಿನ್ನ ರೀತಿಯ ನ್ಯಾಯಮೂರ್ತಿಗಳಿರುತ್ತಾರೆ. ಆದರೆ, ಆ ಆಂಶವು ಇಂದು ಸಂಜೆ 4:30ಕ್ಕೆ ಮಾಡಬೇಕಾದ ಕೆಲಸವನ್ನು (ವಿದಾಯ ಸಮಾರಂಭ) ಮಾಡದೆ ಇರಲು ಒಂದು ಕಾರಣವಾಗಬಾರದು” ಎಂದು ಸಿಜೆಐ ಗವಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ಮಸೀಹ್ ಅವರು ಕೂಡ ಸಿಜೆಐ ಹೇಳಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾಂಸ್ಥಿಕ ಸಂಪ್ರದಾಯಗಳನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ. “ಮುಖ್ಯ ನ್ಯಾಯಮೂರ್ತಿಗಳು ಈಗಾಗಲೇ ಹೇಳಿದಂತೆ, ಈ ವಿಚಾರದಲ್ಲಿ ನನಗೂ ವಿಷಾದವಿದೆ. ನಾವು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಗೌರವಿಸಬೇಕು. ಒಳ್ಳೆಯ ಸಂಪ್ರದಾಯಗಳು ಯಾವಾಗಲೂ ಮುಂದುವರಿಯಬೇಕು” ಎಂದಿದ್ದಾರೆ.
ತಮ್ಮ ವಿದಾಯ ಹೇಳಿಕೆಯಲ್ಲಿ ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ತ್ರಿವೇದಿ ಅವರ ಜಿಲ್ಲಾ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್‌ವರೆಗಿನ ನ್ಯಾಯಾಂಗದ ಪ್ರಯಾಣವನ್ನು ಶ್ಲಾಘಿಸಿದ್ದು, “ಅವರು ಯಾವಾಗಲೂ ನ್ಯಾಯಸಮ್ಮತತೆ, ದೃಢತೆ, ಜಾಗರೂಕತೆ, ಕಠಿಣ ಪರಿಶ್ರಮ, ಭಕ್ತಿ, ಸಮರ್ಪಣೆಗೆ ಹೆಸರು ವಾಸಿಯಾದವರು. ನ್ಯಾಯಾಂಗಕ್ಕೆ ಅಮೂಲ್ಯವಾದ ಆಸ್ತಿ” ಎಂದಿದ್ದಾರೆ.
ತುಂಬಿದ ಕೋರ್ಟ್ ಹಾಲ್‌ನಲ್ಲಿ ನೆರೆದಿದ್ದ ಹಿರಿ, ಕಿರಿಯ ನ್ಯಾಯವಾದಿಗಳು ತಮ್ಮ ಬಗ್ಗೆ ಸೂಚಿಸಿದ ಮೆಚ್ಚುಗೆಯಿಂದ ಭಾವುಕರಾದ ನ್ಯಾ. ತ್ರಿವೇದಿಯವರು ವಿಧ್ಯುಕ್ತ ಪೀಠದ ಕೊನೆಯಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ವಿದಾಯದ ಮಾತುಗಳನ್ನು ಆಡಿದ್ದಾರೆ.
“ನನ್ನ ಮೂವತ್ತು ವರ್ಷಗಳ ಕರ್ತವ್ಯದಲ್ಲಿ ನಾನು ಯಾವಾಗಲೂ ನನ್ನ ತೀರ್ಪುಗಳ ಮೂಲಕವೇ ಮಾತನಾಡಿದ್ದೇನೆ. ಇದು ನನ್ನ ಸೇವೆಯ ಕೊನೆಯ ದಿನವಾಗಿದೆ. ನಾನು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ… ನಾನು ಯಾವಾಗಲೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇನೆ. ನಾನು ಕಠಿಣವಾಗಿ ಕಾರ್ಯನಿರ್ವಹಿಸಿದ್ದೇನೆ, ಆದರೆ ಇದರ ಹಿಂದಿನ ಆತ್ಯಂತಿಕ ಉದ್ದೇಶ ಸಂಸ್ಥೆಯ ಘನತೆಯಾಗಿತ್ತೇ ಹೊರತು ಮತ್ತೇನೂ ಅಲ್ಲ… ನಾನು ಈ ಸಂಸ್ಥೆಯ ಭಾಗವಾಗಿರುವುದಕ್ಕೆ, ಈ ಪಯಣದ ಭಾಗವಾಗಿರುವುದಕ್ಕೆ ಕೃತಜ್ಞಳಾಗಿದ್ದೇನೆ,” ಎಂದಿದ್ದಾರೆ.


