ಕೊನಕ್ರಿ, ಗಿನಿಯಾ: ಪಶ್ಚಿಮ ಆಫ್ರಿಕಾದ ಗಿನಿಯಾದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ನಡುವೆ ಗುಂಪು ಘರ್ಷಣೆ ನಡೆದ ಪರಿಣಾಮ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಭಾನುವಾರ ವರದಿಯಾಗಿದೆ.
ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್’ಜೆರೆಕೋರ್‌ನಲ್ಲಿ ನಡೆದ ಫುಟ್‌ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವಿನ ಘರ್ಷಣೆಯಲ್ಲಿ ಡಜನ್ ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಅನಾಮಧೇಯ ವೈದ್ಯರೊಬ್ಬರು ಮಾಧ್ಯಮವೊಂದಕ್ಕೆ ಮಾತನಾಡಿ, ಆಸ್ಪತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರದಲ್ಲಿ ಶವಗಳ ಸಾಲುಗಳಿವೆ. ಇತರ ದೇಹಗಳು ಹಜಾರದಲ್ಲಿ ನೆಲದ ಮೇಲೆ ಬಿದ್ದಿವೆ, ಶವಾಗಾರ ತುಂಬಿದೆ. ಸುಮಾರು 100ಕ್ಕೂ ಮಂದಿ ಸತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೆಲ್ಲವೂ ರೆಫರಿಯವರ ವಿವಾದಾತ್ಮಕ ನಿರ್ಧಾರದಿಂದ ಪ್ರಾರಂಭವಾಯಿತು. ನಂತರ ಅಭಿಮಾನಿಗಳು ಕ್ರೀಡಾಂಗಣವನ್ನು ಆಕ್ರಮಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೋಗಳನ್ನು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಪಂದ್ಯದ ಹೊರಗೆ ಬೀದಿಯಲ್ಲಿ ಅವ್ಯವಸ್ಥೆಯ ದೃಶ್ಯಗಳು ಮತ್ತು ಹಲವಾರು ಮೃತ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣುತ್ತಿವೆ.
ಉದ್ರಿಕ್ತ ಫುಟ್ಬಾಲ್ ಪ್ರೇಕ್ಷಕರು ಎನ್ ಜೆರೆಕೋರ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
2021ರ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿ ಇದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಇಂತಹ ಪಂದ್ಯಾವಳಿಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಡೌಂಬೌಯಾ ಮುಂದಿನ ವರ್ಷ ನಡೆಯಲಿರುವ ನಿರೀಕ್ಷಿತ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಮೈತ್ರಿಗಳನ್ನು ರೂಪುಗೊಳ್ಳಿಸುವುದಕ್ಕೆ ಈ ಪಂದ್ಯಾವಳಿಯನ್ನು ಅಯೋಜಿಸಲಾಗಿತ್ತು ಎನ್ನಲಾಗಿದೆ.
2020 ರ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಆಲ್ಫಾ ಕಾಂಡೆ ಅವರನ್ನು ಪದಚ್ಯುತಗೊಳಿಸುವ ಮೂಲಕ ಡೌಂಬೌಯಾ ಗಿನಿಯಾದ ಅಧಿಕಾರವನ್ನು ವಶಪಡಿಸಿಕೊಂಡರು. ಅಂತರರಾಷ್ಟ್ರೀಯ ಒತ್ತಡದ ಅಡಿಯಲ್ಲಿ, ಅವರು 2024 ರ ಅಂತ್ಯದ ವೇಳೆಗೆ ಅಧಿಕಾರವನ್ನು ನಾಗರಿಕ ಸರ್ಕಾರಕ್ಕೆ ಮರಳಿ ಹಸ್ತಾಂತರಿಸುವುದಾಗಿ ವಾಗ್ದಾನ ಮಾಡಿದರು. ಆದರೆ ನಂತರ ಅವರು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡೌಂಬೌಯಾ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಇಂದಿಗೂ ದಮನ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಅನೇಕ ವಿರೋಧ ಪಕ್ಷದ ನಾಯಕರನ್ನು ಬಂಧಿಸಿ, ಅವರನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಲಾಗಿದೆ ಅಥವಾ ಗಡಿಪಾರು ಮಾಡಲು ಒತ್ತಾಯಿಸಲಾಗಿದೆ.
ಡೌಂಬೌಯಾ ಅವರ ಬೆಂಬಲಿಗರು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಉಮೇದುವಾರಿಕೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ಈ ಚುನಾವಣೆಯನ್ನು 2025ರಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳ ಹೊರತಾಗಿಯೂ, ಗಿನಿಯಾ ಬಡ ರಾಷ್ಟ್ರವಾಗಿ ಉಳಿದಿದೆ. ಇದು ದಶಕಗಳಿಂದ ನಿರಂಕುಶ ಸರ್ಕಾರಗಳಿಂದ ಆಳಲ್ಪಟ್ಟಿದೆ.
ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್‌ನಲ್ಲಿ ಮಿಲಿಟರಿ ಸಹಾಯದಿಂದ 2020 ರಿಂದ ಪಶ್ಚಿಮ ಆಫ್ರಿಕಾದ ಅಧಿಕಾರವನ್ನು ವಶಪಡಿಸಿಕೊಂಡ ಹಲವಾರು ಅಧಿಕಾರಿಗಳಲ್ಲಿ ಡೌಂಬೌಯಾ ಒಬ್ಬರಾಗಿದ್ದಾರೆ.
ಗಿನಿಯಾದ ಆಗ್ನೇಯದ ಎನ್’ಜೆರೆಕೋರ್ ನಲ್ಲಿ ನಡೆದ ಈ ಘರ್ಷಣೆಯ ಪ್ರದೇಶವು ಸುಮಾರು 200,000 ಜನಸಂಖ್ಯೆಯನ್ನು ಹೊಂದಿದೆ.
ಇದನ್ನೂ ಓದಿ…ತಾರಕಕ್ಕೇರಿದ ಯತ್ನಾಳ್-ವಿಜಯೇಂದ್ರ ವಾಗ್ಯುದ್ಧ : ದೆಹಲಿ ತಲುಪಿದ ಬಿಜೆಪಿ ಬಣ ಕದನ


