ಉತ್ತರ ಪ್ರದೇಶದ ಮಥುರಾದಲ್ಲಿ ಶನಿವಾರ ಸಂಜೆ ಇಬ್ಬರು ದಲಿತ ಯುವಕರ ಮದುವೆ ಮೆರವಣಿಗೆ ವೇಳೆ ಬಿ.ಆರ್ ಅಂಬೇಡ್ಕರ್ ಮತ್ತು ಜಾತವ್ ಸಮುದಾಯವನ್ನು ವೈಭವೀಕರಿಸುವ ಹಾಡುಗಳನ್ನು ಒಳಗೊಂಡ ಡಿಜೆ ಸಂಗೀತ ವಿಚಾರದಲ್ಲಿ ಕಲ್ಲು ತೂರಾಟ ಮತ್ತು ದೈಹಿಕ ಹಲ್ಲೆ ಸೇರಿದಂತೆ ಹಿಂಸಾತ್ಮಕ ಘರ್ಷಣೆ ನಡೆದಿದೆ.
ಜಮುನಾಪರ್ ಪೊಲೀಸ್ ಠಾಣೆ ವ್ಯಾಪ್ತಿಯ ದಹ್ರುವಾ ಗ್ರಾಮದಲ್ಲಿ ಸಂಜೆ 6:30 ರಿಂದ 7:30ರ ನಡುವೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮದುವೆ ಮೆರವಣಿಗೆಯ ಡಿಜೆಯಲ್ಲಿ ಜಾತವ್ ಸಮುದಾಯವನ್ನು ಹೊಗಳುವ ಹಾಡುಗಳನ್ನು ಹಾಕಲಾಗಿತ್ತು. ಇದಕ್ಕೆ ಠಾಕೂರ್ ಸಮುದಾಯದ ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿ ಕಲ್ಲು ತೂರಾಟ ನಡೆಸಿದರು ಮತ್ತು ನಿಂದಿಸಲು ಪ್ರಾರಂಭಿಸಿದರು” ಎಂದು ವರರಾದ ರಾಮ್ ಕುಮಾರ್ (22) ಮತ್ತು ಸೌರಭ್ ಕುಮಾರ್ (23) ಅವರ ಸೋದರಸಂಬಂಧಿ ದೇವೇಂದ್ರ ಕುಮಾರ್ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ವಾಗ್ವಾದ ತಾರಕ್ಕೇರಿ ದೈಹಿಕ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ವರದಿಗಳು ವಿವರಿಸಿವೆ.
ಘಟನೆ ಸಂಬಂಧ ಬಿಎನ್ಎಸ್ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 352 (ದಾಳಿ ಅಥವಾ ಕ್ರಿಮಿನಲ್ ಬಲಪ್ರಯೋಗ), 351(3) (ಕ್ರಿಮಿನಲ್ ಬೆದರಿಕೆ), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಮತ್ತು ಎಸ್, ಎಸ್ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಜಮುನಾಪರ್ ಎಸ್‌ಎಚ್‌ಒ ಅಜಯ್ ಕಿಶೋರ್ ತಿಳಿಸಿದ್ದಾರೆ.
“ನಾನು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇನೆ. ಪ್ರಾಥಮಿಕವಾಗಿ, ಮದುವೆ ಮೆರವಣಿಗೆಯಲ್ಲಿದ್ದ ಜನರ ವಿಷಯಕ್ಕೆ ಅಲ್ಲ, ಡಿಜೆ ಹಾಡುಗಳ ವಿಚಾರಕ್ಕೆ ಗಲಾಟೆ ಆಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇಬ್ಬರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ” ಎಂದು ಮಥುರಾ ಸದರ್ ಪ್ರದೇಶದ ಡಿಎಸ್ಪಿ ಸಂದೀಪ್ ಸಿಂಗ್ ಹೇಳಿದ್ದಾರೆ.
ದಲಿತ ಕುಟುಂಬದ ಮೇಲೆ ದೌರ್ಜನ್ಯ: ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಆರೋಪ


