ಬಲಪಂಥೀಯ ಸಂಘಟನೆಯಾದ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಂಗಳವಾರ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ “ಸರ್ಜಿಕಲ್ ಸ್ಟ್ರೈಕ್” ಮಾಡುವುದಾಗಿ ಬೆದರಿಕೆ ಹಾಕಿದೆ. ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರ ವಾಹನ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ವಿಶ್ವವಿದ್ಯಾಲಯದಲ್ಲಿ ಅರಾಜಕತೆ ಇದೆ ಎಂದು ಆರೋಪಿಸಿರುವ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಅನಿರುದ್ಧ ಸರ್ಕಾರ್, “ಭವಿಷ್ಯದಲ್ಲಿ, ಎಬಿವಿಪಿ ಜಾದವ್‌ಪುರದೊಳಗೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿದ್ದು, ಅದು ತುಂಬಾ ಭಯಾನಕವಾಗಿರುತ್ತದೆ. ಯಾವುದೇ ರೀತಿಯಲ್ಲಿ ಮತ್ತು ಯಾವುದೇ ಭಾಷೆಯಲ್ಲಿ ಎಬಿವಿಪಿಯು ಎಸ್‌ಎಫ್‌ಐಗೆ ಅರ್ಥವಾಗುವ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತದೆ; ಅವರು ಇದಕ್ಕೆ ಸಿದ್ಧರಾಗಲಿ” ಎಂದು ಎಂಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮೊದಲು, ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ‘ಸರ್ಜಿಕಲ್ ಸ್ಟ್ರೈಕ್’ ಬಗ್ಗೆ ಮಾಜಿ ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಮಾತನಾಡಿದ್ದರು.
ಮಾರ್ಚ್ 1 ರಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಎಸ್‌ಎಫ್‌ಐ ಮತ್ತು ಎಐಎಸ್‌ಎ ರಾಜ್ಯ ಸಚಿವ ಬ್ರಾತ್ಯ ಬಸು ಅವರಿಗೆ ‘ಘೇರಾವ್’ ಹಾಕಿ, ಅವರ ವಾಹನದ ಗಾಜು ಹಾನಿಗೊಳಿಸಿದಾಗಿನಿಂದ ಬಿಕ್ಕಟ್ಟು ಪ್ರಾರಂಭವಾಯಿತು. ರಾಜ್ಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣಾ ದಿನಾಂಕಗಳನ್ನು ಆದಷ್ಟು ಬೇಗ ಘೋಷಿಸುವಂತೆ ಎಡಪಂಥೀಯ ಸಂಘಟನೆಗಳು ಒತ್ತಾಯಿಸಿದ್ದವು.
ಸಚಿವ ಬಸು ಕ್ಯಾಂಪಸ್‌ಗೆ ಆಗಮಿಸುವ ಮೊದಲು ಪ್ರತಿಭಟನೆ ಪ್ರಾರಂಭವಾಯಿತು, ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳ ಕಾಲೇಜು ಮತ್ತು ವಿಶ್ವವಿದ್ಯಾಲಯ ಅಧಿಕಾರಿಗಳು ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದಾಗ, ಉದ್ವಿಗ್ನತೆ ದೈಹಿಕ ವಾಗ್ವಾದಕ್ಕೆ ಕಾರಣವಾಯಿತು.
ವಿದ್ಯಾರ್ಥಿಗಳು ಸಚಿವರ ವಾಹನವನ್ನು ತಡೆದು, ಅದರ ಟೈರ್‌ಗಳನ್ನು ಗಾಳಿಯಲ್ಲಿ ಇಳಿಸಿ ಅವರು ಹೊರಬರದಂತೆ ತಡೆಯುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಗೊಂದಲದ ನಡುವೆ ಸಚಿವರು ಸುಮಾರು ಎರಡು ಗಂಟೆಗಳ ಕಾಲ ಬಂಧನದಲ್ಲಿದ್ದರು, ವಿವಿ ಆವರಣದಿಂದ ಅವರು ಹೊರಬರಲು ಸಾಧ್ಯವಾಗಲಿಲ್ಲ.
ಸೋಮವಾರ, ವಿಶ್ವವಿದ್ಯಾಲಯದ ಗೇಟ್‌ನಲ್ಲಿ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಸಂಭವಿಸಿತು. ಎಬಿವಿಪಿ ಸದಸ್ಯರು ವಿಶ್ವವಿದ್ಯಾಲಯದ ನಾಲ್ಕನೇ ಗೇಟ್‌ಗೆ ಮೆರವಣಿಗೆ ನಡೆಸಿದರು. ಅನೇಕ ಜನರು ವಿಶ್ವವಿದ್ಯಾಲಯದ ಗೇಟ್ ಅನ್ನು ತಳ್ಳುವ ಮೂಲಕ ಪ್ರವೇಶಿಸಿದರು ಎಂದು ಆರೋಪಿಸಲಾಗಿದೆ.
ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಗೇಟ್ ಮುಚ್ಚಲು ಪ್ರಯತ್ನಿಸಿದರು, ಆದರೆ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಗಲಾಟೆಯಲ್ಲಿ ತೊಡಗಿದರು.
ಈ ಗೊಂದಲದ ಸಮಯದಲ್ಲಿ, ಎಸ್‌ಎಫ್‌ಐ ಮತ್ತು ಎಐಡಿಎಸ್‌ಒ ಧ್ವಜಗಳನ್ನು ಕೆಡವಲಾಯಿತು. ಎಬಿವಿಪಿ ಕಾರ್ಯಕರ್ತರು ತಮ್ಮ ಧ್ವಜಗಳನ್ನು ಆ ಸ್ಥಳದಲ್ಲಿ ಹಾಕಿದರು. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಪೋಸ್ಟರ್‌ಗಳನ್ನು ಸಹ ಹರಿದು ಹಾಕಲಾಯಿತು.
ಜಾದವ್‌ಪುರ ವಿಶ್ವವಿದ್ಯಾಲಯದ ಸಿಕ್ಖಾ ಬೊಂಡು ಶಿಕ್ಷಕರ ಸಂಘದ ಕಚೇರಿಯಲ್ಲಿ ನಡೆದ ದರೋಡೆ, ಬೆಂಕಿ ಹಚ್ಚುವಿಕೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದರು. ನಂತರ ಮಾರ್ಚ್ 12 ರವರೆಗೆ ಅವರನ್ನು ಪೊಲೀಸ್ ವಶಕ್ಕೆ ನೀಡಲಾಯಿತು.
ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿ ಸಂಘದ ಚುನಾವಣಾ ದಿನಾಂಕಗಳನ್ನು ತಕ್ಷಣ ಘೋಷಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳ ನಂತರ ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಸಂಸದೀಯ ಕ್ಷೇತ್ರ ಪುನರ್‌ವಿಂಗಡಣೆ ಕಳವಳ : ಸರ್ವಪಕ್ಷ ಸಭೆ ನಡೆಸಿದ ತಮಿಳುನಾಡು ಸಿಎಂ


