ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಆತ ಬರೆದಿರುವ ಡೆತ್ ನೋಟ್‌ನಲ್ಲಿ ಶಿಕ್ಷಕರಿಂದ ದೌರ್ಜನ್ಯದ ಆರೋಪ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ.
ವಿದ್ಯಾರ್ಥಿಯ ತಂದೆ ನೀಡಿರುವ ದೂರಿನಲ್ಲಿ, ತನ್ನ ಮಗ ಹಲವು ಶಿಕ್ಷಕರ ನಿರಂತರ ಕಿರುಕುಳದಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಮೃತ ಬಾಲಕ ಶಿಕ್ಷಕರ ದೌರ್ಜನ್ಯದ ಬಗ್ಗೆ ತನ್ನ ಪೋಷಕರಿಗೆ ಹಲವು ಬಾರಿ ಹೇಳಿಕೊಂಡಿದ್ದ. ಪೋಷಕರು ಕೂಡ
ಶಾಲಾ ಸಿಬ್ಬಂದಿ ಮತ್ತು ಪ್ರಾಂಶುಪಾಲರಿಗೆ ಮೌಖಿಕ ದೂರುಗಳನ್ನು ನೀಡಿದ್ದರು. ಆದರೂ, ಶಿಕ್ಷಕರ ಕಿರುಕುಳ ಮುಂದುವರೆದಿತ್ತು ಎಂದು ಹೇಳಲಾಗ್ತಿದೆ.
ಬಾಲಕ ಸಾವನ್ನಪ್ಪಿದ ಬಳಿಕ ಆತನ ಶಾಲಾ ಬ್ಯಾಗ್‌ನಲ್ಲಿ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಆತ ತನ್ನ ಕುಟುಂಬಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾನೆ. “ನಾನು ಹೀಗೆ ಮಾಡಿದ್ದಕ್ಕೆ ನನಗೆ ತುಂಬಾ ವಿಷಾದವಿದೆ, ಆದರೆ ಶಾಲಾ ಸಿಬ್ಬಂದಿ ನಾನು ಹೀಗೆ ಮಾಡಿಕೊಳ್ಳುವಂತೆ ಮಾಡಿದರು. ನನಗೆ ಆಗಿರುವುದು ಬೇರೆ ಯಾವ ವಿದ್ಯಾರ್ಥಿಗೂ ಆಗಬಾರದು. ಆ ರೀತಿ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳಬೇಕು. ಇದೇ ನನ್ನ ಕೊನೆಯಾಸೆ. ನನ್ನ ಅಂಗಾಂಗಗಳನ್ನು ದಾನ ಮಾಡಿ. ನನ್ನಿಂದ ಉಂಟಾದ ನೋವಿಗೆ ಪೋಷಕರು ಮತ್ತು ಸಹೋದರನಲ್ಲಿ ಕ್ಷಮೆಯಾಚಿಸುತ್ತೇನೆ” ಎಂದು ಬರೆದಿದ್ದಾನೆ ಎಂದು ವರದಿಗಳು ವಿವರಿಸಿವೆ.
ಸಣ್ಣಪುಟ್ಟ ವಿಷಯಗಳಿಗೂ ಶಿಕ್ಷಕರು ತನ್ನನ್ನು ಬೈಯುತ್ತಿದ್ದರು, ಅವಮಾನಿಸುತ್ತಿದ್ದರು ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಗ ಆಗಾಗ ಹೇಳಿಕೊಳ್ಳುತ್ತಿದ್ದ ಎಂದು ಮೃತನ ಪೋಷಕರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ನವೆಂಬರ್ 18ರಂದು, ತಂದೆ ಹೊರಗೆ ಹೋದಾಗ ಬಾಲಕ ಶಾಲೆಗೆ ಹೊರಟು ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ಹಳಿಗೆ ಹಾರಿದ್ದಾನೆ ಎಂದು ವರದಿ ಹೇಳಿದೆ.
ಘಟನೆಯ ನಂತರ, ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿಯು ಈ ಸಾವಿನ ಹೊಣೆ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೇರೆ ಯಾವುದೇ ಮಗುವೂ ಈ ರೀತಿಯ ಕಿರುಕುಳ ಎದುರಿಸದಂತೆ ನೋಡಿಕೊಳ್ಳಲು, ತಪ್ಪಿತಸ್ಥರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಾಲಕನ ಕುಟುಂಬವು ಅಧಿಕಾರಿಗಳನ್ನು ಒತ್ತಾಯಿಸಿದೆ.
ವಿದ್ಯಾರ್ಥಿಯ ಸಾವಿಗೆ ಕಾರಣವಾದ ಕಿರುಕುಳ ಮತ್ತು ಸಂದರ್ಭಗಳ ಮೇಲೆ ಕೇಂದ್ರೀಕರಿಸಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


