ಜಮ್ಮು ಕಾಶ್ಮೀರದ ಕಥುವಾ ಜಿಲ್ಲಾ ಕೇಂದ್ರದಿಂದ ಬಹಳ ದೂರದಲ್ಲಿರುವ ಗ್ರಾಮವಾದ ಜೋಡ್ ಘಾಟಿಯಲ್ಲಿ ಭಾನುವಾರ (ಆ.17) ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದುರಂತದಿಂದ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ರೈತರ ಜಮೀನು ಸೇರಿದಂತೆ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮನೆಗಳು ಸೇರಿದಂತೆ ಕೆಲ ಕಟ್ಟಡಗಳು ನೀರಿನೊಂದಿಗೆ ಕೊಚ್ಚಿ ಬಂದ ಮಣ್ಣಿನಿಂದ ಸಂಪೂರ್ಣ ಆವೃತ್ತವಾಗಿವೆ. ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಗಳು ಹೇಳಿವೆ.
ಸ್ಥಳೀಯ ಸ್ವಯಂ ಸೇವಕರ ಸಹಾಯ ಪಡೆದು ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸ್ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಜಂಟಿ ತಂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
ದುರಂತ ಸ್ಥಳದಿಂದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಕಥುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಗಾರ್ಡ್ ಮತ್ತು ಚಾಂಗ್ಡಾ ಗ್ರಾಮಗಳಲ್ಲಿ ಹಾಗೂ ಲಖನ್‌ಪುರದ ದಿಲ್ವಾನ್-ಹುಟ್ಲಿ ಪ್ರದೇಶದಲ್ಲಿ ಕೂಡ ಭೂಕುಸಿತ ಸಂಭವಿಸಿದ ಬಗ್ಗೆ ವರದಿಯಾಗಿವೆ. ಆದರೆ, ಈ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ವರದಿಗಳು ಹೇಳಿವೆ.
ಕಥುವಾ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಉಜ್ ನದಿ ಪ್ರಸ್ತುತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲಾಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನರು ಜಾಗರೂಕರಾಗಿರುವಂತೆ ಮತ್ತು ಜಲಮೂಲಗಳ ಬಳಿ ಹೋಗದಂತೆ ಮುನ್ನೆಚ್ಚರಿಕೆ ನೀಡಿದೆ.
ಆಗಸ್ಟ್ 14ರಂದು ಜಮ್ಮು ಕಾಶ್ಮೀರದ ಕಿಶ್ತ್ವಾರದಲ್ಲಿ ಸಂಭವಿಸಿದ ಮೇಘ ಸ್ಪೋಟದಲ್ಲಿ ಸುಮಾರು 60 ಜನರು ಸಾವನ್ನಪ್ಪಿದ್ದು, ಅನೇಕರು ಇನ್ನೂ ನಾಪತ್ತೆಯಾಗಿದ್ದಾರೆ. 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆ ದುರಂತದ ರಕ್ಷಣಾ ಮುಂದುವರೆಯುತ್ತಿರುವ ನಡುವೆಯೇ, ಮತ್ತೊಂದು ಅದೇ ರೀತಿಯ ದುರಂತ ಸಂಭವಿಸಿದೆ.
ಆಗಸ್ಟ್ 5ರಂದು ಉತ್ತರಾಖಂಡದ ಉತ್ತರಕಾಶಿಯ ಧರಲಿ ಮತ್ತು ಹರ್ಸಿಲ್ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಪೋಟ ದುರಂತದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ.
Bihar SIR| ಉತ್ತರದ ಬದಲು ಸಮಜಾಯಿಷಿ ನೀಡುತ್ತಿರುವ ಚು.ಆಯೋಗ: ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್


