ಬಂಧಿತ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಮುಖ್ಯಮಂತ್ರಿ ಒಪ್ಪಿಗೆಯಿಲ್ಲದೆ ಪದಚ್ಯುತಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದ್ದು, ಅವರನ್ನು ಪದಚ್ಯುತಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಸಚಿವ ಬಾಲಾಜಿ ಅವರನ್ನು ರಾಜ್ಯ ಕ್ಯಾಬಿನೆಟ್ಟಿನಲ್ಲಿ ಖಾತೆಯಿಲ್ಲದ ಸಚಿವ ಸ್ಥಾನದಿಂದ ತೆಗೆದುಹಾಕಬೇಕೆ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
‘ರಾಜ್ಯಪಾಲರಿಗೆ ಸಚಿವರನ್ನು ವಜಾ ಮಾಡುವ ಅಧಿಕಾರವಿದೆಯೇ ಎಂಬುದನ್ನು ಪರಿಗಣಿಸಲು ಹೈಕೋರ್ಟ್ ಸೂಕ್ತವಾಗಿದ್ದು, ಸಂಬಂಧಪಟ್ಟವರು ಸಚಿವರಾಗಿ ಮುಂದುವರಿಯಬೇಕೇ ಎಂಬುದನ್ನು ನಿರ್ಧರಿಸಲು ಮುಖ್ಯಮಂತ್ರಿಗೆ ಬಿಟ್ಟಿದ್ದಾರೆ’ ಎಂದು ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಇಂದು ಹೇಳಿದೆ.
ಇದರಲ್ಲಿ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ನಾವು ಭಾವಿಸುತ್ತೇವೆ. ಮದ್ರಾಸ್ ಹೈಕೋರ್ಟಿನ ದೃಷ್ಟಿಕೋನವನ್ನು ನಾವು ಒಪ್ಪುತ್ತೇವೆ ಮತ್ತು ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದರೂ ತಮಿಳುನಾಡು ಸರ್ಕಾರದಲ್ಲಿ ಸಚಿವರಾಗಿ ಮುಂದುವರಿಯಬೇಕು ಎಂದು ಮದ್ರಾಸ್ ಹೈಕೋರ್ಟಿನ ತೀರ್ಪನ್ನು ಸಾಮಾಜಿಕ ಕಾರ್ಯಕರ್ತ ಎಂಎಲ್ ರವಿ ಪ್ರಶ್ನಿಸಿದ್ದರು.
ಪ್ರಕರಣದ ಹಿನ್ನೆಲೆ:
ಬರೋಬ್ಬರಿ 18 ಗಂಟೆಗಳ ವಿಚಾರಣೆ ಬಳಿಕ ತಮಿಳುನಾಡಿನ ವಿದ್ಯುತ್ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 203ರ ಜೂನ್ 14ರಂದು ಬಂಧಿಸಿದ್ದರು. ಬಂಧನವಾದ ಬಳಿಕ ಸೆಂಥಿಲ್ ಬಾಲಾಜಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿತ್ತು. ಸೆಂಥಿಲ್ ಬಂಧನದ ನಂತರ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದವು.
ಹಿಂದಿನ ಜಯಲಲಿತಾ ಸರ್ಕಾರದಲ್ಲಿ ಸಚಿವರಾಗಿದ್ದ ಸೆಂಥಿಲ್, 2011 ರಿಂದ 2016ರ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣದಲ್ಲಿ ಅವರನ್ನು ಇಡಿ ಬಂಧಿಸಿದೆ. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ ಇದ್ದ ಎಐಎಡಿಎಂಕೆಯ ಜಯಲಲಿತಾ ನೇತೃತ್ವದ ಸರ್ಕಾರದಲ್ಲಿ ಸೆಂಥಿಲ್ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಸದ್ಯ ಅವರು ಎಂಕೆ ಸ್ಟಾಲಿನ್ ಸಂಪುಟದಲ್ಲಿ ವಿದ್ಯುತ್ ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸುತ್ತಿದ್ದರು.
ಸೆಂಥಿಲ್ ಬಾಲಾಜಿ ಅವರು 1975, ಅಕ್ಟೋಬರ್ 21 ರಂದು ತಮಿಳುನಾಡಿನ ಕರೂರು ಜಿಲ್ಲೆಯ ರಾಮೇಶ್ವರಪಟ್ಟಿ ಎಂಬಲ್ಲಿ ಜನಿಸಿದ್ದಾರೆ. ನಾಲ್ಕು ಬಾರಿಯ ಶಾಸಕರಾಗಿರುವ ಸೆಂಥಿಲ್ ಬಾಲಾಜಿ ಎಐಎಡಿಎಂಕೆ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. 2006ರಲ್ಲಿ ಶಾಸಕರಾಗಿ ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸಿದ ಸೆಂಥಿಲ್ ಬಾಲಾಜಿ, 2011 ರಿಂದ 2015ರಲ್ಲಿ ಜೆ ಜಯಲಲಿತಾ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ, 2018ರಲ್ಲಿ ಸೆಂಥಿಲ್ ಡಿಎಂಕೆ ಪಕ್ಷದ ಕಡೆ ಹೆಜ್ಜೆ ಹಾಕಿದರು.
ಇದನ್ನೂ ಓದಿ; ರಾಜ್ಯಸಭೆಗೆ ನಾಮನಿರ್ದೇಶನಗೊಂಡ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್


