ಹರಿಯಾಣದಲ್ಲಿ ರೈತರ ಮೇಲೆ ಶನಿವಾರ ನಡೆದ ಪೊಲೀಸ್ ಲಾಠಿ ಚಾರ್ಜ್ ಅನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಮರ್ಥಿಸಿಕೊಂಡಿದ್ದಾರೆ. ರೈತರು ಶಾಂತಿಯುತ ಪ್ರತಿಭಟನೆಯ ಆಶ್ವಾಸನೆಯನ್ನು ನೀಡಿದ್ದರು, ಆದರೆ ಅಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಸೇರಿದಂತೆ, ಹೆದ್ದಾರಿಯನ್ನು ನಿರ್ಬಂಧಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಭಾಗವಹಿಸಿದ್ದ ಬಿಜೆಪಿ ಆಯೋಜನೆಯ ಸಭೆಯನ್ನು ವಿರೋಧಿಸಲು ಕರ್ನಾಲ್ ಕಡೆಗೆ ತೆರಳುತ್ತಿದ್ದಾಗ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಪ್ರತಿಭಟನಾಕಾರರು ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಲಾಠಿಚಾರ್ಜ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದು, ಘಟನೆಯಲ್ಲಿ ಸುಮಾರು 10 ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಹರಿಯಾಣ: ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್; 10 ಜನರಿಗೆ ಗಾಯ
ಸಭೆಯ ನಂತರ ಶನಿವಾರ ಸಂಜೆ ಕರ್ನಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಖಟ್ಟರ್, “ಪ್ರತಿಭಟನಾ ನಿರತ ರೈತರು ತಮ್ಮ ಪ್ರತಿಭಟನೆಗಳು ಶಾಂತಿಯುತವಾಗಿರುತ್ತವೆ ಎಂದು ಸರ್ಕಾರಕ್ಕೆ ಈ ಹಿಂದೆ ಭರವಸೆ ನೀಡಿದ್ದರು. ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ, ಅದಕ್ಕೆ ಯಾರೂ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ಅವರು ಪೊಲೀಸರ ಮೇಲೆ ಕಲ್ಲು ತೂರಿ, ಹೆದ್ದಾರಿಯನ್ನು ತಡೆದ ನಂತರ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಕರ್ನಾಲ್‌ನಲ್ಲಿ ನಡೆದ ಬಿಜೆಪಿ ಸಭೆಯನ್ನು ಉಲ್ಲೇಖಿಸಿದ ಖಟ್ಟರ್, “ಇದು ಪಕ್ಷದ ರಾಜ್ಯಮಟ್ಟದ ಸಭೆಯಾಗಿದೆ. ಇದನ್ನು ವಿರೋಧಿಸಲು ರೈತ ಸಂಘಟನೆಗಳು ನೀಡಿದ ಕರೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.
“ಯಾವುದೇ ಕಾರಣಕ್ಕೂ ಸಂಸ್ಥೆಯೊಂದರ ಕಾರ್ಯವನ್ನು ಅಡ್ಡಿಪಡಿಸುವುದು ಪ್ರಜಾಪ್ರಭುತ್ವ ವಿರೋಧಿ” ಎಂದು ಅವರು ತಿಳಿಸಿದ್ದಾರೆ.
ಹರಿಯಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ನವದೀಪ್ ಸಿಂಗ್ ವಿರ್ಕ್, “ನಾಲ್ಕು ಪ್ರತಿಭಟನಾಕಾರರು ಮಾತ್ರ ಗಾಯಗೊಂಡಿದ್ದಾರೆ. ಆದರೆ ಹತ್ತು ಪೊಲೀಸರು ಘಟನೆಯಲ್ಲಿ ಗಾಯಗೊಂಡಿದ್ದಾರೆ” ಎಂದು ಈ ಹಿಂದೆ ತಿಳಿಸಿದ್ದರು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದು, ಹಲ್ಲೆಗೂ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿಚಾರ್ಜ್- ಹಲವರಿಗೆ ಗಾಯ
ಹೆದ್ದಾರಿಯನ್ನು ನಿರ್ಬಂಧಿಸಿದ್ದರಿಂದ ನಾವು ಸೌಮ್ಯವಾಗಿ ಬಲ ಪ್ರಯೋಗಿಸಿದ್ದೇವೆ ಎಂದು ಕರ್ನಾಲ್ ಐಜಿ ಮಮತಾ ಸಿಂಗ್ ಹೇಳಿದ್ದಾರೆ. “ಪ್ರತಿಭಟನಾಕಾರರು ಪೊಲೀಸರ ಕಡೆಗೆ ಕಲ್ಲುಗಳನ್ನು ಎಸೆದಿದ್ದರಿಂದ ಅವರನ್ನು ಚದುರಿಸಲು ಸೌಮ್ಯ ಬಲಪ್ರಯೋಗ ಮಾಡಲಾಯಿತು” ಎಂದು ಹೇಳಿದ್ದಾರೆ.
ಈ ಮಧ್ಯೆ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕೈಟ್ ಭಾನುವಾರ ಕರ್ನಾಲ್‌ನ ಆಸ್ಪತ್ರೆಯಲ್ಲಿ ಗಾಯಗೊಂಡ ಪ್ರತಿಭಟನಾಕಾರರನ್ನು ಭೇಟಿಯಾದರು. ಪೊಲೀಸರ ಕ್ರೂರ ಲಾಠಿಚಾರ್ಜ್ ಅನ್ನು ಅವರು ಖಂಡಿಸಿದ್ದಾರೆ.
“ಕರ್ನಾಲ್‌ನಲ್ಲಿ ಸಂಚು ಹೂಡಿ ಇದನ್ನು ಮಾಡಲಾಗಿದೆ. ರೈತರ ತಲೆಬುರುಡೆ ಒಡೆಯಲು ಪೊಲೀಸರಿಗೆ ಆದೇಶಿಸುತ್ತಿರುವ ಮ್ಯಾಜಿಸ್ಟ್ರೇಟ್‌ನ ಆದೇಶವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ” ಎಂದು ಟೀಕಾಯತ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ರೈತರ ತಲೆ ಬುರುಡೆ ಒಡೆಯಿರಿ’ – ಪೊಲೀಸರಿಗೆ ಆದೇಶ ನೀಡುತ್ತಿರುವ ಅಧಿಕಾರಿಯ ವಿಡಿಯೊ ವೈರಲ್!



Samarthisikolloke ivrenu Supreme Court Judge….?