ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ದಿನಾಚರಣೆ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಗೈರಾಗಿದ್ದಾರೆ. ಅವರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಮತ್ತು ಮೆಹಬೂಬ ಮುಫ್ತಿಯವರ ಪಿಡಿಪಿ ಕೂಡ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ.
ಈ ಬಾರಿ ಆರನೇ ವರ್ಷದ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ದಿನಾಚರಣೆ ಮಾಡಲಾಗುತ್ತಿದೆ. ಜಮ್ಮುವಿನ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸುತ್ತಿರುವ ಸಿಎಂ ಅಬ್ದುಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ಅಬ್ದುಲ್ಲಾ ಅವರು ಗೈರಾಗಿದ್ದಕ್ಕೆ ವಾಗ್ದಾಳಿ ನಡೆಸಿರುವ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, “ಅಬ್ದುಲ್ಲಾ ಇಬ್ಬಗೆ ನೀತಿ ಪ್ರದರ್ಶಿಸುತ್ತಿದ್ದಾರೆ. ಸಾವಿಂಧಾನಿಕ ಹುದ್ದೆಯಲ್ಲಿದ್ದು, ಅವರು ಗೈರಾಗಿದ್ದು ದುರದೃಷ್ಟಕರ. ಅವರು ಏನೇ ಹೇಳಿದರೂ ಪ್ರಸ್ತುತ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಎಂಬುವುದು ಸತ್ಯ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮೊದಲು ಕ್ಷೇತ್ರ ವಿಂಗಡನೆ, ನಂತರ ಚುನಾವಣೆ. ಆ ಬಳಿಕ ರಾಜ್ಯತ್ವ ಕಲ್ಪಿಸುವ ಭರವಸೆ ನೀಡಿದ್ದಾರೆ” ಎಂದಿದ್ದಾರೆ.
ಅಬ್ದುಲ್ಲಾ ವಿರುದ್ದ ವಾಗ್ದಾಳಿ ನಡೆಸಿರುವ ಜಮ್ಮು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವಿಂದರ್ ರೈನಾ, “ಪಕ್ಷದ ಹೊರತಾಗಿಯೂ ತಾನು ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ ಎಂಬುವುದನ್ನು ಅಬ್ದುಲ್ಲಾ ಅವರು ಅರ್ಥ ಮಾಡಿಕೊಳ್ಳಬೇಕು. ಕೇಂದ್ರಾಡಳಿತ ಪ್ರದೇಶ ದಿನಾಚರಣೆ ಪ್ರತೀ ವರ್ಷ ಮಾಡಲಾಗುತ್ತಿದೆ. ಸಾವಿಂಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಈ ಕಾರ್ಯಕ್ರಮಕ್ಕೆ ಹಾಜರಾಗುವುದು ಅವರ ಜವಾಬ್ಧಾರಿ ಎಂದಿದ್ದಾರೆ.
ಇದನ್ನೂ ಓದಿ : ಮಹಿಳಾ ಗಿಗ್ ಕಾರ್ಮಿಕರಿಂದ ಕರಾಳ ದೀಪಾವಳಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಡಿಜಿಟಲ್ ಮುಷ್ಕರ’


