ಪ್ರಧಾನಿ ನರೇಂದ್ರ ಮೋದಿ ಬರೀ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಮೋದಿ. ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಸೋಮವಾರ (ಸೆ.22) ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಭಾರತೀಯರಿಗೆ ವಾಪಾಸ್ ಕೊಡ್ತೀರಾ ಎಂದು ಸಿಎಂ ಪ್ರಶ್ನಿಸಿದರು.
ಜಿಎಸ್‌ಟಿ ಶೇಕಡ 18, 28 ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ. ನೀವು ಇದಕ್ಕೆಲ್ಲಾ ಮರಳಾಗಬಾರದು ಎಂದರು.
ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದು 10 ಕೆಜಿ ಅಕ್ಕಿ ಕೊಟ್ಟಿದ್ದೇ ಈ ಸಿದ್ದರಾಮಯ್ಯ ಎಂದು ಸಿಎಂ ಹೇಳಿದರು.
ಮಾಜಿ ಸಂಸದರಿಗಿಂತ ನಾನು ಉತ್ತಮ ಹಿಂದೂ: ಸಿಎಂ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿದವರಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಚಾಟಿ ಬೀಸಿದ್ದನ್ನು ಪ್ರಸ್ತಾಪಿಸಿದ ಸಿಎಂ, ಬಾನು ಮುಷ್ತಾಕ್‌ಗೆ ವಿರೋಧ ವ್ಯಕ್ತಪಡಿಸಿದ ಮೂರ್ಖರಿಗೆ ಸುಪ್ರೀಂಕೋರ್ಟ್ ಸಂವಿಧಾನದ ಪೀಠಿಕೆ ಓದಲು ಹೇಳಿದೆ ಎಂದರು.
ಬಾನು ಮುಷ್ತಾಕ್ ಅವರಿಗೆ ಎರಡು ಬಾರಿ ಸಂಸದರಾಗಿದ್ದವರು ವಿರೋಧ ವ್ಯಕ್ತಪಡಿಸಿದ್ದರು. ದಸರಾ ನಾಡ ಹಬ್ಬ ಎನ್ನುವುದೂ ಕೂಡ ಗೊತ್ತಿಲ್ಲ ಅವರಿಗೆ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೋಗಿ ಸೋತರು. ನನ್ನ ಹೆಸರಲ್ಲೇ ಇಬ್ಬರು ದೇವರಿದ್ದಾರೆ. ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು. ಇಬ್ಬರು ದೇವರನ್ನು ಹೊಂದಿರುವ ನಾನು ಅವರಿಗಿಂತ ಉತ್ತಮ ಹಿಂದೂ ಎಂದು ಸಿಎಂ ಹೇಳಿದರು.
‘ಈ ನೆಲದ ಪರಂಪರೆಯೇ ಸರ್ವ ಜನಾಂಗದ ಶಾಂತಿಯ ತೋಟ..’; ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್


