ಭೂ ಸ್ವಾಧೀನಕ್ಕೆ ಚನ್ನರಾಯಪಟ್ಟಣ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ, ಜುಲೈ 4ರಂದು ರೈತರು ಮತ್ತು ಸಂಯುಕ್ತ ಹೋರಾಟ ವೇದಿಕೆ ಮುಖಂಡರ ಜೊತೆ ಸಮಗ್ರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಜೂ.26) ಭರವಸೆ ನೀಡಿದ್ದಾರೆ.
ಬುಧವಾರ ‘ದೇವನಹಳ್ಳಿ ಚಲೋ’ ಹೋರಾಟ ಹಮ್ಮಿಕೊಂಡಿದ್ದ ರೈತರು ಮತ್ತು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆ ಇಂದು ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಿಯೋಗವೊಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ನಿಯೋಗದೊಂದಿಗೆ ಮಾತುಕತೆ ನಡೆಸಿದ ಸಿಎಂ ಜುಲೈ 4ರಂದು 11.30ಕ್ಕೆ ಸಭೆ ನಡೆಸುವ ಭರವಸೆ ಕೊಟ್ಟಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ನಟ ಪ್ರಕಾಶ್ ರಾಜ್, “ನಾನು ವಿರೋಧ ಪಕ್ಷದಲ್ಲಿದ್ದಾಗ ರೈತರ ಹೋರಾಟ ಸ್ಥಳಕ್ಕೆ ಬಂದಿದ್ದೆ, ಮಾತು ಕೊಟ್ಟಿದ್ದೆ ಅಧಿಸೂಚನೆ ಆಗಬಾರದು ಎಂಬುವುದನ್ನು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ನೀವು ಇಷ್ಟು ಪ್ರತಿಭಟಿಸುವಾಗ ನಾವು ಸ್ಪಂದಿಸಲೇಬೇಕು. ನಾನು ಮಾತುಕತೆಗೆ ಮುಕ್ತವಾಗಿದ್ದೇನೆ. ರೈತರ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸಮಗ್ರವಾಗಿ ಮಾತನಾಡೋಣ ಎಂದಿದ್ದಾರೆ” ಎಂದು ಹೇಳಿದರು.
ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ವೀರಸಂಗಯ್ಯ, ವಿಜಯಮ್ಮ ಕೆ.ಎಸ್. ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ, ಚಂದ್ರು ತರಹುಣಸೆ ಮತ್ತಿತರರು ಈ ವೇಳೆ ಹಾಜರಿದ್ದರು.
ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಾಷ್ಟವಧಿ, ಆಹೋರಾತ್ರಿ ಧರಣಿ
ಚನ್ನರಾಯಪಟ್ಟ ಭೂ ಸ್ವಾಧೀನ ವಿರೋಧಿ ಹೋರಾಟದ ಮುಂದಿನ ಹಂತವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಾಷ್ಟವಧಿ, ಆಹೋರಾತ್ರಿ ಧರಣಿ ನಡೆಸಲು ಸಂಯುಕ್ತ ಹೋರಾಟ ತೀರ್ಮಾನಿಸಿದೆ.
“ಸಿಎಂ ಸಿದ್ದರಾಮಯ್ಯ ಸಭೆ ನಡೆಸುವ ಭರವಸೆ ನೀಡಿ ಒಂದು ವಾರಗಳ ಸಮಯವಕಾಶ ಕೇಳಿದ್ದಾರೆ. ಆದರೆ, ಭೂ ಸ್ವಾಧೀನ ಆದೇಶ ಹಿಂಪಡೆಯುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ” ಎಂದು ಸಂಯುಕ್ತ ಹೋರಾಟದ ಮುಖಂಡರು ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ರೈತರ ಮೇಲೆ ಪೊಲೀಸ್ ದೌರ್ಜನ್ಯ: ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ


