ಬೆಂಗಳೂರು : ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಮಾ.21) ವಿಧಾನಸಭೆಯಲ್ಲಿ ಹೇಳಿದರು.
ಸಚಿವ ಕೆ.ಎನ್ ರಾಜಣ್ಣ ಅವರನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಲಾಗಿದೆ ಎಂಬ ಆರೋಪದ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ಶಾಸಕರಾದ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್ ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಕಾರಣರಾದವರನ್ನು ವಜಾ ಮಾಡಬೇಕು ಹಾಗೂ ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, “ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ಪ್ರಕರಣದಲ್ಲಿ ಯಾರೇ ಬಲಿಪಶು ಆಗಿದ್ದರೂ, ಅವರಿಗೆ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು” ಎಂದರು.
“ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ. ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.
ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಬಗ್ಗೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದು ಪರಮೇಶ್ವರ್ ಅವರು ಭರವಸೆ ನೀಡಿದ ಮೇಲೆಯೂ ವಿಪಕ್ಷಗಳ ಶಾಸಕರು ಸದನದಲ್ಲಿ ಪುನ:…
— Siddaramaiah (@siddaramaiah) March 21, 2025
ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಶಾಸಕರಾದ ಸುನಿಲ್ ಕುಮಾರ್, ಮುನಿರತ್ನ ಈ ಆರೋಪಕ್ಕೆ ಧ್ವನಿಗೂಡಿಸಿ ಚರ್ಚೆ ನಡೆಸಿದ್ದರು.
ಈ ವೇಳೆ ಸಚಿವ ರಾಜಣ್ಣ ಪ್ರತಿಕ್ರಿಯಿಸಿ, “48 ಜನರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ. ಇದರಲ್ಲಿ ಸಿಲುಕಿದವರು ಎರಡೂ ಪಕ್ಷದಲ್ಲಿ ಇದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರ ಮಟ್ಟದ ವಿವಿಧ ಪಕ್ಷಗಳ ಮುಖಂಡರ ಹನಿಟ್ರ್ಯಾಪ್ ಪೆನ್ ಡ್ರೈವ್ ಇದೆ. ನನ್ನ ಮೇಲೆ ಆರೋಪಕ್ಕೆ ಇಲ್ಲಿ ಉತ್ತರ ಕೊಡಲ್ಲ. ನಾನು ಈ ಬಗ್ಗೆ ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇವೆ. ಇದನ್ನು ತನಿಖೆ ಮಾಡಬೇಕು. ಯಾರು ನಿರ್ಮಾಪಕರು, ನಿರ್ದೇಶಕರು ಇದ್ದಾರೆ ಇವೆಲ್ಲವೂ ಹೊರಗಡೆ ಬರಲಿ. ಜನರಿಗೆ ಗೊತ್ತಾಗಲಿ” ಎಂದು ಹೇಳಿದ್ದರು.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಈ ವಿಚಾರವಾಗಿ ಪ್ರತಿಕ್ರಿಯಿಸಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಭರವಸೆ ನೀಡಿದ್ದಾರೆ. ಆದರೆ, ಸದನದಲ್ಲಿ ಶುಕ್ರವಾರ ಕೂಡ ಬಿಜೆಪಿ ಶಾಸಕರು ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ್ದು, ಕೆಲಕಾಲ ಗಂಭೀರ ಚರ್ಚೆ ಮತ್ತು ಗದ್ದಲ ನಡೆಯಿತು.
ಉಡುಪಿ| ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ, ಇಬ್ಬರು ಪೊಲೀಸರು ಅಮಾನತು


