ಮುಡಾ ಪ್ರಕರಣ ಸಂಬಂಧ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ನಿಗದಿ ಮಾಡಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಿತು. ಸಿಎಂ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಂಘ್ವಿ ವಾದ ಮಂಡಿಸಿದರು.
“ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದ್ದು,ಈ ಮೂಲಕ ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಲಾಗಿದೆ. ಸಚಿವ ಸಂಪುಟದ ಸಲಹೆಯನ್ನು ರಾಜ್ಯಪಾಲರು ನಿರಾಕರಿಸಿದ್ದಾರೆ. ಯಾವ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂಬ ಅಂಶವನ್ನೇ ಅವರು ಇನ್ನೂ ವಿವರಿಸಿಲ್ಲ. ಹಾಗಾಗಿ, ಈ ಅನುಮತಿ ರಾಜಕೀಯ ದುರುದ್ಧೇಶಗಳಿಂದ ಕೂಡಿರುವುದಾಗಿ ಪರಿಗಣಿಸಬೇಕು” ಎಂದು ವಕೀಲ ಅಭಿಷೇಕ್ ಮನು ಸಂಘ್ವಿ ವಾದ ಮಂಡಿಸಿದ್ದಾರೆ.
“ನಿವೇಶನಗಳ ಬದಲಿ ಹಂಚಿಕೆ ಮಾಡಿರುವ ಪ್ರಕ್ರಿಯೆ ಈ ಬಿಜೆಪಿಯ ಅಧಿಕಾರವದಿಯಲ್ಲಿ ಅವಧಿಯಲ್ಲಿ ನಡೆದಿದೆ. ಸಿದ್ದರಾಮಯ್ಯ ವಿರುದ್ದ ಯಾವುದೇ ದಾಖಲೆಗಳು ಕಂಡು ಬಂದಿಲ್ಲ ಅಲ್ಲದೆ, ಭಾರತೀಯ ನಾಗರಿಕ ನ್ಯಾಯ ಸಂಹಿತೆಯ ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಆದರೆ, ಈ ಸೆಕ್ಷನ್ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಾದಲ್ಲಿ ನಿರ್ದಿಷ್ಟ ಅಪರಾಧವನ್ನು ಒಳಗೊಂಡಿರಬೇಕು. ಅಲ್ಲದೆ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅದು ನಡೆದಿರಬೇಕು ” ಎಂದು ಹೇಳಿದ್ದಾರೆ.
ವಕೀಲ ಟಿಜೆ ಅಬ್ರಾಹಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸುಮಾರು 12 ಅರ್ಜಿಗಳು ಬಾಕಿಯಿವೆ. ಅವೆಲ್ಲನ್ನು ಬಿಟ್ಟು ದೂರು ಕೊಟ್ಟ ತಕ್ಷಣದಲ್ಲಿ ನೋಟಿಸಿ ನೀಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದು ರಾಜಕೀಯ ಉದ್ದೇಶವಾಗಿದೆ” ಎಂದು ವಿವರಿಸಿದ್ದಾರೆ.
ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಸಿದ್ದರಾಮಯ್ಯ ವಿರುದ್ದ ಕ್ರಮ ಕೈಗೊಳ್ಳಲು ಅನುಮತಿ ನಿರಾಕರಿಸಿದ ಸಚಿವ ಸಂಪುಟದ ನಿರ್ಧಾರವು, ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯನ್ನೇ ಹೋಲುತ್ತದೆ. ಆದ್ದರಿಂದ ಅದು ಪಕ್ಷಪಾತಿ ನಿರ್ಧಾರ ಆಗುವ ಆತಂಕವಿದೆ ಎಂದಿದ್ದಾರೆ.
ರಾಜ್ಯಪಾಲರು ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ಬದ್ಧರಾಗಿದ್ದರೂ, ಮುಖ್ಯಮಂತ್ರಿಯ ಸಂದರ್ಭದಲ್ಲಿ ಅಥವಾ ರಾಜ್ಯಪಾಲರು ಸ್ವತಃ ಅನುಮತಿ ನೀಡಬೇಕಾದ ಸಂದರ್ಭಗಳಲ್ಲಿ ವಿನಾಯಿತಿ ನೀಡಬಹುದು ಎಂದು ವಾದಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದೆ. ಇದರ ಜೊತೆಗೆ ಆ.29ರ ವರೆಗೂ ಕೆಳ ನ್ಯಾಯಾಲಯಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ತೀರ್ಪು ನೀಡುವಂತಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : ಬೆಂಗಳೂರು | ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಹೃದಯಾಘಾತ : ಸಾಮಾಜಿಕ ಕಾರ್ಯಕರ್ತ ಸಾವು


