ಪ್ರವಾಹಪೀಡಿತ ಪ್ರದೇಶಗಳಿಗೆ ಅನುದಾನ ಕೊಡುವುದಿರಲಿ, 10 ಸಾವಿರ ಕೊಟ್ಟದ್ದೇ ಹೆಚ್ಚು ಎಂದು ಸಂತ್ರಸ್ತ ಕುಟುಂಬಗಳನ್ನು ಸಚಿವ ಕೆ.ಎಸ್. ಈಶ್ವರಪ್ಪ ಅವಮಾನಿಸಿ ಹೋಗಿದ್ದಾರೆ. ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶಿಕಾರಿಪುರ ತಾಲೂಕಿಗೆ ಏಕಾಏಕಿ 1,100 ಕೋಟಿ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 11 ಕೋಟಿ, ಉಳಿದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 3 ಕೋಟಿ ಅನುದಾನವನ್ನು ನೀಡಿರುವ ಯಡಿಯೂರಪ್ಪ, 23 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆಯನ್ನೂ ನೀಡಿಲ್ಲ. ಅಸಹ್ಯ ಆಡಳಿತ ಮತ್ತು ಸ್ವಾರ್ಥ ರಾಜಕಾರಣಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?
ನೆರೆಪೀಡಿತ ಪ್ರದೇಶಗಳಿಗೂ ಚಿಕ್ಕಾಸೂ ಬಿಡುಗಡೆ ಮಾಡಲು ಒಲ್ಲದ ದೇಶದ ಪ್ರಧಾನಿ ಚಂದಮಾಮಾನನ್ನು ತೋರಿಸಲು ಬೆಂಗಳೂರಿಗೆ ಬಂದು ಕರ್ನಾಟಕದ ಸಂಕಟಗಳಿಗೆ ಬೆನ್ನು ಮಾಡಿ ಹೋಗುತ್ತಾರೆ. ಇತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ‘ನಿಮ್ಗೆಲ್ಲ 10 ಸಾವಿರ ಪರಿಹಾರ ಕೊಟ್ಟಿದ್ದೇ ಜಾಸ್ತಿ ಹೋಗ್ರಿ’ ಎಂದು ಉದ್ಧಟತನದ ಮಾತಾಡಿ ಜನರ ಆಕ್ರೋಶಕ್ಕೆ ಗುರುಯಾಗಿದ್ದಾರೆ. ಅವರ ಕಾರಿಗೆ ಮುತ್ತಿಗೆ ಹಾಕಿದ ಜನ ಕಾರನ್ನು ಗುದ್ದಿ ಗುದ್ದಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.
ಅದಕ್ಕಿಂತ ಹೀನ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುವ ಮೂಲಕ ಹೈದರಾಬಾದ್-ಕರ್ನಾಟಕದ ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಪ್ರವಾಹ, ನೆರೆ ಮತ್ತು ಬರ ಇದ್ಯಾವುದರ ಬಗ್ಗೆಯೂ ನಮಗೆ ಚಿಂತೆಯಿಲ್ಲ, ನಮಗೀಗ ಉಪ ಚುನಾವಣೆಗಳನ್ನು ಗೆಲ್ಲಬೇಕು ಮತ್ತು ಹೈಮಾಂಡ್ ಹೇಳಿದ್ದನ್ನು ಎಲ್ಲ ಮುಚ್ಚಿಕೊಂಡು ಪಾಲಿಸಬೇಕು ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ತಮ್ಮ ಅಪ್ರಬುದ್ಧ, ಅಸಂಬದ್ಧ ಆದೇಶಗಳ ಮೂಲಕ ಜಗಜ್ಜಾಹೀರು ಮಾಡಿದ್ದಾರೆ.
ನೆರೆಪೀಡಿತರಿಗೆ ನಕೋ, ಅನರ್ಹರಿಗೆ ಪೀಕೋ ಪೀಕು
ಒಂದು ಕಡೆ ನೆರೆಪ್ರವಾಹದಿಂದ, ಇನ್ನೊಂದು ಕಡೆ ಪ್ರವಾಹದಿಂದ ಉತ್ತರ ಕರ್ನಾಟಕದ ಬಹುಭಾಗ ಮತ್ತು ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಜೀವನ ಅಸ್ತವ್ಯಸ್ತವಾಗಿದೆ, ಬೆಳೆಗಳು (ಪೀಕು) ನಾಶವಾಗಿವೆ. ಆದರೆ, ಅನರ್ಹ ಶಾಸಕರಿಗೆ ಮಾತ್ರ ಪೀಕೋ ಪೀಕು. ಸರ್ಕಾರ ಉರುಳಿಸಲು ಸಾಕಷ್ಟು ‘ಪೀಕಿದ’ ಈ ಅನರ್ಹರಿಗೆ ಈ ಸಚಿವ ಸ್ಥಾನ ಕೊಡಲಂತೂ ಆಗುವುದಿಲ್ಲ. ಆದರೆ, ಐದು ತಿಂಗಳಿಗೇ ಬರಲಿರುವ 17 ಉಪ ಚುನಾವಣೆಗಳಲ್ಲಿ ಕನಿಷ್ಠ 10ರಲ್ಲಾದರೂ ಗೆಲ್ಲಲೇಬೇಕು.
ಹೀಗಾಗಿ ಯಡಿಯೂರಪ್ಪ ಸರ್ಕಾರ ಈಗ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಅನುದಾನ ಕೊಡಲು ಪ್ಲಾನು ಮಾಡಿದೆ. ಅದರ ಮೊದಲ ಭಾಗವಾಗಿ ಈಗ ಹೈದರಾಬಾದ್-ಕರ್ನಾಟಕದ ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 11 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದಾರೆ ಯಡಿಯೂರಪ್ಪ. ವಿಜಯನಗರ-ಹೊಸಪೇಟೆ (ಆನಂದಸಿಂಗ್-ಅನರ್ಹ) ಮತ್ತು ಮಸ್ಕಿ (ಪ್ರತಾಪಗೌಡ- ಅನರ್ಹ) ಈ ಇಬ್ಬರಿಗೂ ಬೋನಸ್ ನೀಡುವ ಮೂಲಕ ಬರಲಿರುವ ಉಪಚುನಾವಣೆಗಳ ಮೇಲೆ ಯಡಿಯೂರಪ್ಪ ಕಣ್ಣು ಹಾಕಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಝೀರೊ!
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ಬಜೆಟ್ಟಿನಲ್ಲಿ (ಕುಮಾರಸ್ವಾಮಿ ಮಂಡಿಸಿದ್ದು) 1,500 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಲ್ಲಿ ಶೇ. 5ರಷ್ಟು ಮುಖ್ಯಮಂತ್ರಿಗಳ ವಿವೇಚನಾ ನಿಧಿ ಇರುತ್ತದೆ. ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಶೇ.5 ಅಂದರೆ 75 ಕೋಟಿ ರೂಪಾಯಿಗಳನ್ನು ಆದಷ್ಟು ತಾರತಮ್ಯವಿಲ್ಲದೇ ಹಂಚಿದ್ದರು. ಆದರೆ, ಮೊನ್ನೆ ಈ ಆದೇಶ ರದ್ದು ಮಾಡಿದ ಯಡಿಯೂರಪ್ಪನವರು, ಇಬ್ಬರು ಅನರ್ಹ ಶಾಸಕರ ( ಆನಂದ್‍ಸಿಂಗ್, ಪ್ರತಾಪಗೌಡ) ಕ್ಷೇತ್ರಗಳಿಗೆ ತಲಾ 11 ಕೋಟಿ ಬಿಡುಗಡೆ ಮಾಡಿದ್ದಾರೆ. ಹೈದರಾಬಾದದ-ಕರ್ನಾಟಕದ 42 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರ ಗೆದ್ದಿದೆ. ಅದರಲ್ಲಿ 16 ಕ್ಷೇತ್ರಗಳಿಗೆ ತಲಾ 3 ಕೋಟಿಗಳನ್ನು ಮತ್ತು ಇನ್ನೊಂದು ಬಿಜೆಪಿ ಗೆದ್ದಿರುವ ಕ್ಷೇತ್ರವಾದ ರಾಯಚೂರು ನಗರಕ್ಕೆ 4 ಕೋಟಿ ಬಿಡುಗಡೆ ಮಾಡಿದ್ದಾರೆ. ಅಂದರೆ, ಬಿಜೆಪಿಯ 17 ಮತ್ತು ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳನ್ನು ಬಿಟ್ಟು ಎಲ್ಲ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡದೇ ತಾವೆಷ್ಟು ಪಕ್ಷಪಾತಿ ಸಿಎಂ ಎಂದು ಸಾಬೀತು ಮಾಡಿದ್ದಾರೆ ಯಡಿಯೂರಪ್ಪ…

ಈಗಾಗಲೇ ಕುಮಾರಸ್ವಾಮಿ ಈ ಕುರಿತು ಅಪಸ್ವರ ಎತ್ತಿದ್ದಾರೆ. ಜೆಡಿಎಸ್ ಶಾಸಕ ನಾಗನಗೌಡ ಇರುವ ಗುರುಮಿಠಕಲ್ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ 4.5 ಕೋಟಿ ಅನುದಾನವನ್ನು ಯಡಿಯೂರಪ್ಪ ರದ್ದು ಮಾಡಿದ್ದಾರೆ. (ಈ ಕ್ಷೇತ್ರದ ಶಾಸಕರ ಮಗ ಶರಣೇಗೌಡನೇ ದೇವದುರ್ಗದ ಐಬಿಯಲ್ಲಿ ಯಡಿಯೂರಪ್ಪರನ್ನು ಆಪರೇಷನ್ ಕಮಲದ ಆಡಿಯೋ ಖೆಡ್ಡಾಕ್ಕೆ ಕೆಡವಿದ್ದು!)
ನೆರೆಪೀಡಿತ ಲಿಂಗಸಗೂರು ತಾಲೂಕಿಗೂ ನಯಾಪೈಸೆಯಿಲ್ಲ, ಪ್ರವಾಹಬಾಧಿತ ರಾಯಚೂರು ಗ್ರಾಮೀಣಕ್ಕೂ ಬಿಡಿಗಾಸಿಲ್ಲ! ಆದರೆ, ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಪ್ರತಿನಿಧಿಸುವ ರಾಯಚೂರು ನಗರಕ್ಕೆ 4 ಕೋಟಿ! ಶಾಸಕರೇ ಇಲ್ಲದ (ಅನರ್ಹರ) ಕ್ಷೇತ್ರಗಳಿಗೆ ತಮ್ಮ ವಿವೇಚನಾ ನಿಧಿ 75 ಕೋಟಿಯಲ್ಲಿ 22 ಕೋಟಿ ರೂಪಾಯಿ!
ವಿವೇಚನಾಶೂನ್ಯ ಸಿಎಂ: ರಾಘವೇಂದ್ರ ಕುಷ್ಟಗಿ
ವಿವೇಚನಾ ನಿಧಿಯನ್ನು ಇಷ್ಟು ಕ್ಷುಲ್ಲಕ ಶೈಲಿಯಲ್ಲಿ ಹಂಚಿದ ಮುಖ್ಯಮಂತ್ರಿಯನ್ನು ನಾನು ನೋಡೇ ಇಲ್ಲ. ಹೀಗೆಲ್ಲ ಅಸಮಾನ ಹಂಚಿಕೆ ಮಾಡುವ ಇವರೆಲ್ಲ ಸಮಾನತೆ ಕನಸಿನ ಕಲ್ಯಾಣ ಎಂಬ ಪದವನ್ನೇ ಅವಮಾನ ಮಾಡಿದ್ದಾರೆ. ಈ ನಡುವೆ ಒಂದೇ ಒಂದು ಸಾರಿಯೂ ಹೈ-ಕ ಅಭಿವೃದ್ಧಿ ಮಂಡಳಿ ಸಭೆಗೆ ಹಾಜರಾಗದೇ ನಿರ್ಗಮಿಸುತ್ತಿರುವ ರಾಜ್ಯಪಾಲ ವಜುಭಾಯಿಯವರ ಧೋರಣೆಯನ್ನೂ ಗಮನಿಸಿ ಹೇಳುವುದಾದರೆ ಹೈ-ಕದ ಮೊದಲ ಶತ್ರು ಬಿಜೆಪಿಯೇ ಆಗಿದೆ… ವಿವೇಚನಾಶೂನ್ಯ ಸಿಎಂಗೆ ಇಲ್ಲಿನ ಜನ ಪಾಠ ಕಲಿಸಲೇಬೇಕು ಎಂದು ಜನ ಸಂಗ್ರಾಮ ಪರಿಷತ್‍ನ ರಾಘವೇಂದ್ರ ಕುಷ್ಟಗಿ ಹೇಳುತ್ತಾರೆ.
ಟೋಟಲಿ ನಾನ್‍ಸೆನ್ಸ್ ನಿರ್ಧಾರ: ರಜಾಕ್ ಉಸ್ತಾದ್
ಯಡಿಯೂರಪ್ಪನವರ ಈ ನಿರ್ಧಾರ ಟೋಟಲಿ ನಾನ್‍ಸೆನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ ಹೈ-ಕ ಅಭಿವೃದ್ಧಿ ಹೋರಾಟ ಸಮಿತಿಯ ರಜಾಕ್ ಉಸ್ತಾದ್, ‘ಹೈ-ಕ ಭಾಗದ ಎಲ್ಲ ಐದೂ ಸಂಸದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನ ಗೆಲ್ಲಿಸಿದ್ದಾರೆ. ಈ ಎಂಪಿಗಳ ಕ್ಷೇತ್ರಕ್ಕೆ ಬರುವ 25ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಒಂದು ರೂಪಾಯಿಯ ಅನುದಾನವನ್ನೂ ನೀಡಿಲ್ಲ. ನಾಚಿಕೆಯಾಗಬೇಕು ಈ ಐದೂ ಎಂಪಿಗಳಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು….


