Homeಕರ್ನಾಟಕಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!

ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!

ನಮ್ಮನ್ನು ಶೂನ್ಯಕ್ಕೆ ತಂದಿದ್ದೀರಿ, ಆದರೆ ನಾವು ಖಂಡಿತವಾಗಿಯು ಎದೆಗುಂದುದಿಲ್ಲ. ನಾವು ಮತ್ತೇ ಬೆಳೆಯುತ್ತೇವೆ, ಹೋರಾಟ ಮುಂದುವರೆಯುತ್ತದೆ ಎಂದು ಚಾನೆಲ್‌ನ ಪ್ರಿನ್ಸಿಪಲ್‌ ಎಡಿಟರ್‌ ರಹಮಾನ್ ಹಾಸನ್ ಹೇಳಿದ್ದಾರೆ.

- Advertisement -

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಕಳೆದ ಹಲವು ದಿನಗಳಿಂದ ದಾಖಲೆ ಸಹಿತ ಸತತವಾಗಿ ವರದಿ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ “ಪವರ್‌ ಟಿವಿ”ಯ ಪ್ರಸಾರವನ್ನು ತಡೆಹಿಡಿಯಲಾಗಿದೆ ಎಂದು ಮಾಧ್ಯಮದ ಪ್ರಿನ್ಸಿಪಲ್ ಎಡಿಟರ್‌ ರಹಮಾನ್ ಹಾಸನ್ ಹೇಳಿದ್ದಾರೆ.

ನಿನ್ನೆ ರಾತ್ರಿ 10:45 ಕ್ಕೆ ತಮ್ಮ ಫೇಸ್‌‌ಬುಕ್ ಖಾತೆಯಿಂದ ಲೈವ್‌ ಮೂಲಕ ಮಾತನಾಡಿದ ರಹಮಾನ್ ಹಾಸನ್, “ಸಿಸಿಬಿ ಪೊಲೀಸರು ಕೇಸಿಗೆ ಸಂಬಂಧಪಟ್ಟಂತೆ ಸರ್ಚ್ ವಾರೆಂಟ್ ತಂದು ಪವರ್‌ ಟಿವಿ ಕಚೇರಿಯಲ್ಲಿ ಸರ್ಚ್ ಮಾಡಿದ್ದಾರೆ. ಅವರಿಗೆ ಬೇಕಾಗಿರುವ ಸಿಸ್ಟಂ, ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌ ಸಹಿತ ಎಲ್ಲಾ ದಾಖಲೆಗಳನ್ನು ಪಡೆದಿದ್ದಾರೆ, ಆದರೆ ಯಾಕೆ ಎಂದು ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್‌ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!

ಅಷ್ಟೇ ಅಲ್ಲದೆ ಪವರ್‌ ಟಿವಿಯ ಫೇಸ್‌ಬುಕ್ ಲೈವ್‌ ಕೂಡಾ ತಡೆಹಿಡಿಯಲಾಗಿದೆ. ಸುಮಾರು 250  ಉದ್ಯೋಗಿಗಳಿರುವ ಚಾನೆಲನ್ನು ತಡೆಹಿಡಿದಿದ್ದಾರೆ, ಎಲ್ಲರೂ ಬೀದಿಗೆ ಬಂದಿದ್ದಾರೆ ಎಂದು ಭಾವುಕರಾದ ರಹಮಾನ್, “ಇದು ಮಾಧ್ಯಮ ಲೋಕದಲ್ಲಿ ಕರಾಳ ದಿನ” ಎಂದು ಹೇಳಿದ್ದಾರೆ.

ಟಿವಿಯು ದಾಖಲೆಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ದ ಧ್ವನಿ ಎತ್ತುತ್ತಿದೆ. ಅದಕ್ಕಾಗಿ ಚಾನೆಲ್ ಎಂ.ಡಿ ಮೇಲೆ ಕೇಸು ಹಾಕುವುದು ಹಾಗೂ ತನಿಖೆ ನಡೆಸುವುದು ನಿಮ್ಮ ಸ್ವಾತಂತ್ಯ್ರ, ಆದರೆ ಒಂದು ಸಂಸ್ಥೆಯನ್ನು ಕಟ್ಟುವುದು ತುಂಬಾ ಕಷ್ಟದ ಕೆಲಸ, ಈಗ ಎಲ್ಲರೂ ಬೀದಿಗೆ ಬಂದಿದ್ದೇವೆ. ಇದು ಸರಿಯಲ್ಲ ಯಡಿಯೂರಪ್ಪನವರೇ ಎಂದು ರಹಮಾನ್ ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.

“ಆದರೆ ನಮ್ಮ ಕೆಲಸ ಸತ್ಯಕ್ಕಾಗಿ ಧ್ವನಿ ಎತ್ತಿರುವಂತದ್ದು. ವಿಜಯೇಂದ್ರ ಅವರ ಭ್ರಷ್ಟಾಚಾರ ಸಂಬಂಧಪಟ್ಟಂತೆ ಮಾಡಿರುವ ವರದಿ ಮುಂದುವರೆಯುತ್ತದೆ. ನಮ್ಮ ಚಾನೆಲ್‌ ಅನ್ನು ನೀವು ಮುಗಿಸಿರಬಹುದು, ಫೇಸ್‌ಬುಕ್ ಖಾತೆಯನ್ನು ಮುಗಿಸಿರಬಹುದು. ಆದರೆ ನಮ್ಮದೆ ವೈಯಕ್ತಿಕ ಫೇಸ್‌ಬುಕ್‌ ಖಾತೆಗಳಿವೆ. ಅದನ್ನು ಮುಗಿಸಿದರೆ ನಾವು ಇನ್ನೊಂದು ಖಾತೆಯನ್ನು ತೆರೆಯುತ್ತೇವೆ ಆದರೆ ನಾವು ಸುಮ್ಮನಿರುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಸುಲಿಗೆ, ವಸೂಲಿ ದಂಧೆ ಆರೋಪ: ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕ್ರಿಮಿನಲ್ ದೂರು!

“ನಿಮ್ಮ ರಾಜಾಹುಲಿ ಎಂಬ ಬಿರುದು ನಾವು ಮಾಧ್ಯಮವೇ ಕೊಟ್ಟಿರುವುದು, ಆದರೆ ಇದು ರಾಜಾಹುಲಿ ಮಾಡುವ ಕೆಲಸವೇ ಯಡಿಯೂರಪ್ಪನವರೇ? ನಿಮ್ಮಲ್ಲಿ ಅಧಿಕಾರ ಇರಬಹುದು, ಪೊಲೀಸರು ಇರಬಹುದು. ನೀವು ಏನು ಬೇಕಾದರೂ ಮಾಡಬಹುದು ಅಲ್ಲವೆ” ಎಂದು ಪ್ರಶ್ನಿಸಿದ್ದಾರೆ.

“ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ದ ಸುದ್ದಿ ಮಾಡಬಾರದು ಎಂದು ಕೋರ್ಟ್‌ನಿಂದ ಇಂಜೆಕ್ಷನ್ ಬಂದಿದೆ. ಆದರೆ ನಾವು ಸುಖಾಸುಮ್ಮನೆ ಇಲ್ಲಸಲ್ಲದ ಸುದ್ದಿ ಮಾಡಿಲ್ಲ. ನಮ್ಮಲ್ಲಿ ಎಲ್ಲಾ ದಾಖಲೆ ಇದೆ. ಸಿಸಿಬಿ ತನಿಖೆಗೂ ನಾವು ಸಹಕಾರ ಕೊಟ್ಟಿದ್ದೇವೆ. ಆದರೆ ಚಾನೆಲ್ ಯಾಕೆ ಬಂದ್ ಮಾಡಿದ್ದೀರಿ” ಎಂದು ಮುಖ್ಯಮಂತ್ರಿಯವರಿಗೆ ಪ್ರಶ್ನಿಸಿದ್ದಾರೆ.

“ಇವತ್ತು ನಮ್ಮ ಚಾನೆಲನ್ನು ಮುಗಿಸಿದ್ದಾರೆ. ಮುಂದೊಂದು ದಿನ ಬೇರೆ ಚಾನೆಲ್‌ಗೂ ಇಂತಹ ಪರಿಸ್ಥಿತಿ ಬರಬಹುದು. ಇದು ಪತ್ರಕರ್ತರು ಒಗ್ಗಟ್ಟಾಗುವ ಸಮಯ ಇದು. ರಾಜ್ಯದಲ್ಲಿ ಬೇಕಾದಷ್ಟು ಚಾನೆಲ್ ಬೇರೆ ಬೇರೆ ಕಾರಣಗಳಿಗೆ ಮುಚ್ಚಿಹೋಗಿದೆ. ಆದರೆ ಇಂತಹ ಕಾರಕ್ಕೆ ಯಾವ ಚಾನೆಲ್‌ಗಳು ಕೂಡಾ ಮುಚ್ಚಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಯಡಿಯೂರಪ್ಪ: ಸಿದ್ದರಾಮಯ್ಯ

Posted by Rahman Hassan on Monday, September 28, 2020

“ನಾವು ಮಾಡಿರುವ ಕೆಲಸಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಯಡಿಯೂರಪ್ಪನವರೆ ನಿಮ್ಮ ಕೆಲಸ ನಾಚಿಗೇಡು. ಒಂದು ಚಾನೆಲ್‌ ಅನ್ನು ಮುಚ್ಚಿಸುವಷ್ಟು ಕೆಳಹಂತಕ್ಕೆ ಹೋಗುತ್ತೀರಿ ಎಂದು ಭಾವಿಸಿರಲಿಲ್ಲ. ನಮ್ಮನ್ನು ಶೂನ್ಯಕ್ಕೆ ತಂದಿದ್ದೀರಿ, ಆದರೆ ನಾವು ಖಂಡಿತವಾಗಿಯು ಎದೆಗುಂದುದಿಲ್ಲ, ನಾವು ಮತ್ತೇ ಬೆಳೆಯುತ್ತೇವೆ” ಎಂದು ರಹಮಾನ್ ಹೇಳಿದ್ದಾರೆ.

“ನಮ್ಮ ಕಚೇರಿಗೆ ಬಂದಿದ್ದ ಸಿಸಿಬಿ ಪೊಲೀಸರು ದಾಖಲೆಗಳನ್ನು ಪಡೆದು ಕೊನೆಗೆ ಚಾನೆಲ್ ಸರ್ವರ್‌‌‌ನ್ನು ಕೂಡಾ ವಶಕ್ಕೆ ಪಡೆದರು. ನಾವು ಚಾನೆಲನ್ನು ಮುಚ್ಚಿಸಬೇಡಿ ಎಂದು ಎಷ್ಟೇ ಕೇಳಿಕೊಂಡರೂ ಸರ್ವರ್‌ ಸಿಸ್ಟಂ ಕೂಡಾ ಪಡೆದರು. ನಮಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ” ಎಂದು ರಹಮಾನ್‌ ಹೇಳಿದ್ದಾರೆ.

ಇದನ್ನೂ ಓದಿ: ಬಿಎಸ್‌ವೈಯಿಂದ ಪಕ್ಷದ ಗೌರವ ಹಾಳಾಗುತ್ತಿದೆ, ಅವರ ವಿರುದ್ದ ಕ್ರಮ ಕೈಗೊಳ್ಳಿ: ಶಂಕರ್‌ ಬಿದರಿ

ವಿಡಿಯೋ ನೋಡಿ:

ರೈತ ಹೋರಾಟಕ್ಕೆ ಬೆಂಬಲ ನೀಡಿ ವಿದ್ಯಾರ್ಥಿ ನಾಯಕ ಸರೋವರ್ ಬೆಂಕಿಕೆರೆಯ ಕಿಡಿನುಡಿ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial