ಕಲ್ಲಿದ್ದಲು ಕೊರತೆ ತೀವ್ರಗೊಳ್ಳುತ್ತಿರುವ ಬಿಕ್ಕಟ್ಟಿನ ಮಧ್ಯೆ, ಮೆಟ್ರೋ ರೈಲುಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ದೆಹಲಿಯ ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಲ್ಲಿ ಹಿನ್ನಡೆ ಸಂಭವಿಸುವ ಸಾಧ್ಯತೆ ಇದೆ ಎಂದು ದೆಹಲಿ ಸರ್ಕಾರ ಎಚ್ಚರಿಕೆ ನೀಡಿದೆ.
ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಸಭೆ ನಡೆಸಿದ್ದು, ರಾಷ್ಟ್ರದ ರಾಜಧಾನಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದಾದ್ರಿ-II ಮತ್ತು ಉಂಚಹಾರ್ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಿಂದಾಗಿ, ದೆಹಲಿ ಮೆಟ್ರೋ ಮತ್ತು ದೆಹಲಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಅನೇಕ ಅತ್ಯಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಹುದು” ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: BJP ನಾಯಕರು ಕನ್ನಡ ಧಿಕ್ಕರಿಸಿ ಹಿಂದಿಯನ್ನು ಮೆರೆಸುತ್ತಿರುವುದು ‘ಸಾಂಸ್ಕೃತಿಕ ಭಯೋತ್ಪಾದನೆ’: ಸಿದ್ದರಾಮಯ್ಯ ಆಕ್ರೋಶ
ಪ್ರಸ್ತುತ, ದೆಹಲಿಯ ವಿದ್ಯುತ್ ಬೇಡಿಕೆಯ 25% ದಿಂದ 30% ದಷ್ಟು ಈ ವಿದ್ಯುತ್ ಕೇಂದ್ರಗಳ ಮೂಲಕ ಪೂರೈಸಲಾಗುತ್ತಿದೆ. ಅಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿದೆ ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಜನರು ವಿದ್ಯುತ್ ಕಡಿತವನ್ನು ಎದುರಿಸದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
“ಈ ವಿದ್ಯುತ್ ಕೇಂದ್ರಗಳು ದೆಹಲಿಯ ಕೆಲವು ಭಾಗಗಳಲ್ಲಿ ಬ್ಲ್ಯಾಕ್‌ಔಟ್‌ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮುಂಬರುವ ಬೇಸಿಗೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮ, ಆಸ್ಪತ್ರೆಗಳು ಮತ್ತು ಜನರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈ ಕೇಂದ್ರ ಅತ್ಯಗತ್ಯ” ಎಂದು ಸಚಿವರು ಹೇಳಿದ್ದಾರೆ.
ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ನ ದಾದ್ರಿ-II ಮತ್ತು ಝಜ್ಜರ್ (ಅರಾವಲಿ) ಅನ್ನು ಪ್ರಾಥಮಿಕವಾಗಿ ದೆಹಲಿಗೆ ಬೇಕಾಗಿರುವ ವಿದ್ಯುತ್ ಅನ್ನು ಪೂರೈಸಲು ಸ್ಥಾಪಿಸಲಾಯಿತು. ಆದರೆ ಈ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ದಾಸ್ತಾನು ಬಹಳ ಕಡಿಮೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹಿಂದಿ ರಾಷ್ಟ್ರೀಯ ಭಾಷೆ ಎಂದ ಅಜಯ್ ದೇವಗನ್‌ಗೆ ಕನ್ನಡ ಕಲಾವಿದರ ಖಡಕ್ ಪ್ರತಿಕ್ರಿಯೆ
ದಾದ್ರಿ-II, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಮತ್ತು ಝಜ್ಜರ್ ವಿದ್ಯುತ್ ಸ್ಥಾವರಗಳು ದೆಹಲಿಗೆ ದಿನಕ್ಕೆ 1,751 ಮೆಗಾವ್ಯಾಟ್ (MW) ವಿದ್ಯುತ್ ಪೂರೈಸುತ್ತವೆ. ದಾದ್ರಿ-II ವಿದ್ಯುತ್ ಕೇಂದ್ರದಿಂದ ಗರಿಷ್ಠ 728 ಮೆಗಾವ್ಯಾಟ್ ಪೂರೈಕೆಯನ್ನು ದೆಹಲಿ ಪಡೆಯುತ್ತಿದ್ದು, ಉಂಚಹಾರ್ ಕೇಂದ್ರದಿಂದ 100 ಮೆಗಾವ್ಯಾಟ್ ಪಡೆಯುತ್ತದೆ.
ನ್ಯಾಷನಲ್ ಪವರ್ ಪೋರ್ಟಲ್‌ನ ದೈನಂದಿನ ಕಲ್ಲಿದ್ದಲು ವರದಿಯ ಪ್ರಕಾರ, ಈ ಎಲ್ಲಾ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ.
ಸುಡು ಬೇಸಿಗೆಯ ನಡುವೆ, ವಿದ್ಯುತ್‌ಗಾಗಿ ದಾಖಲೆಯ ಬೇಡಿಕೆಯನ್ನು ನಿರ್ವಹಿಸಲು ರಾಜ್ಯಗಳು ಹೆಣಗಾಡುತ್ತಿವೆ. ಈಗಾಗಲೆ ದೇಶದ ಹಲವು ಭಾಗಗಳಲ್ಲಿ ಬ್ಲ್ಯಾಕ್‌ಔಟ್(ಕರೆಂಟ್ ಕಟ್)ಗಳನ್ನು ಮಾಡಲಾಗುತ್ತಿದೆ.
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವ ಕ್ರಮಗಳ ಜೊತೆಗೆ, ದಾಸ್ತಾನುಗಳನ್ನು ನಿರ್ಮಿಸಲು ಬೇಕಾಗಿ ಮುಂದಿನ ಮೂರು ವರ್ಷಗಳವರೆಗೆ ಕಲ್ಲಿದ್ದಲಿನ ಆಮದುಗಳನ್ನು ಹೆಚ್ಚಿಸಲು ಒಕ್ಕೂಟ ಸರ್ಕಾರವು ರಾಜ್ಯಗಳನ್ನು ಕೇಳಿದೆ.
ಇದನ್ನೂ ಓದಿ: ಪಿಎಸ್‌ಐ ಹಗರಣದ ಕಿಂಗ್ ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ
ದೇಶಾದ್ಯಂತ ಉಷ್ಣ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ. ಇದು ದೇಶದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಸೂಚಿಸುತ್ತದೆ ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಶನ್ ಹೇಳಿದೆ.


