ನವೆಂಬರ್ 17 ರಿಂದ ಕಾಲೇಜುಗಳು ಮರು ಪ್ರಾರಂಭವಾಗುತ್ತದೆ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ ಹೊರಡಿಸಿರುವ ಆದೇಶ ಹಾಗೂ ನಿಬಂಧನೆಗಳು ಶಿಕ್ಷಕರು, ಆಡಳಿತ ಮಂಡಳಿ ಸೇರಿದಂತೆ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡಿದೆ.
ಸರ್ಕಾರವು ಕಾಲೇಜುಗಳಲ್ಲಿ ಹಾಜರಿ ಕಡ್ಡಾಯವಿಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿ ಆರಂಭಿಸಿ ಎಂದು ಹೇಳಿದ್ದು, ಜೊತೆಗೆ ಹಾಜರಾಗದವರಿಗೆ ಆನ್‌ಲೈನ್ ಪಾಠ ಮುಂದುವರಿಸುಂತೆಯೂ ಸೂಚಿಸಿದೆ. ಇದು ಬೋಧಕರನ್ನು ತೀವ್ರ ಗೊಂದಲಕ್ಕೀಡುಮಾಡಿದೆ. ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಲ್ಲದೇ ಆನ್‌ಲೈನಿನಲ್ಲಿ ಮತ್ತೆ ಪಾಠ ಮಾಡಬೇಕೆ ಎಂಬುದು ಅವರ ಪ್ರಶ್ನೆಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನವೆಂಬರ್ 17ರಿಂದ ಪದವಿ ಕಾಲೇಜುಗಳ ಆರಂಭ
ತರಗತಿಗಳಲ್ಲಿ ತಾವು ಹೇಳಿಕೊಡುವ ಪಾಠವನ್ನು ಆನ್‌ಲೈನ್ ಮೂಲಕ ಬಿತ್ತರಿಸುವ ವ್ಯವಸ್ಥೆ ಆಗದಿದ್ದರೆ ತಮ್ಮ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬುದು ಶಿಕ್ಷಕರ ಮಾತು.
ಇದೇ ರೀತಿ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳು ಬಾರದಿದ್ದರೆ ಅಥವಾ ಅಲ್ಪ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೂ ತರಗತಿ ಮಾಡಬೇಕಾದ ಅನಿವಾರ್ಯತೆ ಕಾಲೇಜುಗಳ ಮುಂದಿದೆ. ಇದು ಆಡಳಿತ ಮಂಡಳಿಗಳಿಗೆ ತಲೆನೋವಿನ ವಿಚಾರವಾಗಿದೆ.
ಇನ್ನು ವಿದ್ಯಾರ್ಥಿಗಳಲ್ಲಿ ಸಹ ಕೆಲವೊಂದು ಅನುಮಾನಗಳು ಮೂಡಿದ್ದು, ತರಗತಿಯಲ್ಲಿ ಹೇಳಿಕೊಡುವ ಪಾಠಕ್ಕೂ ಆನ್‌ಲೈನ್‌ನಲ್ಲಿ ಹೇಳಿಕೊಡುವುದಕ್ಕೂ ವ್ಯತ್ಯಾಸ ಉಂಟಾದರೇ ಕಷ್ಟ ಎಂಬುದು ಅವರ ಅಳಲಾಗಿದೆ.
ನಾಲ್ಕು ಜನರನ್ನು ಸೇರಿಸಿಕೊಂಡು ಸಭೆ ಮಾಡಿ ಕಾಲೇಜು ಪುನಾರಂಭದ ಘೋಷಣೆ ಮಾಡುವ ಸರಕಾರ ಈ ವಿಷಯಗಳ ಬಗ್ಗೆ ಯಾವುದೇ ಸ್ಪಷ್ಟತೆ ನೀಡದೇ ಇರುವುದು ಶಿಕ್ಷಣವನ್ನು ಅದು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಶಿಕ್ಷಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ: 2017 ರ ನಂತರದ ಎಲ್ಲಾ ಮಾಸಿಕ ವರದಿಯನ್ನು ತೆಗೆದು ಹಾಕಿದ ರಕ್ಷಣಾ ಸಚಿವಾಲಯ!


