ಇಂದು (ಬುಧವಾರ) ಪ್ರಾರಂಭವಾಗುವ ಕಮಾಂಡರ್ಸ್ ಸಮಾವೇಶದಲ್ಲಿ ಚೀನಾದ ಆಕ್ರಮಣಶೀಲತೆಯ ಕುರಿತು ಚರ್ಚಿಸಲು ಸೇನಾ ಮುಖ್ಯಸ್ಥರು ಮುಂದಾಗಿದ್ದಾರೆ. ಕಮಾಂಡರ್ಸ್ ಸಮಾವೇಶದ ಅಧ್ಯಕ್ಷತೆಯನ್ನು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ವಹಿಸುತ್ತಿದ್ದಾರೆ.
ಸಭೆಯು ಮೂರು ದಿನ ನಡೆಯಲಿದ್ದು, ಸೇನೆಯ ಉನ್ನತ ಅಧಿಕಾರಿಗಳು ಇತರ ಅಂಶಗಳೊಂದಿಗೆ ಭದ್ರತಾ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಲಡಾಖ್‌ನಲ್ಲಿ ಚೀನಾವೂ ಗಡಿಯೊಳಗೆ ನುಸುಳುತ್ತಿರುವ ಕುರಿತು ಭಾರತದ ನಿಲುವುಗಳನ್ನು ಚರ್ಚಿಸುವ ಸಾಧ್ಯತೆಯಿದೆ.
ಚೀನಾದ ಸೈನ್ಯದ ಬಲಕ್ಕೆ ಸರಿಹೊಂದುವಂತೆ ಭಾರತೀಯ ಸೇನೆ ಕೂಡಾ ತನ್ನ ಸೈನ್ಯದ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವ ಸಮಯದಲ್ಲೇ ಸಭೆ ನಡೆಯುತ್ತಿದೆ. ಸೇನೆಯೂ ಲಡಾಖ್ ಸೆಕ್ಟರ್‌ನ ವಿವಿಧ ಸ್ಥಳಗಳಲ್ಲಿ ತನ್ನ 5,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಲೈನ್ ಆಫ್ ಕಂಟ್ರೋಲ್‌ನಲ್ಲಿ ನಿಯೋಜಿಸಿದೆ.
ಭಾರತೀಯ ಭೂಪ್ರದೇಶದ ಯಾವುದೇ ಬದಲಾವಣೆಗೆ ಅವಕಾಶ ನೀಡಬಾರದು ಹಾಗೂ ಚೀನಾದ ಸವಾಲನ್ನು “ಶಕ್ತಿ ಮತ್ತು ಸಂಯಮ” ದಿಂದ ಎದುರಿಸುವ ಉದ್ದೇಶದಿಂದ ಸೈನ್ಯದ ಚಲನೆಯನ್ನು ಮಾಡಲಾಗಿದೆ” ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿವೆ.
ಲೈನ್ ಆಫ್ ಕಂಟ್ರೋಲ್ ರೇಖೆಯ ಉದ್ದಕ್ಕೂ ಪರಿಸ್ಥಿತಿಯನ್ನು ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆಯನ್ನು ನಡೆಸಿದರು. ಇಲ್ಲಿ ಲಡಾಖ್‌ನ ಪರಿಸ್ಥಿತಿಯನ್ನು ನಿಭಾಯಿಸಲು ಸೈನ್ಯದ ಒಳಗಿನ ವಿಷಯಗಳು ಹಾಗೂ ಸಲಹೆಗಳ ಕುರಿತು ಜನರಲ್ ಬಿಪಿನ್ ರಾವತ್ ಪ್ರಧಾನಿ ಮೋದಿಗೆ ವಿವರಿಸಿದರು.
ಭಾರತೀಯ ಮತ್ತು ಚೀನಾದ ಸೈನಿಕರು ಲೈನ್ ಆಫ್ ಕಂಟ್ರೋಲ್ ರೇಖೆಯ ನಾಲ್ಕು ಸ್ಥಳಗಳಲ್ಲಿ ಮುಖಾಮುಖಿಯಾಗಿದ್ದರು. ಮೂರು ವಾರಗಳ ಹಿಂದೆ ಪಾಂಗೊಂಗ್ ಸರೋವರದ ಬಳಿ ಹಿಂಸಾತ್ಮಕ ಘರ್ಷಣೆ ಪ್ರಾರಂಭವಾಗಿತ್ತು.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಮೂವರು ಸೇವಾ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಲಡಾಖ್ ವಲಯದ ಪರಿಸ್ಥಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಪರಿಶೀಲಿಸಿದ್ದರು.
ಓದಿ: ಲಡಾಕ್ ಬಳಿ ವಾಯುನೆಲೆ ವಿಸ್ತರಿಸಿ ಯುದ್ದ ವಿಮಾನಗಳನ್ನು ಸಜ್ಜುಗೊಳಿಸಿರುವ ಚೀನಾ


