ಕೋಮು ದ್ವೇಷ ಭಾಷಣ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ಗುರುವಾರ (ಮೇ.22) ಮಧ್ಯಂತರ ತಡೆ ನೀಡಿದೆ ಎಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಭಟ್ರಬೈಲಿನ ದೇವರಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ (ಮೇ 3ರಂದು) ಹರೀಶ್ ಪೂಂಜಾ ಸ್ಥಳೀಯ ಬ್ಯಾರಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 196 ಮತ್ತು 353 (2) ರ ಅಡಿಯಲ್ಲಿ ಮೇ 4ರಂದು ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ರಜಾ ಕಾಲದ ಪೀಠ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ ಎಂದು ವರದಿಗಳು ಹೇಳಿವೆ.
“ಅರ್ಜಿದಾರರ (ಹರೀಶ್ ಪೂಂಜಾ) ವಿರುದ್ಧ ದಾಖಲಿಸಲಾಗಿರುವ ಇತರ ಮೂರು ಎಫ್‌ಐಆರ್‌ಗಳಿಗೆ ಈ ನ್ಯಾಯಾಲಯದ ಸಮನ್ವಯ ಪೀಠ ನೀಡಿರುವ ತಡೆಯಾಜ್ಞೆಯನ್ನು ಪರಿಗಣಿಸಿ, ಅವರು ಮನವಿ ಮಾಡಿದಂತೆ ಮುಂದಿನ ವಿಚಾರಣೆಯ ದಿನಾಂಕ ಜೂನ್ 18ರವರೆಗೆ ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡುವುದು ಸೂಕ್ತವಾಗಿದೆ” ಎಂಬುವುದಾಗಿ ನ್ಯಾಯಾಲಯ ಹೇಳಿದೆ ಎಂದು livelaw.in ವರದಿ ಮಾಡಿದೆ.
ಆಪಾದಿತ ಹೇಳಿಕೆಗಳನ್ನು ನೀಡಿದ ನಂತರ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅರ್ಜಿದಾರರ (ಹರೀಶ್ ಪೂಂಜಾ) ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಅದಲ್ಲದೆ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಅಪರಾಧಗಳನ್ನು ದೃಢೀಕರಿಸಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದಿದ್ದಾರೆ.
ಪೊಲೀಸರು ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಸಿರುವುದರಿಂದ ಎಫ್‌ಐಆರ್ ರದ್ದತಿ ಕೋರಿರುವ ಹರೀಶ್ ಪೂಂಜಾ ಅರ್ಜಿಯು ಸಮರ್ಥನೀಯವಲ್ಲ. ಆದ್ದರಿಂದ ಅರ್ಜಿಯನ್ನು ತಿದ್ದುಪಡಿ ಮಾಡಬೇಕು ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದಾರೆ.
ಕೋಮು ದ್ವೇಷ ಭಾಷಣ ಮಾಡಿದ ಪ್ರದೇಶದಲ್ಲಿ ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರು ದೇವಸ್ಥಾನದ ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ. ಕಾರ್ಯಕ್ರಮಕ್ಕೆ ಶಾಮಿಯಾನ ಹಾಕಲೂ ಅಲ್ಪಸಂಖ್ಯಾತ ಸಮುದಾಯದ ಜನರು ಜಾಗ ನೀಡಿದ್ದಾರೆ. ಈ ಮೂಲಕ ಸೌಹಾರ್ದತೆಯಿಂದ ನಡೆದುಕೊಂಡಿದ್ದಾರೆ. ಅರ್ಜಿದಾರರು (ಹರೀಶ್ ಪೂಂಜಾ) ಬಂದು ಅಲ್ಲಿ ದ್ವೇಷ ಭಾಷಣ ಮಾಡುವುದರಿಂದ ಜನರನ್ನು ಪ್ರಚೋದಿಸಿದಂತಾಗುತ್ತದೆ ಎಂದ ಸರ್ಕಾರದ ಪರ ವಕೀಲರು, ಇಂತಹ ಘಟನೆಗಳಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲು ನ್ಯಾಯಾಲಯಗಳಿಗೆ ಸೂಚಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ.
ಹರೀಶ್ ಪೂಂಜಾ ದ್ವೇಷ ಭಾಷಣವನ್ನು ಉಲ್ಲೇಖಿಸಿದ ದೂರುದಾರರ ಪರ ವಕೀಲರು “ನಮ್ಮದು ಸಂವಿಧಾನ ಆಧಾರಿತ ದೇಶವೇ ಹೊರತು, ಧರ್ಮಾರ್ಧಾರಿತ ದೇಶವಲ್ಲ. ಆದ್ದರಿಂದ ಇಂತಹ ಮನೋಭಾವದ ಕುರಿತು ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಿ. ಪ್ರಕರಣದ ವಿಚಾರಣೆ ನಡೆಯಲಿ. ಆರೋಪಪಟ್ಟಿ ಸಲ್ಲಿಸಲಾಗಿರುವುದರಿಂದ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಾಕಷ್ಟು ಪುರಾವೆಗಳಿವೆ” ಎಂದು ವಾದಿಸಿದ್ದಾರೆ.
ಸೌಜನ್ಯ: livelaw.in
ಮಂಗಳೂರು| ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಬಿಜೆಪಿ ಶಾಸಕ ಹರೀಶ್ ಪೂಂಜಾ: ಸ್ಥಳೀಯ ಬ್ಯಾರಿ ಸಮುದಾಯದ ನಿಂದನೆ