ಬಿಜೆಪಿಯ ಯುವ ಘಟಕದ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ರಾಜಕೀಯ ಜೀವನವನ್ನು ವೃದ್ಧಿಸಿಕೊಳ್ಳಲು ಕೋಮು ಕೇಂದ್ರಿತ ಭಾಷಣಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಅವರ ಕೆಲವು ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪಕ್ಷದ ನಾಯಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅವರು ಉಡುಪಿಯ ಕೃಷ್ಣ ಮಠದಲ್ಲಿ ನಡೆದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಮಾತನಾಡುತ್ತಾ, “ಎಲ್ಲ ಮಠ ಮಂದಿರಗಳು ವರ್ಷಕ್ಕೆ ಗುರಿಯನ್ನು ನಿಗದಿ ಪಡಿಸಿ ಬೇರೆ ಧರ್ಮದವರನ್ನು ವಾಪಾಸ್ಸು ಹಿಂದೂ ಧರ್ಮಕ್ಕೆ ಕರೆತರಬೇಕು. ಕೇವಲ ಭಾರತದಲ್ಲಿರುವ ಮುಸ್ಲಿಮರನ್ನು ಮಾತ್ರವಲ್ಲ ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಕೂಡ ಹಿಂದುಗಳಾಗಿ ಪರಿವರ್ತನೆ ಮಾಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ನಂತರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಭಾರಿ ವಿವಾದ ಸೃಷ್ಟಿಯಾಗಿತ್ತು. ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ತೇಜಸ್ವಿ ಸೂರ್ಯ, “ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುತ್ಥಾನ’ ಎಂಬ ವಿಷಯದ ಕುರಿತು ಮಾತನಾಡಿದ್ದೆ. ತಪ್ಪಿಸಬಹುದಾಗಿದ್ದ ವಿವಾದವನ್ನು ಉಂಟುಮಾಡಿದ ನನ್ನ ಭಾಷಣದ ಕೆಲವು ಹೇಳಿಕೆಗಳಿಗಾಗಿ ವಿಷಾದಿಸುತ್ತೇನೆ. ಹಾಗಾಗಿ ಈ ಹೇಳಿಕೆಗಳನ್ನು ಬೇಷರತ್ತಾಗಿ ಹಿಂಪಡೆಯುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
ಮುಂಬರುವ ಗೋವಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಹಿಂದೂ-ಕ್ರಿಶ್ಚಿಯನ್ ಮತಗಳ ಬಲವರ್ಧನೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ತೇಜಸ್ವಿ ಸೂರ್ಯ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿರುವ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಸೂರ್ಯ ಅವರು ತಮ್ಮ ಹಲವು ಕೋಮುವಾದಿ ಹೇಳಿಕೆಗಳಿಂದ ಬಿಜೆಪಿ ನಾಯಕರು ಮೌನವಹಿಸಿದ್ದರೂ ಇತ್ತೀಚೆಗೆ ಉಡುಪಿ ಮಠದಲ್ಲಿ ಅವರು ನೀಡಿದ್ದ ಹೇಳಿಕೆಗೆ ಸಮ್ಮತಿ ಸೂಚಿಸಿಲ್ಲ.
“ನಮ್ಮ ಪಕ್ಷವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಪ್ರತಿಪಾದಿಸುತ್ತದೆ. ಪೇಜಾವರ ಮಠದಲ್ಲಿ ಅವರು ಹೇಳಿಕೆ ನೀಡಿದ್ದರು. ಸ್ವಾಮೀಜಿ ಹಿಂದೂ ಧರ್ಮದ ಪರವಾಗಿ ನಿಂತಿದ್ದರೂ, ಈ ಮಠವು ಎಲ್ಲರನ್ನೂ ಒಳಗೊಳ್ಳುವ ಸ್ವಭಾವ ಹೊಂದಿದೆ. ಮಠದ ವೇದಿಕೆಯನ್ನು ಬಳಸಿಕೊಂಡು ಹೇಳಿಕೆ ನೀಡಿದ್ದಕ್ಕೆ ಮಠದಲ್ಲಿಯೂ ಅಸಮಾಧಾನ ವ್ಯಕ್ತವಾಗಿದೆ ಎಂಬ ಭಾವನೆ ರಾಜ್ಯ ಬಿಜೆಪಿ ನಾಯಕರಲ್ಲಿದೆ” ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಸೂರ್ಯ ಅವರ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಲ್ಲಿ ಕೇಳಿದಾಗ, “ಇದಕ್ಕೆ ನನ್ನ ಯಾವುದೇ ಪ್ರತಿಕ್ರಿಯೆಗಳಿಲ್ಲ. ಸೂರ್ಯ ನಮ್ಮ ಪಕ್ಷದ ನಾಯಕ ಮತ್ತು ಅಂತಹ ಯಾವುದೇ ಸಮಸ್ಯೆ ಇದ್ದಾಗ, ನಾನು ನೇರವಾಗಿ ಅವರೊಂದಿಗೆ ಮಾತನಾಡುತ್ತೇನೆ, ಮಾಧ್ಯಮಗಳೊಂದಿಗೆ ಅಲ್ಲ” ಎಂದು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರ ನಿಕಟವರ್ತಿ ಎಂದೇ ಗುರುತಿಸಲಾಗಿರುವ ಸೂರ್ಯ ಅವರು ತಮ್ಮ ಕಾರ್ಯವೈಖರಿಯಿಂದ ಹಲವಾರು ರಾಜ್ಯ ನಾಯಕರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ರಾಜ್ಯ ನಾಯಕರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂಬಂತೆ ವರ್ತಿಸುತ್ತಾರೆ ಎಂದು ಕರ್ನಾಟಕ ಬಿಜೆಪಿ ನಾಯಕರೊಬ್ಬರು ಟೀಕಿಸಿದ್ದಾರೆ.
ಇದನ್ನೂ ಓದಿರಿ: ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ


