ದುರ್ಗಾ ಮೂರ್ತಿ ಮೆರವಣಿಗೆ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಬೈಕ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ, ಕೋಮು ಉದ್ವಿಗ್ನತೆ ಹೆಚ್ಚಾಗುವುದನ್ನು ತಡೆಯಲು ಅಧಿಕಾರಿಗಳು ಭಾನುವಾರ (ಅ. 5) ರಾತ್ರಿಯಿಂದ ಒಡಿಶಾದ ಕಟಕ್ ನಗರದ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 36 ಗಂಟೆಗಳ ಕರ್ಫ್ಯೂ ವಿಧಿಸಿದ್ದಾರೆ.
ಹಿಂಸಾಚಾರದ ಘಟನೆಗಳಲ್ಲಿ 25 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ವಿಎಚ್‌ಪಿ ಸೋಮವಾರ (ಅ.6)12 ಗಂಟೆಗಳ ಬಂದ್‌ಗೆ ಕರೆ ನೀಡಿದೆ ಎಂದು ವರದಿಯಾಗಿದೆ.
“ಶುಕ್ರವಾರ (ಅ. 3) ಸಂಜೆ ದುರ್ಗಾ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳ ನಡುವೆ ವೈಯಕ್ತಿಕ ಜಗಳ ನಡೆದಿತ್ತು. ನಂತರ, ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿ ಶನಿವಾರ (ಅ. 4) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ” ಎಂದು ಭಾನುವಾರ (ಅ. 5) ಸಂಜೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪೊಲೀಸ್ ಆಯುಕ್ತ ಎಸ್. ದೇವ್ ದತ್ತ ಸಿಂಗ್ ಹೇಳಿದ್ದಾರೆ.
“ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಬಗ್ಗೆ ಆತಂಕ ಇದ್ದಿದ್ದರಿಂದ ವಿಎಚ್‌ಪಿ ಭಾನುವಾರ ಕಟಕ್‌ನಲ್ಲಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಅನುಮತಿ ನೀಡಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ.
“ಪೊಲೀಸರು ರ‍್ಯಾಲಿಯನ್ನು ತಡೆಯಲು ಪ್ರಯತ್ನಿಸಿದಾಗ ಉದ್ವಿಗ್ನತೆ ಉಂಟಾಯಿತು. ರ‍್ಯಾಲಿಯು ಕೆಲವು ಸೂಕ್ಷ್ಮ ಪ್ರದೇಶಗಳ ಕಡೆಗೆ ಸಾಗುತ್ತಿತ್ತು, ಅಲ್ಲಿ ಕೋಮು ಉದ್ವಿಗ್ನತೆ ಭುಗಿಲೇಳಬಹುದು ಎಂದು ಪೊಲೀಸರು ದೃಢವಾದ ನಿಲುವನ್ನು ತೆಗೆದುಕೊಂಡು ರ‍್ಯಾಲಿ ಮುಂದೆ ಹೋಗದಂತೆ ತಡೆದರು. ಈ ವೇಳೆ ರ‍್ಯಾಲಿಯಲ್ಲಿದ್ದವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಇದರಿಂದ ಇಪ್ಪತ್ತೈದು ಸಿಬ್ಬಂದಿ ಗಾಯಗೊಂಡರು, ಅವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ” ಎಂದು ದೇವ್ ದತ್ತ ಸಿಂಗ್ ವಿವರಿಸಿದ್ದಾರೆ.
“ದುಷ್ಕರ್ಮಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ರಬ್ಬರ್ ಗುಂಡುಗಳನ್ನು ಹಾರಿಸಿದರು. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ” ಎಂದು ಅವರು ಹೇಳಿದ್ದಾರೆ.
ಅಗತ್ಯ ಸೇವೆಗಳಿಗೆ ವಿನಾಯಿತಿ
ಭಾನುವಾರ ರಾತ್ರಿ 10 ಗಂಟೆಯಿಂದ 36 ಗಂಟೆಗಳ ಕಾಲ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಪೊಲೀಸ್ ಆಯುಕ್ತರು ಘೋಷಿಸಿದ್ದಾರೆ. ಆರೋಗ್ಯ ಸೇವೆ, ಹಾಲು, ತರಕಾರಿ ಪೂರೈಕೆ, ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರ ಸಂಚಾರ ಸೇರಿದಂತೆ ಅಗತ್ಯ ಸೇವೆಗಳಿವೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವೈ.ಬಿ. ಖುರಾನಿಯಾ ಎಚ್ಚರಿಸಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಸೂಕ್ತ ನಿಬಂಧನೆಗಳಡಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಹಿಂಸಾಚಾರದ ಹಿನ್ನೆಲೆ ಒಡಿಶಾ ಸರ್ಕಾರ ಕಟಕ್‌ನಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ವಿಎಚ್‌ಪಿ ಸೋಮವಾರ ಮುಂಜಾನೆಯಿಂದ ಸಂಜೆಯವರೆಗೆ ಬಂದ್‌ಗೆ ಕರೆ ನೀಡಿದೆ.
ಶಾಂತಿ ಕಾಪಾಡಲು ಸಿಎಂ ಮನವಿ
ಕಟಕ್‌ನ ವಿಶಿಷ್ಟವಾದ ಸಹೋದರತ್ವದ ಗುರುತನ್ನು ರಕ್ಷಿಸಲು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಮೋಹನ್ ಮಾಝಿ ಜನರಿಗೆ ಮನವಿ ಮಾಡಿದ್ದಾರೆ.
“ಕಟಕ್ ಸಾವಿರ ವರ್ಷಗಳಷ್ಟು ಹಳೆಯದಾದ ನಗರ, ಸಹೋದರತ್ವ ಮತ್ತು ಕೋಮು ಸೌಹಾರ್ದತೆಯ ವಿಶಿಷ್ಟ ಸಂಕೇತ. ಇತ್ತೀಚಿನ ದಿನಗಳಲ್ಲಿ ಕೆಲವು ದುಷ್ಕರ್ಮಿಗಳ ಕೃತ್ಯಗಳಿಂದಾಗಿ ನಗರದಲ್ಲಿ ಶಾಂತಿ ಭಂಗವಾಗಿದ್ದು, ಸಾಮಾನ್ಯ ನಾಗರಿಕರ ಜೀವನಕ್ಕೆ ಸಮಸ್ಯೆ ಉಂಟಾಗಿದೆ. ಸರ್ಕಾರವು ಇಂತಹ ಕಿಡಿಗೇಡಿಗಳ ಮೇಲೆ ನಿಗಾ ಇಡುತ್ತಿದೆ ಮತ್ತು ಕಾನೂನಿನ ಪ್ರಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಮಾಝಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಕಟಕ್ ನಗರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಇತ್ತೀಚೆಗೆ ಉದ್ವಿಗ್ನತೆ ಉಂಟಾಗಿ ಹಿಂಸಾತ್ಮಕ ಘಟನೆಗಳು ನಡೆದ ನಂತರ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವ ಮೂಲಕ ಕೋಮು ಹಿಂಸಾಚಾರವನ್ನು ಹರಡಲು ಇಂಟರ್ನೆಟ್ ದುರುಪಯೋಗದ ಬಗ್ಗೆ ಜಿಲ್ಲಾಡಳಿತವು ಕಳವಳ ವ್ಯಕ್ತಪಡಿಸಿದೆ” ಎಂದು ರಾಜ್ಯ ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಲಡಾಖ್ ಹತ್ಯೆಗಳ ಕುರಿತು ನ್ಯಾಯಾಂಗ ತನಿಖೆ ನಡೆಯುವವರೆಗೂ ಜೈಲಿನಲ್ಲಿರಲು ಸಿದ್ಧ: ಸೋನಮ್ ವಾಂಗ್ಚುಕ್


