ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ ಶನಿವಾರ ತ್ರಿಪುರಾದ ಉನಕೋಟಿ ಜಿಲ್ಲೆಯ ಕುಮಾರ್‌ಘಾಟ್ ಉಪವಿಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಫಾತಿಕ್ರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಸೈದರ್ಪರ್‌ನಲ್ಲಿ ಯುವಕರ ಗುಂಪೊಂದು ಮರ ತುಂಬಿದ ವಾಹನವನ್ನು ತಡೆದು ಶಿವ ದೇವಾಲಯಕ್ಕೆ ಚಂದಾ ನೀಡುವಂತೆ ಒತ್ತಾಯಿಸಿದ್ದು, ಇದು ಘರ್ಷಣೆ ಉಂಟಾಗಲು ಮೂಲ ಕಾರಣವಾಗಿದೆ.
ವಾಹನದ ಚಾಲಕ ಮರದ ವ್ಯಾಪಾರಿ ಮಸಬ್ಬೀರ್ ಅಲಿ ನಾನು ಈಗಾಗಲೇ ಚಂದಾ ನೀಡಿದ್ದೇನೆ ಎಂದು ಹೇಳಿದ್ದಾರೆ. ಯುವಕ ಗುಂಪು ಈ ವೇಳೆ ವಾಗ್ವಾದ ಪ್ರಾರಂಭಿಸಿದೆ. ಅದು ಶೀಘ್ರದಲ್ಲೇ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಯುವಕರು ಅಲಿ ಮತ್ತು ವಾಹನದಲ್ಲಿದ್ದ ಇನ್ನೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರಿಬ್ಬರು ಗಾಯಗೊಂಡಿದ್ದಾರೆ.
ಸುದ್ದಿ ಹರಡುತ್ತಿದ್ದಂತೆ, ಇನ್ನೊಂದು ಸಮುದಾಯದ ಯುವಕರ ಗುಂಪೊಂದು ಸ್ಥಳಕ್ಕೆ ಆಗಮಿಸಿದೆ. ಈ ವೇಳೆ ಎರಡೂ ಕಡೆಯವರ ನಡುವೆ ಘರ್ಷಣೆ ಭುಗಿಲೆದ್ದಿದೆ. ಉದ್ರಿಕ್ತರು ಮಸಬ್ಬೀರ್‌ನ ಮರದ ಅಂಗಡಿಗೆ ಬೆಂಕಿ ಹಚ್ಚಿದ್ದು, ಬೆಂಕಿ ಹತ್ತಿರದ ಮೂರು ಮನೆಗಳು ಮತ್ತು ಸ್ಥಳೀಯ ಮಸೀದಿಯನ್ನು ಆವರಿಸಿದೆ. ಮಾಹಿತಿ ತಿಳಿದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ), ಹೆಚ್ಚುವರಿ ಪೊಲೀಸ್ ಪಡೆಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಎರಡೂ ಗುಂಪುಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
“ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಅಸ್ಸಾಂ ರೈಫಲ್ಸ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ತ್ರಿಪುರ ರಾಜ್ಯ ರೈಫಲ್ಸ್ (ಟಿಎಸ್‌ಆರ್) ನಂತಹ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಕುಮಾರ್‌ಘಾಟ್ ಉಪವಿಭಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ಮುಂದಿನ 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ಉನಕೋಟಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಮಲ್ ಮಜುಂದರ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಸುಮಾರು ಎಂಟು ಜನರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಮಜುಂದರ್ ಹೇಳಿದ್ದಾರೆ.
ಎರಡು ಸಮುದಾಯಗಳ ನಡುವಿನ ಘರ್ಷಣೆಯನ್ನು ಉನಕೋಟಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಬಿರಾಜಿತ್ ಸಿನ್ಹಾ ಖಂಡಿಸಿದ್ದಾರೆ.
“ದುಷ್ಕರ್ಮಿಗಳು ಮರದ ಅಂಗಡಿಗೆ ಬೆಂಕಿ ಹಚ್ಚಿ ಅಮಾಯಕರ ಮೇಲೆ ದಾಳಿ ಮಾಡಿದ್ದಲ್ಲದೆ, ಸ್ಥಳೀಯ ಮಸೀದಿಗೆ ನುಗ್ಗಿ ವ್ಯಾಪಕ ಹಾನಿ ಮಾಡಿದ್ದಾರೆ. ಘರ್ಷಣೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಘರ್ಷಣೆಯಲ್ಲಿ ಕನಿಷ್ಠ ಐದರಿಂದ ಆರು ಜನರು ಗಾಯಗೊಂಡಿದ್ದಾರೆ ಎಂದು ಸಿನ್ಹಾ ತಿಳಿಸಿದ್ದಾರೆ.


