6ನೇ ತರಗತಿ ಫೇಲ್ ಆದ ಹುಡುಗನೊಬ್ಬ 2000 ಕೋಟಿ ರೂಗಳ ಬೃಹತ್ ಕಂಪನಿ ಮಾಲೀಕನಾದುದ್ದು ಹೇಗೆ ಎಂದು ಪಾಸಿಟಿವ್ ಸ್ಟೋರಿಯೊಂದನ್ನು ಆಗಸ್ಟ್ 30 ರಂದು ಹ್ಯುಮನ್ಸ್ ಆಫ್ ಬಾಂಬೆ ಪ್ರಕಟಿಸಿತ್ತು. ಅದು ಬೆಂಗಳೂರು ಮೂಲದ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಕ ‘ಐಡಿ ಫ್ರೆಶ್ ಫುಡ್ ಕಂಪನಿ’ ಮತ್ತು ಅದರ ಸಿಇಓ ಮುಸ್ತಾಫ ಪಿ.ಸಿ ಯವರ ಸಂದರ್ಶನದ ಕುರಿತಾಗಿತ್ತು. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಮಾಧ್ಯಮಗಳು ಇದನ್ನು ವರದಿ ಮಾಡಿದ್ದವು ಮಾತ್ರವಲ್ಲದೇ ಅವು ವೈರಲ್ ಆಗಿದ್ದವು.
ಇದಾದ ಒಂದು ವಾರದಲ್ಲಿ ವಾಟ್ಸಾಪ್ ನಲ್ಲಿ ಕೋಮು ಪ್ರಚೋದಕ ಫಾರ್ವಾಡ್ ಮೆಸೇಜ್ ಒಂದು ಹರಿದಾಡತೊಡಗಿತ್ತು. ಅದರಲ್ಲಿ “ಐಡಿ ಕಂಪನಿಯು ಹಿಟ್ಟು ತಯಾರಿಸುವಾಗ ಅದರ ಪ್ರಮಾಣವನ್ನು ಹೆಚ್ಚಿಸಲು ಹಸುವಿನ ಮೂಳೆ ಮತ್ತು ಕರುವಿನ ಕರುಳನ್ನು ಬೆರೆಸಲಾಗುತ್ತಿದೆ. ಸ್ಥಾಪಕ ಮುಸ್ತಾಫ ಪಿ.ಸಿ ಮತ್ತು ಅವರ ನಾಲ್ವರು ಸಂಬಂಧಿಗಳಾದ ಅಬ್ದುಲ್ ನಜೀರ್, ಶಂಸುದ್ದೀನ್ ಟಿ.ಕೆ, ಜಾಫರ್ ಟಿ.ಕೆ ಮತ್ತು ನೌಸಾದ್ ಟಿ.ಎ ರವರು ಕೇವಲ ಮುಸ್ಲಿಮರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದ್ದಾರೆ ಮತ್ತು ಕಂಪನಿಯು ಹಲಾಲ್ ಸರ್ಟಿಫಿಕೆಟ್ ಹೊಂದಿದೆ” ಎಂದು ಪ್ರತಿಪಾದಿಸಲಾಗಿದೆ. ಜೊತೆಗೆ 2014 ರಲ್ಲಿ ಇದು 35 ಕೋಟಿ ರೂಗಳನ್ನು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದೆ. ಷರಿಯತ್ ಇಸ್ಲಾಂ ಕಾನೂನಿಗೆ ಬದ್ದವಾಗಿದೆ ಎಂದೆಲ್ಲಾ ಲಿಂಕ್‌ಗಳನ್ನು ಹಂಚಿಕೊಳ್ಳಲಾಗಿದೆ.
ಈ ಸಂದೇಶ ಹರಿದಾಡುತ್ತಿರುವುದು ಐಡಿ ಫ್ರೆಶ್ ಫುಡ್ ಕಂಪನಿಯ ಗಮನಕ್ಕೆ ಬಂದು ಅದು ಹೇಳಿಕೆ ಬಿಡುಗಡೆ ಮಾಡಿದೆ. “ಐಡಿ ಕಂಪನಿ ಹಿಟ್ಟು ತಯಾರಿಸುವಾಗ ಪ್ರಾಣಿಜನ್ಯವನ್ನು ಬಳಸುತ್ತಿದೆ ಎಂಬ ವಾಟ್ಸಾಪ್ ಸಂದೇಶವು ತಪ್ಪು, ಸುಳ್ಳು ಮಾಹಿತಿ ಮತ್ತು ಆಧಾರರಹಿತವಾಗಿದೆ. ನಾವು ಕೇವಲ ಸಸ್ಯಾಹಾರಿ ಪದಾರ್ಥಗಳನ್ನು ಮಾತ್ರ ಹಿಟ್ಟು ತಯಾರಿಸುವಲ್ಲಿ ಬಳಸುತ್ತೇವೆ. ಐಡಿ ಇಡ್ಲಿ ಮತ್ತು ದೋಸೆ ಹಿಟ್ಟಿನ್ನು ಅಕ್ಕಿ, ಉದ್ದಿನ ಬೇಳೆ, ಮೇಂತ್ಯ ಮತ್ತು ಆರ್‌ಓ ನೀರಿನಿಂದ ಮಾತ್ರ ತಯಾರಿಸುತ್ತೇವೆ. ಅದು 100% ನೈಸರ್ಗಿಕ ಮತ್ತು ಸಸ್ಯಾಹಾರಿಯಾಗಿದೆ. ಇದರಲ್ಲಿ ಯಾವುದೇ ರೀತಿಯ ಪ್ರಾಣಿಜನ್ಯವನ್ನು ನಾವು ಬಳಸುವುದಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
— iD Fresh Food (@IDFreshFood) September 6, 2021
ನಾವು ಆರೋಗ್ಯಕರ ಮತ್ತು ಅಧಿಕೃತ ಭಾರತೀಯ ಉತ್ಪನ್ನಗಳನ್ನು ಬಳಸಿ ಯಾವುದೇ ರಾಸಾಯನಿಕಗಳು ಅಥವಾ ಸಂರಕ್ಷಕಗಳಿಲ್ಲದೆ ವಿಶ್ವದರ್ಜೆಯ, ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳನ್ನು ಬಳಸಿ ಆಹಾರ ಸುರಕ್ಷತೆ ನಿರ್ವಹಣಾ ವ್ಯವಸ್ಥೆಗೆ ಅನುಗುಣವಾಗಿ ಹಿಟ್ಟನ್ನು ತಯಾರಿಸುತ್ತೇವೆ. ಹಾಗಾಗಿ ಆಧಾರರಹಿತ ಮತ್ತು ನಕಲಿ ಪ್ರಚಾರವನ್ನು ನಂಬಬಾರದು ಎಂದು ಅದು ಮನವಿ ಮಾಡಿದೆ.
ಬೆಂಗಳೂರು ಮೂಲಕ ಐಡಿ ಕಂಪನಿಯು 2005ರಲ್ಲಿ ಆರಂಭವಾಗಿದ್ದು 45 ಮಾರುಕಟ್ಟೆಗಳನ್ನು ಹೊಂದಿದ್ದು, ಖ್ಯಾತಿ ಗಳಿಸಿದೆ. ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕಂಪನಿಯು 2021ರ ಹಣಕಾಸು ವರ್ಷದಲ್ಲಿ 294 ಕೋಟಿ ರೂ ಲಾಭ ಗಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಅದು ಇತ್ತೀಚೆಗೆ ಬೆಂಗಳೂರು ಬಳಿಯ ಆನೇಕಲ್‌ನಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಬೃಹತ್ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಸುವ ಘಟಕ ಆರಂಭಿಸಿದೆ.
ಕಂಪನಿಯ ಮಾಲೀಕ ಮುಸ್ಲಿಂ ಆದ ಕಾರಣಕ್ಕೆ ಐಡಿ ಫ್ರೆಶ್ ಫುಡ್ ವಿರುದ್ಧ ವಾಟ್ಸಾಪ್‌ನಲ್ಲಿ ಅಪಪ್ರಚಾರ ಆರಂಭಿಸಲಾಗಿದೆಯೇ ಎಂಬ ಅನುಮಾನವೆದ್ದಿದೆ. ಆದರೆ ಐಡಿ ಕಂಪನಿ ಹೇಳಿಕೆ ನೀಡುವುದರ ಮೂಲಕ ಸ್ಪಷ್ಟೀಕರಣ ನೀಡಿದೆ.
ಇದನ್ನೂ ಓದಿ: ತಾಲಿಬಾನ್ ಪರ ಪಾಕ್ ಆರ್ಮಿ ದಾಳಿ ಎಂದು ವಿಡಿಯೊ ಗೇಮ್ ಕ್ಲಿಪ್ ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ


