Homeಮುಖಪುಟ`ಬಡಿದು ಕೊಲ್ಲುವ’ ಸಂಸ್ಕøತಿಗೆ ಮುಖಾಮುಖಿಯಾಗಲು ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ, ಜಾಣಜಾಣೆಯರು!

`ಬಡಿದು ಕೊಲ್ಲುವ’ ಸಂಸ್ಕøತಿಗೆ ಮುಖಾಮುಖಿಯಾಗಲು ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ, ಜಾಣಜಾಣೆಯರು!

- Advertisement -

ನಾವು ಬಲು ಜಾಣರು. ದಡ್ಡರಂತೆ ನಟಿಸುವುದೂ ನಮ್ಮ ಆ ಜಾಣತನಗಳಲ್ಲಿ ಒಂದು. ದುರಂತ ಅಂದ್ರೆ, ಸದ್ಯದ ಸಂಕಟಗಳಿಂದ ಪಾರಾಗುವ ಇಂತಹ ನಿರಂತರ ನಟನೆಯಿಂದಾಗಿ ನಮ್ಮ ಜಾಣತನದ ಮಿತಿ ಹೆಡ್ಡತನದ ಚೌಕಟ್ಟಿಗೆ ಕುಸಿದು ಕುಳಿತಿದೆ. ವಿಚಾರಗಳನ್ನು ಅವುಗಳ ಆಕೃತಿ ಮೀರಿ, ದೂರಗಣ್ಣು ನೆಟ್ಟು ಕಾಣುವ ಕಲೆಯನ್ನು ಕಳೆದುಕೊಂಡಿದ್ದೇವೆ. ಯಾರಾದರು ಹೇ, ಎಂದರೆ ಓ ಎಂದು ಓಡುವುದೇ ನಮ್ಮ ಪರಂಪರೆಯಾಗುತ್ತಿದೆ. ಟೀಕೆ, ವಿಮರ್ಶೆ, ಒಳನೋಟ, ಊಹ್ಞೂಂ… ನಮ್ಮೊಳಗೆ ಯಾವುದೂ ಉಳಿದಿಲ್ಲ.
ಮೊನ್ನೆ ಬಹಳಷ್ಟು ದಿನಪತ್ರಿಕೆಗಳ ಸಮಗ್ರ ಒಂದು ಪುಟ ಆವರಿಸಿದ್ದ ಜಾಹೀರಾತು ಹೀಗೆ ಆಲೋಚಿಸುವಂತೆ ಮಾಡಿತು. ಅಷ್ಟಕ್ಕೂ ವಾಟ್ಸ್‍ಆಪ್ ಎಂಬ ಸೋಶಿಯಲ್ ಮೀಡಿಯಾ ಕೊಟ್ಟಿದ್ದ ಜಾಹೀರಾತಲ್ಲಿ ಇದ್ದದ್ದು, ತನ್ಮೂಲಕ ಕೆಲವರು ಹರಡಿಸುತ್ತಿರುವ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಜಾಗೃತರಾಗಿ ಅಂತ ಜನರಿಗೆ ಮಾಡಿಕೊಂಡಿದ್ದ ಮನವಿ. ಲಾಭವನ್ನಷ್ಟೆ ಅಡಿಪಾಯ ಆಗಿಸಿಕೊಂಡ ಇಂಥ ಸಂಸ್ಥೆಗಳ ಕಾಳಜಿ, ಕಳಕಳಿಗಳಲ್ಲಿ ಹೆಚ್ಚೇನು ಪ್ರಾಮಾಣಿಕತೆ ಇರದು. ಇದು ಗೊತ್ತಿರುವ ಸಂಗತಿ. ಈಗ ಆ ದಿಕ್ಕಿನತ್ತ ಚರ್ಚೆ ಅನಗತ್ಯ. ಆದರೆ ಆ ಸಂಸ್ಥೆ ಹೀಗೊಂದು ಜಾಹಿರಾತು ನೀಡುವುದು ಅನಿವಾರ್ಯವಾಗುವಂತೆ ಮಾಡಿದ ಸಂದರ್ಭ ಹಾಗೂ ಅದನ್ನು ನಾವು ಗ್ರಹಿಸಿ, ಪ್ರತಿಕ್ರಿಯಿಸುತ್ತಿರುವ ರೀತಿಗಳನ್ನು ವಿಮರ್ಶೆಗೆ ಒಡ್ಡಿಕೊಳ್ಳಬೇಕಿದೆ.
ದೇಶ ಭಯಾತಂಕದ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಕಾಲಘಟ್ಟದಲ್ಲಿ ಜಾತಿ, ಧರ್ಮ, ಭಾಷೆ, ಕೊನೆಗೆ ತಿನ್ನುವ ಆಹಾರವನ್ನೂ ನೆಪ ಮಾಡಿಕೊಂಡು ಅಮಾಯಕರನ್ನು ಬಡಿದು ಕೊಲ್ಲುವುದು ಸಹಜವಾಗುತ್ತಿದೆ. ಈ ಬಗೆಯ ಉನ್ಮಾದಗಳು ಹರಡುವಲ್ಲಿ ವ್ಯಾಟ್ಸಪ್‍ನಂತಹ ಸೋಶಿಯಲ್ ಮೀಡಿಯಾಗಳ ಪಾಲು ದೊಡ್ಡದು. ಅಂತವುಗಳ ವೈಪರೀತ್ಯ ಎನ್ನುವಂತೆ ಇತ್ತೀಚೆಗೆ `ಮಕ್ಕಳ ಕಳ್ಳರು’ ಎಂಬ ಕಲ್ಪನೆಯಲ್ಲಿ ಭಿಕ್ಷುಕರನ್ನೋ, ಮಾನಸಿಕ ವಿಕಲರನ್ನೊ, ಅಲೆಮಾರಿ ಬಡಪಾಯಿಗಳನ್ನೋ ಬಡಿದು ಕೊಲ್ಲುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅವುಗಳಿಗೆ ಕಾರಣವಾದದ್ದು ವ್ಯಾಟ್ಸಪ್‍ನಲ್ಲಿ ಹರಿದಾಡಿದ್ದ ಸುಳ್ಳು ಸಂದೇಶಗಳು. ಇಂತಿಂಥ ರೂಪದಲ್ಲಿ ನಿಮ್ಮ ಮನೆಮುಂದೆ ಅಥವಾ ಊರಿನಲ್ಲಿ ಅಪರಿಚಿತರು ಸುಳಿದಾಡಿದರೆ, ಅವರು ಮಕ್ಕಳು ಕಳ್ಳರಾಗಿರುತ್ತಾರೆ, ಅವರನ್ನು ಹಿಡಿದು ತದುಕಿ, ಅದ್ಯಾವುದೊ ಊರಿನ ಜನ ಹೀಗೇ ಮಾಡಿದ್ದಾರೆ… ಹೀಗೆ ಒಂದಷ್ಟು ಸಂದೇಶಗಳು ಜನರ ಅಂಗೈಯೊಳಗೆ ಸರಿದಾಡಿದ ನಂತರವೇ ದೇಶದಲ್ಲಿ ಈ ಬಗೆಯ ಅಮಾನವೀಯ ಕೃತ್ಯಗಳು ಕಾಣಿಸಿಕೊಂಡವು.
ಆಗ ನಮ್ಮ ಮನುಷ್ಯತ್ವ ಜಾಗೃತವಾಯ್ತು. ವ್ಯಾಟ್ಸಪ್ ಮೆಸೇಜುಗಳನ್ನು ಬಳಸಿಕೊಂಡೇ ವ್ಯಾಟ್ಸಪ್ ವಿರುದ್ಧ ಅಭಿಯಾನ ಶುರು ಮಾಡಿದೆವು. ಇದರಲ್ಲಿ ಬರುವ ಸಂದೇಶಗಳೆಲ್ಲ ನಿಜವಲ್ಲ, ಸತ್ಯಾಸತ್ಯತೆಯನ್ನು ಪರೀಕ್ಷಿಸಿ, ಅಂತೆಲ್ಲ ಜಾಗೃತಿಗಳನ್ನು ವೈರಲ್ ಮಾಡಿದೆವು. ಫೇಸ್‍ಬುಕ್ ಒಡೆತನದ ಈ ವ್ಯಾಟ್ಸ್‍ಪ್ ಸಂಸ್ಥೆಗೆ ಎಲ್ಲೋ ಒಂದು ಕಡೆ ತನಗೆ ಸುಳ್ಳುಗಾರನ ಪಟ್ಟವನ್ನು ಕಟ್ಟಲಾಗುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ ಮೇಲೆ ತಿಳಿಸಿದ ಹಾಗೆ ಒಂದು ಪುಟ ಜಾಹಿರಾತು ಕೊಟ್ಟು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು.
ಆದರೆ, ಹೀಗೆ ಹಾಡುಹಗಲೇ `ಬಡಿದು ಕೊಲ್ಲುವ’ ಅಪಾಯವನ್ನು ನಾವು ಎದುರುಗೊಳ್ಳಬೇಕಿರೋದು ಈ ಶೈಲಿಯಲ್ಲಿಯೇ? ಅದನ್ನು ಅರ್ಥ ಮಾಡಿಕೊಳ್ಳೋದು ವ್ಯಾಟ್ಸಪ್ ಎಂಬ ಮಾಹಿತಿ ಮಾಧ್ಯಮದ ಮೂಲಕವೇ? ವಾಟ್ಸ್‍ಆಪ್‍ಗೆ ಅಪರಾಧದ ಹಣೆಪಟ್ಟಿ ಅಂಟಿಸಿಬಿಟ್ಟರೆ ಸಮಸ್ಯೆ ಬಗೆಹರಿದುಬಿಡುತ್ತಾ? ಮಾಧ್ಯಮಗಳು ಸಂಪೂರ್ಣವಾಗಿ ಆಳುವವರ ಕೈಗೊಂಬೆಗಳಾಗಿರುವಾಗ ಜನರ ದನಿಯಾಗುವ ಸಾಧ್ಯತೆಯನ್ನು ಉಳಿಸಿಕೊಂಡಿರುವ ಸೋಶಿಯಲ್ ಮೀಡಿಯಾಗಳನ್ನು ಹೀಗೆ ಸಾರಾಸಗಟಾಗಿ `ಅವಿಶ್ವಾಸ’ದ ಕೂಪಕ್ಕೆ ತಳ್ಳಿದರೆ, ಮುಂದಿನ ಪರಿಣಾಮ ಏನಾಗಬಹುದು? ಸುಳ್ಳುಗಳನ್ನು ಬಳಸಿಕೊಂಡು, ಜನ ಸತ್ಯವನ್ನೂ ನಂಬದಂತೆ ಮಾಡುವ ಹುನ್ನಾರವೇನಾದರು ಇದೆಯಾ?…..
ಇಂತಹ ಪ್ರಶ್ನೆಗಳನ್ನು ಮುನ್ನೆಲೆಗೆ ತೆಗೆದುಕೊಳ್ಳದೆ, ಏಕಾಏಕಿ ವ್ಯಾಟ್ಸಪ್ ಅನ್ನು ಕ್ರಿಮಿನಲೈಸ್ ಮಾಡಲು ಮುಂದಾದದ್ದು ನಮ್ಮ ಜಾಣತನ! ಯಾವ ವಿಚಾರಣೆಯೂ ಇಲ್ಲದೆ, ತಕ್ಕ ಪುರಾವೆಗಳೂ ಇಲ್ಲದೆ ಅನುಮಾನದ ಮೇಲೆ ಅಸಹಾಯಕ ಮನುಷ್ಯರ ಮೇಲೆ ಹಲ್ಲೆ ನಡೆಸುವ, ಬಡಿದು ಕೊಲ್ಲುವ ದೃಶ್ಯಗಳು ನಮ್ಮ ಕಣ್ಣಿಗೆ ಬಿದ್ದಾಗ ನಾವು ಮೊದಲು ಆಲೋಚಿಸಬೇಕಾದ್ದು ಆ ದೃಶ್ಯಗಳನ್ನು ಬಿತ್ತರಿಸಿದ, ಅಥವಾ ಅದಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಮಾಧ್ಯಮದ ಅಪರಾಧದ ಕುರಿತಲ್ಲ, ಅಂತಹ ಕೃತ್ಯಗಳನ್ನು ತಡೆಗಟ್ಟಲು ಸೋಲುತ್ತಿರುವ ಸರ್ಕಾರ, ಪೊಲೀಸರು ಮತ್ತು ನಮ್ಮ ಕಾನೂನು ತಿದ್ದುಪಡಿಗಳ ಬಗ್ಗೆ. ಇವತ್ತಿಗೂ ನಮ್ಮ ದೇಶದಲ್ಲಿ, ಜನರ ಗುಂಪು ವ್ಯಕ್ತಿಯೊಬ್ಬನನ್ನು ಬಡಿದು ಸಾಯಿಸುವುದನ್ನು `ಕೊಲೆ’ ಎಂದು ಪರಿಗಣಿಸಿ ಶಿಕ್ಷಿಸುವ ಕಾನೂನುಗಳಿಲ್ಲ. ವಿಪರ್ಯಾಸವೆಂದರೆ, ಬಹಳಷ್ಟು ಪ್ರಕರಣಗಳಲ್ಲಿ ಹೀಗೆ ಕೊಲೆ ಮಾಡಿದವರ ಮೇಲೆ ಕೇಸು ದಾಖಲಿಸಿಕೊಳ್ಳುವುದಕ್ಕಿಂತ ಹಲ್ಲೆಗೀಡಾದ ವ್ಯಕ್ತಿ ಅಥವಾ ಕೊಲೆಯಾದ ವ್ಯಕ್ತಿಯ ಕುಟುಂಬದ ಮೇಲೆ, ಯಾವ ಆಪಾದನೆ ಮೇಲೆ ಹಲ್ಲೆ ನಡೆಸಲಾಗಿರುತ್ತೊ, ಆ ಆರೋಪವನ್ನೇ ಹೊರಿಸಿ ದೂರು ದಾಖಲಿಸಿಕೊಳ್ಳಲಾಗಿರುತ್ತೆ. ಇವತ್ತಿಗೂ ದಾದ್ರಿಯಲ್ಲಿ ಹತ್ಯೆಗೀಡಾದ ಅಖ್ಲಾಕ್‍ನ ಕುಟುಂಬಸ್ಥರು ಅಕ್ರಮವಾಗಿ ದನದ ಮಾಂಸ ಸಂಗ್ರಹಿಸಿಟ್ಟಿದ್ದ ದೂರು ಎದುರಿಸುತ್ತಿದ್ದಾರೆಯೇ ವಿನಾಃ, ಕೊಲೆ ಮಾಡಿದವರು ಕೇಸಿಗ ಹಂಗಿಲ್ಲದೆ ಆರಾಮಾಗಿದ್ದಾರೆ!
ಎಷ್ಟೋ ಪ್ರಕರಣಗಳಲ್ಲಿ `ಸಿಟ್ಟಿಗೆದ್ದ ಜನರ ಗುಂಪಿನ ಮುಂದೆ ನಾವು ಅಸಹಾಯಕರಾಗಿದ್ದೆವು’ ಎಂದು ನೆಪ ನೀಡುವ ಪೊಲೀಸರ ಸಮ್ಮುಖದಲ್ಲೇ ಕೊಲೆಗಳು ನಡೆದಿರುತ್ತವೆ. `ಸಾರ್ವಜನಿಕ ಬಡಿದು ಕೊಲ್ಲುವ’ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯೇ ನಮ್ಮ ನ್ಯಾಶನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೊ ಬಳಿ ಇಲ್ಲ. ಅಂತಹ ಇರಾದೆಯೂ ಸರ್ಕಾರಕ್ಕಿಲ್ಲವಂತೆ. ಅಂದರೆ ಸರ್ಕಾರಗಳು ಇಂತವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಾಯ್ತು. ಈ ನಮ್ಮ ಕಾನೂನು ವ್ಯವಸ್ಥೆ ಮೊದಲು ಬದಲಾಗಬೇಕು. ಆ ದಿಕ್ಕಿನತ್ತ ನಮ್ಮ ಆಕ್ರೋಶಗಳಿರಬೇಕು.
ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ, ಮುಸ್ಲೀಮರ ಮೇಲೆ ಈ ಬಗೆಯ ಹಲ್ಲೆಗಳು ಹೆಚ್ಚಾದ ನಂತರ ಇವುಗಳನ್ನು ನಿಗ್ರಹಿಸಲು `ಮಾನವ ಸುರಕ್ಷಾ ಕಾನೂನು’ ಹೆಸರಿನಲ್ಲಿ ಕಾಯ್ದೆ ಜಾರಿಗೆ ತರಬೇಕೆಂದು ಕೆಲ ಹೋರಾಟಗಾರರು ಅಭಿಯಾನ ನಡೆಸಿದ್ದರು. ಆಗ ಕೇಂದ್ರ ಸರ್ಕಾರ ಅಂತಹ ಕಾನೂನು ತರುವ ಪ್ರಸ್ತಾಪವನ್ನೇ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿತ್ತು. ಅಲ್ಲಿಗೆ ಸರ್ಕಾರವೇ ಇವುಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರೋದು ಸಾಬೀತಾಗುತ್ತದೆ. ನಾವೀಗ ತುರ್ತಾಗಿ ಮಾನವ ಸುರಕ್ಷಾ ಕಾನೂನಿನ ಕೂಗುಗಳಿಗೆ ದನಿಗೂಡಿಸಿ, ಅದನ್ನು ಚಳವಳಿಯಾಗಿಸಬೇಕಿದೆ. ಯಾಕೆಂದರೆ ಸಾಂವಿಧಾನಿಕ ಕಾನೂನುಗಳು ಮಾತ್ರ ಇವುಗಳಿಗೆ ನಿರ್ಬಂಧ ಹೇರಬಲ್ಲವೇ ವಿನಾಃ ತತ್ಕಾಲಿಕ ಆಕ್ರೋಶಗಳು ಸಮಸ್ಯೆಯನ್ನು ಹೋಗಲಾಡಿಸಲಾರವು.
ಇಂತಹ ಪ್ರಕರಣಗಳಲ್ಲಿ ಹಲ್ಲೆಗೊಳಗಾದ ಸಂತ್ರಸ್ತರ ಹಿನ್ನೆಲೆಯ ಗಮನಿಸಿದಾಗ, ಅವರು ದಲಿತರೋ, ಅಲ್ಪಸಂಖ್ಯಾತರೊ, ಅಲೆಮಾರಿ ಬುಡಕಟ್ಟಿನವರೋ ಅಥವಾ ಅಸಹಾಯಕ ಭಿಕ್ಷುಕ, ಮಾನಸಿಕ ಅಸ್ವಸ್ಥರೋ ಆಗಿರುತ್ತಾರೆ. ದಾದ್ರಿ, ಊನಾ ಅಥವಾ ಮಂಗಳೂರಿನ ಹುಸೈನಬ್ಬ ಪ್ರಕರಣಗಳು ಇದನ್ನು ಸಾಬೀತು ಮಾಡುತ್ತವೆ. ಅಷ್ಟೇ ಯಾಕೆ, ಇತ್ತೀಚೆಗೆ ಮಕ್ಕಳು ಕಳ್ಳರೆಂದು ಹತ್ಯೆಗೊಳಗಾದವರಲ್ಲಿ ಬಹುತೇಕರು ಭಿಕ್ಷುಕರು ಮತ್ತು ಅಲೆಮಾರಿ ಬುಡಕಟ್ಟು ಜನರು. ಅಂದರೆ ಈ `ಬಡಿದು ಕೊಲ್ಲುವ’ ಪಿಡುಗುಗಳು ಒಂದು `ಸೋಶಿಯಲ್ ಪ್ಯಾಟರ್ನ್’ ಅನುಸರಿಸುತ್ತಿವೆ ಎನ್ನಬಹುದು. ಬೇರೆಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ರೂಪದಲ್ಲಿ ಈ ಸಮುದಾಯಗಳ ಮೇಲೆ ಅಸಹನೆ ಕಾರುತ್ತಾ ಬಂದಿರುವ ಕೂಟಗಳ ಹುನ್ನಾರವನ್ನು ಇದರೊಟ್ಟಿಗೆ ನಾವು ಸಮೀಕರಿಸಿದ್ದೇ ಆದಲ್ಲಿ, ನಾವು ತುರ್ತಾಗಿ ನಮ್ಮ ಆಕ್ರೋಶವನ್ನು ಎತ್ತ ತಿರುಗಿಸಬೇಕಿದೆ ಎಂಬುದು ಮನದಟ್ಟಾಗುತ್ತದೆ.
ಈ ವಿದ್ಯಮಾನವನ್ನು ವಿಶ್ಲೇಷಿಸುತ್ತಾ ನ್ಯೂಸ್‍ಕ್ಲಿಕ್ ಆನ್‍ಲೈನ್ ಪತ್ರಿಕೆ ಒಂದು ಅದ್ಭುತ ಮಾತು ಹೇಳಿದೆ, `ಸುಳ್ಳು ಸುದ್ದಿಗಳು ಎಲ್ಲಾ ಕಾಲದಲ್ಲಿಯೂ ಪ್ರಚಲಿತದಲ್ಲಿರುತ್ತವೆ. ಆಗೆಲ್ಲ ಅವು ನಮ್ಮನ್ನು ತತ್‍ಕ್ಷಣಕ್ಕೆ ಭೀತಿಗೊಳಿಸುವುದಕ್ಕಷ್ಟೇ ಸೀಮಿತವಾಗಿರುತ್ತವೆ. ಆದರೆ ಯಾವಾಗ, ಅವುಗಳಿಗೆ ಪೂರಕವಾಗಿ ಸಮಾಜದಲ್ಲಿ ಮೊದಲೇ ಸಾಮರಸ್ಯ ಕದಡಿದ ಒಡಕು ಮೂಡಿದ್ದು, ಒಂದು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುತ್ತೋ ಆಗ ಮಾತ್ರ ಅವು ಹೀಗೆ ಜೀವಘಾತಕ ರೂಪ ಪಡೆದು ಆತಂಕವನ್ನು ಉಂಟು ಮಾಡುತ್ತವೆ’. 2014ರ ನಂತರ ದೇಶ ಈಡಾಗಿರುವ ಪ್ರಕ್ಷಬ್ಧುತೆ ಮತ್ತು ಅಧಿಕಗೊಳ್ಳುತ್ತಿರುವ ಇಂತಹ ಪ್ರಕರಣಗಳ ನಡುವಿನ ಬಾಂಧವ್ಯವನ್ನು ಇದು ಬಿಚ್ಚಿಡುತ್ತಿದೆ.
ಯಾವ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಕೋಮುವಾದದ ಉನ್ಮಾದವನ್ನು ಜನರ ತಲೆಗೆ ತುಂಬಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದಿದ್ದರೋ, ಅದೇ ಸೋಶಿಯಲ್ ಮೀಡಿಯಾಗಳ ಮೂಲಕ ಅವರ ಬಂಡವಾಳವನ್ನು ಬಯಲುಗೊಳಿಸುತ್ತಿರುವ ಪ್ರಯತ್ನಗಳು ಚುರುಕು ಪಡೆಯುತ್ತಿರುವ ಹೊತ್ತಿನಲ್ಲೇ, ಜನರು ಸಾರಾಸಗಟಾಗಿ ಸೋಶಿಯಲ್ ಮೀಡಿಯಾಗಳ ಸಂದೇಶಗಳನ್ನೇ ನಂಬದಿರುವಂತೆ ವಾತಾವರಣ ಸೃಷ್ಟಿಯಾಗುತ್ತಿರುವುದರ ಹಿಂದಿರಬಹುದಾದ ಹುನ್ನಾರವನ್ನೂ ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಈ ವಿಚಾರವನ್ನು ನಾವು ಹೀಗೆ ಆಲೋಚಿಸಬೇಕಾದ್ದು ಜಾಣತನ. ಅಂತಹ ಜಾಣಜಾಣೆಯರು ದೊಡ್ಡ ಸಂಖ್ಯೆಯಲ್ಲಿ ನಮ್ಮ ಸಮಾಜಕ್ಕೆ ತುರ್ತಾಗಿ ಬೇಕಾಗಿದ್ದಾರೆ.

– ಸಂಪಾದಕ ಮಂಡಳಿ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial